ಮೈಸೂರು-‘ಮಕ್ಕಳಿಗೆ ಶಾಲೆಗಳು ಅಕ್ಷರದ ಜೊತೆ ಸಂಸ್ಕಾರ ನೀಡುವಂತಾಗಬೇಕು’ಖ್ಯಾತ ಕವಿ ಡಾ.ಜಯಪ್ಪ ಹೊನ್ನಾಳಿ ಅಭಿಮತ

ಮೈಸೂರು-‘ಇಂದಿನ ವಿದ್ಯಾರ್ಥಿಗಳಿಗೆ ‘ಮಾರ್ಕುಗಳಿಗಿಂತ ರಿಮಾರ್ಕ್ಸ್ ಇಲ್ಲದ ಜೀವನ ಬಹು ಮುಖ್ಯವಾದುದೆಂದೂ,ಅಕ್ಷರಕ್ಕಿಂತ ಮುಖ್ಯವಾದದ್ದು ಸಂಸ್ಕಾರವೆoದೂ ಹೇಳಬೇಕಾದ ತುರ್ತು ಪರಿಸ್ಥಿತಿ ಹಿಂದೆoದಿಗಿoತ ಇಂದು ಹೆಚ್ಚಾಗಿದ್ದು, ಇದನ್ನು ಶಾಲೆಗಳು ಪ್ರಾಮಾಣಿಕವಾಗಿ ಮಾಡಬೇಕಾಗಿದೆ.ಇಲ್ಲದೇ ಹೋದಲ್ಲಿ ಶಾಲೆಗಳಲ್ಲಿ ಹೃದಯವಂತ ಮಕ್ಕಳು ನಿರ್ಮಾಣವಾಗದೇ ಉಸಿರಾಡುವ ಕಂಪ್ಯೂಟರ್‌ಗಳು ನಿರ್ಮಾಣವಾಗುತ್ತವೆ. ಹೃದಯಹೀನವಾದ ಅವುಗಳಿಂದ ಮಾನವೀಯವಾದ ಭಾರತವನ್ನು ಕಟ್ಟಲಾಗದು’ ಎಂದು ಖ್ಯಾತ ಕವಿ ಡಾ.ಜಯಪ್ಪ ಹೊನ್ನಾಳಿ ಅಭಿಪ್ರಾಯಿಸಿದರು.

ಮೈಸೂರಿನ ವಿಜಯನಗರದ ಡಿ.ಎಸ್‌.ಎಂ ವಿದ್ಯಾಸಂಸ್ಥೆಯ ಶ್ರೀ ಸಿದ್ದೇಶ್ವರ ಪ್ರೌಢಶಾಲೆಯಲ್ಲಿ ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ಆಯೋಜಿಸಿದ್ದ ‘ಮಕ್ಕಳ ಸಾಂಸ್ಕೃತಿಕ ಸಂಭ್ರಮ’ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು,‘ಇಂದಿನ ಸಮಾಜದಲ್ಲಿ ಹಣ ಮಾಲೀಕನಾಗಿ, ಗುಣ ಗುಲಾಮನಾಗಿರುವ ದುಃಸ್ಥಿತಿ ಬಂದಿದೆ. ಇದೇ ಸ್ಥಿತಿ ಮುಂದುವರೆದು, ಅಮಾನವೀಯವಾದ ಚಟುವಟಿಕೆಗಳು ಸಮುದಾಯದಲ್ಲಿ ಹೆಚ್ಚಾಗಬಾರದೆಂದರೆ, ನಮ್ಮಮಕ್ಕಳು ಫೇಸ್ ಬುಕ್, ಪಾಸ್ ಬುಕ್, ಚೆಕ್ ಬುಕ್‌ಗಳ ಅಸಹ್ಯ ಸಹವಾಸದಿಂದ ದೂರವಾಗಿ, ನಮ್ಮ ಸುಸಂಸ್ಕೃತಿ ಕಲಿಸುವ ಶಾಲಾ ಬುಕ್‌ಗಳಿಗೆ ಹತ್ತಿರವಾಗಬೇಕಿದೆ. ಅಕ್ಷರಗಳೊಂದಿಗೆ ಶಾಲೆಗಳು ಮಕ್ಕಳಿಗೆ ಮಾನವೀಯ ಮೌಲ್ಯಗಳನ್ನು ತಿಳಿಸಿ, ಮನುಷ್ಯತ್ವದ ಸಂಸ್ಕಾರವನ್ನೂ ಮಕ್ಕಳಿಗೆ ನೀಡಬೇಕಿದೆ. ಅವರು ಮುಂದೆ ಏನಾದರಾಗಲೀ, ಅದಕ್ಕೂ ಮೊದಲು ಅವರನ್ನು ಮಾನವರನ್ನಾಗಿ ಮಾಡಬೇಕಿದೆ’ ಎಂದು ತಿಳಿಸಿದರು.

ಕೃಷಿಯನ್ನೇ ನಂಬಿ ಬದುಕುತ್ತಿರುವ ಈ ನೆಲದ ಕೃಷಿಕನ ಮಗನೀಗ ‘ಹುಯ್ಯೋ ಹುಯ್ಯೋ ಮಳೆರಾಯ, ಅಕ್ಕನ ತೋಟಕ್ಕೆ ನೀರಿಲ್ಲಾ’ ಹಾಡುವ ಬದಲು, ‘ರೇನ್ ರೇನ್ ಗೋ ಅವೇ’ಹಾಡುತ್ತಿರುವುದು ದೌರ್ಭಾಗ್ಯದ ವಿಚಾರ. ‘ಆಚಾರಕ್ಕರಸಾಗು ನೀತಿಗೆ ಪ್ರಭುವಾಗು ಮಾತಿನಲಿ ಚೂಡಾಮಣಿಯಾಗು ನನಕಂದ ಜ್ಯೋತಿಯೇ ಆಗು ಜಗಕ್ಕೆಲ್ಲ’ ಎನ್ನುತ್ತಿದ್ದ ಒಕ್ಕಲುಗಿತ್ತಿಯೀಗಆಂಗ್ಲದ ಆ ಹಾಡು ಕೇಳಿ ಅರ್ಥವಾಗದಿದ್ದರೂ ಅನಂದಿಸುತ್ತಿರುವುದು ವಿಷಾದನೀಯವಾದ ವಿಚಾರ ಎಂದರು.

ನಾವು ಸಾಂಸ್ಕೃತಿಕವಾಗಿ ದಿವಾಳಿಯಾಗುತ್ತಿರುವುದರ ಮುನ್ಸೂಚನೆಯಿದು.ಕನ್ನಡಿಗರಾದ ನಾವು ಈಗಲೂ ಎಚ್ಚೆತ್ತುಕೊಳ್ಳದಿದ್ದರೆ ಮುಂದೆ ನಮ್ಮನ್ನು ಅಧೋಗತಿ ಗೊಯ್ಯಲಿರುವ ದುರ್ದಿನಗಳನ್ನು ಅಸಹಾಯಕತೆಯಿಂದ ಎದುರಿಸಬೇಕಾಗುತ್ತದೆ ಎಂದು ಡಾ.ಜಯಪ್ಪ ಹೊನ್ನಾಳಿ ಬೇಸರ ವ್ಯಕ್ತಪಡಿಸಿದರು.

ಇದೇ ಸಂದರ್ಭದಲ್ಲಿ ಸಾಧಕರಾದ ನಂಜನಗೂಡು ತಾಲ್ಲೂಕಿನ ಅಕ್ಷರ ದಾಸೋಹ ಯೋಜನೆಯ ಸಹಾಯಕ ನಿರ್ದೇಶಕ ಬಿ.ಸೋಮಶೇಖರ್ ಹಾಗೂ ಡಿ.ಎಂ.ಪಾಳ್ಯದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಶ್ರೀಮತಿ ಹೆಚ್.ಸಿ.ಸುಬ್ಬಲಕ್ಷ್ಮಿ ಅವರನ್ನು ಅಭಿನಂದಿಸಿ ಸನ್ಮಾನಿಸಲಾಯಿತು.

ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.

ಸಂಘಟನೆಯ ಅಧ್ಯಕ್ಷ ಡಾ.ಎಂ.ಶಿವಸ್ವಾಮಿ ಪ್ರಾಸ್ತಾವಿಕ ನುಡಿಗಳನ್ನಾಡಿ ಸರ್ವರನ್ನೂ
ಸ್ವಾಗತಿಸಿದರು.

ಕಾರ್ಯದರ್ಶಿ ಹಾಗೂ ಯುವ ಕವಿ ಬಿ.ಡಿ.ಎಂ ಕುಮಾರ ನಿರೂಪಿಸಿದರೆ, ಶಿಕ್ಷಕ ಹರೀಶ್ ವಂದಿಸಿದರು.

ಪದಾಧಿಕಾರಿಗಳಾದ ಪಾರ್ವತಮ್ಮ, ಮಹದೇವಮ್ಮ, ರಾಣಿ ಮಾದಪ್ಪ, ಮಣಿಕಂಠ,ಲೀಲಾವತಿ ಯಾಲಕಯ್ಯ, ಕವಯತ್ರಿ ಶಾಂತಕುಮಾರಿ, ಉಮೇಶ್,ರಂಗಸ್ವಾಮಿ, ರತ್ನಮ್ಮ, ಚಂದ್ರಶೇಖರಯ್ಯ, ಅಲುಮೇಲಮ್ಮ,ಸಾಂಬಾಮೂರ್ತಿ, ಕೃಷ್ಣಶೆಟ್ಟಿ, ಚಿಕ್ಕಲಿಂಗಸ್ವಾಮಿ, ಕಮಲ ಕೆ., ಅನಿಲ್ ರಾಜ್,ಭಾಗೀರತಿ, ಚಿಕ್ಕಣ್ಣ, ಮಂಜುಳಾದೇವಿ, ವೆಂಕಟಮ್ಮ, ನಾಗರತ್ನಮ್ಮ,ಶಿಕ್ಷಕಿ ತನುಜ, ಶಿಕ್ಷಕರಾದ ಶಿವಮೂರ್ತಿ, ಮಹದೇವಸ್ವಾಮಿ,ಜಯರಾಜ್, ನಾಗಪ್ಪ ಹಾಗೂ ಬಿ.ಎಡ್. ಪ್ರಶಿಕ್ಷಣಾರ್ಥಿಗಳು ಮುಂತಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

× How can I help you?