ತುಮಕೂರು:ರಾಜಕೀಯ ಪಕ್ಷಗಳು ಚುನಾವಣೆ ಸಂದರ್ಭದಲ್ಲಿ ಒಳಮೀಸಲಾತಿ ಜಾರಿಗೊಳಿ ಸುತ್ತೇವೆ ಎಂದು ಹೇಳುವುದು, ನಂತರ ಸುಮ್ಮನಾಗುವುದು ಹೀಗೇ ನಿರಂತರವಾಗಿ ನಮ್ಮ ಜನಾಂಗದ ಮುಗ್ದತೆಯನ್ನು ವೋಟ್ ಬ್ಯಾಂಕ್ಗಾಗಿ ಬಳಸಿಕೊಂಡು ಚುನಾವಣೆ ಮುಗಿದ ನಂತರ ಒಳಮೀಸಲಾತಿ ವಿಚಾರ ಮರೆಯುತ್ತಾರೆ ಎಂದು ವಕೀಲರಾದ ಕೆ.ಸಿ. ವೆಂಕಟೇಶ್, ರoಗಧಾಮಯ್ಯ, ಗೋವಿಂದರಾಜು, ಹರೀಶ್, ರಾಮಾಂಜನಯ್ಯ,ಲಿoಗರಾಜು, ಕೆ.ಎನ್.ಹರೀಶ್, ಮರಿಚೆನ್ನಮ್ಮ ಮತ್ತಿತರರು ಆಕ್ರೋಶ ವ್ಯಕ್ತಪಡಿಸಿದರು.
ಅಸ್ಪೃಶ್ಯ ಜನಾಂಗದ ವಕೀಲ ಮಿತ್ರರ ಒಳಮೀಸಲಾತಿ ಹೋರಾಟ ಸಮಿತಿ ನೇತೃತ್ವದಲ್ಲಿ ವಕೀಲರು ಸೋಮವಾರ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿ ಮಾಧ್ಯಮದವರೊಂದಿಗೆ ಮಾತನಾಡಿದರು.
ಸುಪ್ರೀಂ ಕೋರ್ಟ್ ಆದೇಶದಂತೆ ಮತ್ತು ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗದ ವರದಿಯ ಅನುಸಾರದಂತೆ ಒಳಮೀಸಲಾತಿ ಜಾರಿಗೊಳಿಸಬೇಕು ಎಂದು ರಾಜ್ಯ ಸರ್ಕಾರವನ್ನು ಆಗ್ರಹಿಸಿದರು.
ಪರಿಶಿಷ್ಟ ಜಾತಿಗಳ ಒಳಮೀಸಲಾತಿಗಾಗಿ 30 ವರ್ಷಗಳಿಂದಲೂ ಹೋರಾಟ ಮಾಡಿಕೊಂಡು ಬರಲಾಗುತ್ತಿದೆ. ಅಸ್ಪೃಶ್ಯರು ಸಮಾಜದಲ್ಲಿ ಅನುಭವಿಸುತ್ತಿರುವ ಶೋಷಣೆ, ಅವಕಾಶ ವಂಚನೆ, ಹಾಗೂ ತುಳಿತಕ್ಕೊಳಗಾದವರನ್ನು ಸಮಾಜದ ಮುಖ್ಯವಾಹಿನಿಗೆ ತರಬೇಕು ಎಂಬುದು ಸಂವಿಧಾನ ರಚನೆ ಮಾಡಿದ ಡಾ.ಬಿ.ಆರ್.ಅಂಬೇಡ್ಕರ್ ಆಶಯವಾಗಿದೆ.ಅದರಂತೆ ಪರಿಶಿಷ್ಟ ಜನಾಂಗದಲ್ಲಿರುವ 101 ಜಾತಿಗಳಿಗೆ ಜನಸಂಖ್ಯೆ ಆಧಾರದಲ್ಲಿ ಅವಕಾಶ, ಸವಲತ್ತು ದೊರೆಯಬೇಕು ಎಂದು ಹೇಳುವ ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿಯನ್ನು ಅನುಸರಿಸಿ ಒಳಮೀಸಲಾತಿ ವರ್ಗೀಕರಣ ಮಾಡಿ ಜಾರಿ ಮಾಡಬೇಕು ಎಂದು ಒತ್ತಾಯ ಮಾಡಿದರು.
ಪರಿಶಿಷ್ಟಜಾತಿಗಳಿಗೆ ಮೀಸಲಾತಿಯು ಅಸಮಾನವಾಗಿ ಹಂಚಿಕೆ ಆಗುತ್ತಿರುವುದನ್ನು ತಡೆದು ನ್ಯಾಯಯುತವಾಗಿ ಪೂರಕ ಅವಕಾಶ ಕಲ್ಪಿಸಬೇಕು ಎಂದುದು ಒಳಮೀಸಲಾತಿ ಒತ್ತಾಯಕ್ಕೆ ಮುಖ್ಯ ಕಾರಣ. ಪರಿಶಿಷ್ಟರ ಪಾಲಿನ ಅತಿ ಹೆಚ್ಚಿನ ಪಾಲನ್ನು ಪರಿಶಿಷ್ಟರ ಗುಂಪಿನಲ್ಲಿರುವ ಸ್ಪರ್ಶ ಜನಾಂಗದವರು ಪಡೆದುಕೊoಡು ಉಳಿದವರಿಗೆ ಅನ್ಯಾಯವಾಗುತ್ತಿದೆ. ಅಸ್ಪೃಶ್ಯ ಜಾತಿಯವರು ಇಂದೂ ಅವಕಾಶಗಳಿಂದ ದೂರ ಉಳಿದಿದ್ದಾರೆ. ಸುಪ್ರೀಂ ಕೋರ್ಟ್ ಇತ್ತೀಚೆಗೆ ಒಳಮೀಸಲಾತಿ ಜಾರಿ ಬಗ್ಗೆ ಆಯಾ ರಾಜ್ಯ ಸರ್ಕಾರ ತೀರ್ಮಾನಿಸಬಹುದು ಎಂದು ತಿಳಿಸಿದೆ. ಅದರಂತೆ ಈ ಸಮಾಜದ ಜಾತಿಯ ಜನಸಂಖ್ಯೆಗೆ ಆಧಾರದಲ್ಲಿ ಸವಲತ್ತು ಸಿಗಬೇಕು.
ಸರ್ಕಾರ ಕೂಡಲೇ ಕ್ಯಾಬಿನೆಟ್ನಲ್ಲಿ ಒಳಮೀಸಲಾತಿ ಬಗ್ಗೆ ತೀರ್ಮಾನ ತೆಗೆದುಕೊಂಡು ಜಾರಿ ಮಾಡಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.
ಒಳಮೀಸಲಾತಿ ಡಾ.ಅಂಬೇಡ್ಕರ್ ಅವರ ಸಿದ್ಧಾಂತದ ಭಾಗವೇ ಆಗಿದೆ.ಒಳಮೀಸಲಾತಿ ಜಾರಿಯಾದರೆ ಯಾವ ದಲಿತ ಜಾತಿಯೂ ಮೀಸಲಾತಿ ಕಳೆದುಕೊಳ್ಳುವುದಿಲ್ಲ, ಆದರೆ ಜನಸಂಖ್ಯೆ ಹಾಗು ಪ್ರಾತಿನಿಧ್ಯದ ಆಧಾರದಲ್ಲಿ ಮೀಸಲಾತಿ ಪ್ರಮಾಣದ ಮರು ವಿಂಗಡಣೆಯಾ ಗುತ್ತದೆ ಎಂದು ತಿಳಿಸಿದರು.
ನಂತರ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅವರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಿದರು.
ವಕೀಲ ಮುಖಂಡರಾದ ಕೆ.ಎನ್.ಹರೀಶ್, ರಾಮಾಂಜನೇಯ, ಕೆ.ಸಿ.ವೆಂಕಟೇಶ್,ರoಗಧಾಮಯ್ಯ, ನಾಗೇಶ್,ಹೆಲ್.ಎಲ್.ವಸಂತ್ ಕುಮಾರ್,ನಾಗರಾಜು, ಹರೀಶ್, ಪಾಲಯ್ಯ,ಸುಮಲತ, ಮಂಜುಳಾ, ಮಂಗಳ, ಓಬಳೇಶ್, ಜಗದೀಶ್, ನಾಗೇಶ್ ಮೊದಲಾದವರು
ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.