ಮೂಡಿಗೆರೆ:ಹಿರಿಯ ರಾಜಕೀಯ ಮುತ್ಸದ್ದಿ ಮಾಜಿ ವಿಧಾನಸಭಾದ್ಯಕ್ಷ ಡಿ.ಬಿ.ಚಂದ್ರೇಗೌಡರ ಸ್ಮಾರಕವನ್ನು ಶನಿವಾರ ಲೋಕಾರ್ಪಣೆ ಮಾಡಲಾಯಿತು.
ಡಿ.ಬಿ.ಚಂದ್ರೇಗೌಡ ಅವರ ಮೊದಲನೆ ವರ್ಷದ ಪುಣ್ಯತಿಥಿ ಅಂಗವಾಗಿ ದಾರದಹಳ್ಳಿ ಗ್ರಾಮದಲ್ಲಿರುವ ಡಿ.ಬಿ.ಚಂದ್ರೇಗೌಡ ಅವರ ಒಡೆತನದ ಪೂರ್ಣಚಂದ್ರ ಎಸ್ಟೇಟ್ನ ಅವರ ಸಮಾಧಿ ಸ್ಥಳದಲ್ಲಿ ನಿರ್ಮಿಸಿರುವ ಸ್ಮಾರಕವನ್ನು ಅವರ ಪತ್ನಿ ಪೂರ್ಣ ಅವರು ದೀಪಬೆಳಗುವ ಮೂಲಕ ಅನಾವರಣಗೊಳಿಸಿದರು.
ಈ ವೇಳೆ ಸಾಹಿತಿ ಹಳೇಕೋಟೆ ರಮೇಶ್ ಅವರು ಮಾತನಾಡಿ ಡಿ.ಬಿ. ಚಂದ್ರೇಗೌಡರು ರಾಜ್ಯ ಮತ್ತು ರಾಷ್ಟ್ರದ ಅಪರೂಪದ ರಾಜಕಾರಣಿಯಾಗಿದ್ದರು. ಲೋಕಸಭೆ, ರಾಜ್ಯಸಭೆ, ವಿಧಾನಸಭೆ ಮತ್ತು ವಿಧಾನಪರಿಷತ್, ಈ ನಾಲ್ಕೂ ಸದನಗಳ ಸದಸ್ಯರಾಗಿ,ವಿರೋಧ ಪಕ್ಷದ ನಾಯಕರಾಗಿ, ಸಭಾಪತಿಯಾಗಿ, ಸಚಿವರಾಗಿ ಅವರ ಅವರ ರಾಜಕೀಯ ಜೀವನ ಅತ್ಯಂತ ಸ್ಪುಟವಾಗಿ ಮತ್ತುಪ್ರಾಮಾಣಿಕವಾಗಿತ್ತು. ಆಳವಾದ ಜ್ಞಾನವನ್ನು ಹೊಂದಿದ್ದ ಅಪರೂಪದ ನಾಯಕರಾಗಿದ್ದ ಅವರು ಕುವೆಂಪು ಅವರ ವಿಚಾರಗಳಿಂದ ಪ್ರಭಾವಿತರಾಗಿದ್ದರು ಎಂದರು.
ಚoದ್ರೇಗೌಡರ ಪುತ್ರಿ ಮತ್ತು ಮುಂಬೈ ಹೈ ಕೋರ್ಟ್ ವಕೀಲೆ ವೀಣಾ ಅವರು ಮಾತನಾಡಿ ನಮ್ಮ ತಂದೆಯವರು ತಮ್ಮ ಆತ್ಮಕಥನದಲ್ಲಿ ಹೇಳಿಕೊಂಡಿರುವoತೆ ಸಾಮಾನ್ಯರಲ್ಲಿ ಸಾಮಾನ್ಯನಾಗಿ ಮಲೆನಾಡಿನಲ್ಲಿ ಹುಟ್ಟಿಬೆಳೆದ ಕಾಡು ಸಸಿ ನಾನು ಎಂಬoತೆ ಅವರಿಗೆ ಮಲೆನಾಡೆಂದರೆ ಅದರಲ್ಲೂ ಚಿಕ್ಕಮಗಳೂರು, ಮೂಡಿಗೆರೆ ಎಂದರೆ ವಿಶೇಷ ಪ್ರೀತಿ ಮತ್ತು ಆಕರ್ಷಣೆಯಿತ್ತು.
ಇಲ್ಲಿನ ಪರಿಸರ ಅವರ ಬದುಕಿನ ಮೇಲೆ ಗಾಢವಾದ ಪ್ರಭಾವ ಬೀರಿತ್ತು. ಹಾಗಾಗಿ ಅವರ ಸ್ಮಾರಕದಲ್ಲಿ ನಾಡಿನ ಜೀವನದಿಗಳಾದ ಹೇಮಾವತಿ, ತುಂಗಾ, ಭದ್ರ, ಕಾವೇರಿ ಮತ್ತು ನೇತ್ರಾವತಿ ನದಿಗಳಿಂದ ಆಯ್ದ ಶಿಲೆಗನ್ನು ಬಳಸಲಾಗಿದೆ ಎಂದು ತಿಳಿಸಿದರು.
ಮಾಜಿ ಸಭಾಪತಿ ಬಿ.ಎಲ್.ಶಂಕರ್, ಚಿಕ್ಕಮಗಳೂರುನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎಂ.ಎಲ್. ಮೂರ್ತಿ,ಮೂಡಿಗೆರೆ ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಹಳಸೆ ಶಿವಣ್ಣ, ಮೂಡಿಗೆರೆತಾ.ಪಂ. ಮಾಜಿ ಅಧ್ಯಕ್ಷ ಡಿ.ಬಿ.ಜಯಪ್ರಕಾಶ್,ಯು.ಎನ್.ಚಂದ್ರೇಗೌಡ ಸೇರಿದಂತೆ ಅನೇಕ ಗಣ್ಯರು, ಡಿ.ಬಿ.ಚಂದ್ರೇಗೌಡರ ಅಭಿಮಾನಿಗಳು, ಕುಟುಂಬದ ಸದಸ್ಯರು,ಬಂಧುಗಳು, ಗ್ರಾಮಸ್ಥರು ಸ್ಮಾರಕಕ್ಕೆ ಭೇಟಿ ನೀಡಿ ತಮ್ಮ ಗೌರವ ನಮನ ಸಲ್ಲಿಸಿದರು.
ಶ್ರೀಮತಿ ರೇಷ್ಮಾ ಸುಧೀರ್ ಅವರು ಕುವೆಂಪು ಅವರ ಓ ನನ್ನ ಚೇತನ ಗೀತೆಯ ಮೂಲಕ ಗೀತಾ ನಮನ ಸಲ್ಲಿಸಿದರು.
——————ವಿಜಯ್ ಕುಮಾರ್ ಟಿ