ಮೂಡಿಗೆರೆ-ರಾಷ್ಟ್ರ ಮಟ್ಟದಲ್ಲಿ ಅತಿಹೆಚ್ಚು ಪದಕ ಗೆದ್ದ ಕರಾಟೆ ಶಾಲೆ-25ವರ್ಷಕ್ಕೂ ಹೆಚ್ಚಿನ ಪರಿಶ್ರಮ ಫಲ ತಂದಿದೆ;ಶಿಕ್ಷಕ ಸೆನ್ ಸಾಯ್ ರಾಜೇಂದ್ರನ್

ಕೇರಳದ ಕಲ್ಲಿಕೋಟೆಯಲ್ಲಿ ಭಾನುವಾರ ನಡೆದ ರಾಷ್ಟ್ರೀಯ ಕರಾಟೆ ಪಂದ್ಯಾವಳಿಯಲ್ಲಿ ಮೂಡಿಗೆರೆಯ ಇಂಟರ್ ನ್ಯಾಷನಲ್ ಅಕಾಡಮಿ ಆಫ್ ಟ್ರೆಡಿಷನಲ್ ಮಾರ್ಷಲ್ ಆರ್ಟ್ ಕರಾಟೆ ಸಂಸ್ಥೆಗೆ 12 ಚಿನ್ನ, 14 ಬೆಳ್ಳಿ ಹಾಗೂ 17 ಕಂಚಿನ ಪದಕಗಳು ಪಡೆಯುವ ಮೂಲಕ ರಾಷ್ಟ್ರಮಟ್ಟದಲ್ಲಿ ಸಮಗ್ರ ಪ್ರಶಸ್ತಿ ಪಡೆದಂತಾಗಿದೆ.

ಬಾನುವಾರ ಕಲ್ಲಿಕೋಟೆಯ ವಿ.ಕೆ.ಕೃಷ್ಣಮೆನನ್ ಇಂಡೋರ್ ಸ್ಟೇಡಿಯoನಲ್ಲಿ ಶೊಟೊಕಾನ್ ಅಕಾಡಮಿ ಆಫ್ ಇಂಡಿಯಾ ನ್ಯಾಷನಲ್ ಸಂಸ್ಥೆ ಆಯೋಜಿಸಲಾಗಿದ್ದ ಓಪನ್ ಕರಾಟೆ ಚಾಂಪಿಯನ್‌ಶಿಪ್ ಪoದ್ಯಾವಳಿಯಲ್ಲಿ ವಿವಿಧ ರಾಜ್ಯಗಳಿಂದ 1600 ಮಂದಿ ಕರಾಟೆ
ಪಟುಗಳು ಪಂದ್ಯದಲ್ಲಿ ಭಾಗವಹಿಸಿ 52 ವಿವಿಧ ಶೈಲಿಯ ಕರಾಟೆ ಪ್ರದರ್ಶಿಸಿದರು.

ಈ ಪಂದ್ಯದಲ್ಲಿ ಮೂಡಿಗೆರೆಯಿಂದ 43 ಬ್ಲಾಕ್ ಬೆಲ್ಟ್ ಪಟುಗಳು ಭಾಗವಹಿಸಿದ್ದರು. ವಿಜೇತರಿಗೆ ಇಂಟರ್ ನ್ಯಾಷನಲ್ ಅಕಾಡಮಿ ಆಫ್ ಟ್ರೆಡಿಷನಲ್ ಮಾರ್ಷಲ್ ಆರ್ಟ್ ಕರಾಟೆ ಸಂಸ್ಥೆಯ ಮುಖ್ಯ ಶಿಕ್ಷಕ ಸೆನ್‌ಸಾಯ್ ರಾಜೇಂದ್ರನ್, ಬೇಬಿಲತಾ, ಪೂಜಿತ್, ಅಶ್ವಿನಿ ಚಂದ್ರ ಇವರು ತರಬೇತಿ ನೀಡಿದ್ದರು.

ಪ್ರಶಸ್ತಿ ಪಡೆದ ನಂತರ ಅಕಾಡಮಿ ಮುಖ್ಯ ತರಬೇತುದಾರ ಸೆನ್ ಸಾಯ್ ರಾಜೇಂದ್ರನ್ ಮಾತನಾಡಿ, ನಮ್ಮ ಅಕಾಡಮಿಯಿಂದ 43 ಸ್ಪರ್ಧಾರ್ಥಿಗಳು ಕೇರಳದ ಕೋಜಿಕ್ಕೋಡ್ ಗೆ ತೆರಳಿದ್ದು ಎಲ್ಲರೂ ಪದಕ ಪಡೆದು ಸಾಧನೆ ಮಾಡಿದ್ದಾರೆ.ಅಲ್ಲಿ ನಡೆದ ರಾಷ್ಟ್ರೀಯ ಪಂದ್ಯಾವಳಿಯಲ್ಲಿ ಅತಿಹೆಚ್ಚು ಪ್ರಶಸ್ತಿ ನಮ್ಮ ಸಂಸ್ಥೆಗೆ ಬಂದಿರುವುದು ವೈಯುಕ್ತಿಕವಾಗಿ ನಮಗೆ ಹಾಗೂ ರಾಜ್ಯಕ್ಕೂ ಹೆಮ್ಮೆ ತಂದಿದೆ.

30ವರ್ಷಗಳ ಹಿಂದೆ ಪ್ರಾರಂಭಿಸಿದ ನಮ್ಮ ಕರಾಟೆ ತರಬೇತಿ ಸಂಸ್ಥೆ ಮೂಡಿಗೆರೆಯಲ್ಲಲ್ಲದೆ ನೆರೆಯ ಸಕಲೇಶಪುರ ಮತ್ತು ಹಾನುಬಾಳಲ್ಲಿ ಕೂಡಾ ಕರಾಟೆ ಕಲಿಯುವ ಆಸಕ್ತರಿಗೆ ತರಬೇತಿ ನೀಡುತ್ತಿದ್ದು ಹಾಲಿ 700 ಮಂದಿ ಕರಾಟೆ ತರಬೇತಿ ಪಡೆಯುತ್ತಿದ್ದಾರೆ. ಇದುವರೆಗೆ 15ಸಾವಿರಕ್ಕೂ ಹೆಚ್ಚಿನ ಮಂದಿ ನಮ್ಮ ಸಂಸ್ಥೆಯಿoದ ತರಬೇತಿ ಪಡೆದು ಬ್ಲಾಕ್ ಬೆಲ್ಟ್ ಡಾನ್ ಹಂತ ತಲುಪಿದ್ದಾರೆ ಎಂದು ತಿಳಿಸಿದರು.

25ವರ್ಷಕ್ಕೂ ಮೇಲ್ಪಟ್ಟ ಬ್ಲಾಕ್ ಬೆಲ್ಟ್ ಡಾನ್ ವಯೋಮಿತಿಯ ವಿಭಾಗದಲ್ಲಿ ಮೂಡಿಗೆರೆಯ ಇಂಟರ್ ನ್ಯಾಷನಲ್ ಅಕಾಡಮಿ ಆಫ್ ಟ್ರೆಡಿಷನಲ್ ಮಾರ್ಷಲ್ ಆರ್ಟ್ಸ್ ಸಂಸ್ಥೆಯ ಶಿಕ್ಷಕಿ ಸೆನ್‌ಸಾಯ್ ಬೇಬಿ ಲತಾ ಪ್ರಥಮ ಸ್ಥಾನಗಳಿಸಿ ಚಿನ್ನದ ಪದಕ ಪಡೆದರೆ, ಪಟ್ಟಣದ ಬೆಥನಿ ಶಾಲೆಯ 9ನೇ ತರಗತಿಯಲ್ಲಿ ವ್ಯಾಸಂಗಮಾಡುತ್ತಿರುವ ಅವರ ಪುತ್ರಿ ಕರಾಟೆ ಶಿಕ್ಷಕಿ ಬ್ಲಾಕ್ ಬೆಲ್ಟ್ ಡಾನ್ ಅಶ್ವಿನಿ ಚಂದ್ರ ಕಿರಿಯ ವಯಸ್ಸಿನ ವಿಭಾಗದಲ್ಲಿ ಚಿನ್ನದ ಪದಕ ಪಡೆದಿರುವುದು ವಿಶೇಷವಾಗಿದೆ. ಒಟ್ಟಿನಲ್ಲಿ ಕರಾಟೆ ಶಿಕ್ಷಕ ಸೆನ್ ಸಾಯ್ ರಾಜೇಂದ್ರನ್ ಕುಟುಂಬದ ಎಲ್ಲರೂ ಕರಾಟೆ ಪಟುಗಳಾಗಿ ಹೊರಹೊಮ್ಮಿರುವುದು ಅತಿ ವಿಶೇಷವಾಗಿದೆ.

————–ವಿಜಯಕುಮಾರ್.ಟಿ.ಮೂಡಿಗೆರೆ

Leave a Reply

Your email address will not be published. Required fields are marked *

× How can I help you?