ತುಮಕೂರು:ಕರ್ನಾಟಕ ಕಾರ್ಯನಿರತ ದಿನಪತ್ರಿಕೆಗಳ ಸಂಪಾದಕರ ಸಂಘ ಜಿಲ್ಲಾ ಘಟಕದ ವತಿಯಿಂದ ಮಂಗಳವಾರ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಹಿಮಂತರಾಜು ಅವರನ್ನು ಭೇಟಿ ಮಾಡಿ ಗ್ರಾಮ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ಪಟ್ಟಣ ಪಂಚಾಯಿತಿ, ಪುರಸಭೆ, ನಗರಸಭೆ ಸೇರಿದಂತೆ ಸರ್ಕಾರಿ ಇಲಾಖೆಗಳು ಹಾಗೂ ವಿವಿಧ ನಿಗಮ ಮಂಡಳಿಗಳ ಜಾಹೀರಾತುಗಳನ್ನು ವಾರ್ತಾ ಇಲಾಖೆಯ ಮೂಲಕವೇ ಬಿಡುಗಡೆ ಮಾಡಲು ಕ್ರಮ ಕೈಗೊಳ್ಳಬೇಕೆಂದು ಮನವಿ ಸಲ್ಲಿಸಲಾಯಿತು.
ಈ ವೇಳೆ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಟಿ.ಎಸ್.ಕೃಷ್ಣಮೂರ್ತಿ ಮಾತನಾಡಿ, ಜಿಲ್ಲೆಯಲ್ಲಿ ಹಲವು ಕಾಮಗಾರಿಗಳನ್ನು ಒಂದೇ ಟೆಂಡರ್ ಪ್ರಕಟಣೆಯಲ್ಲಿ ಕರೆದಾಗ ಜಾಹೀರಾತು ನೀತಿ 2013 , ಅನುಷ್ಠಾನ ನಿಯಮಗಳು 2014 ರ ನಿಯಮ 19 ರ ಟಿಪ್ಪಣಿಯಲ್ಲಿ
ನೀಡಿರುವ ಸೂಚನೆಯಂತೆ ಕಾಮಗಾರಿಗಳ ಮೌಲ್ಯಕ್ಕೆ ಅನುಗುಣವಾಗಿ ಅನ್ವಯವಾಗುವ ಜಿಲ್ಲಾ/ ಪ್ರಾದೇಶಿಕ ಮಟ್ಟದ ಪತ್ರಿಕೆಗಳಿಗೆ ಬಿಡುಗಡೆ ಮಾಡದೇ ಕೇವಲ ರಾಜ್ಯ ಮಟ್ಟದ ಪತ್ರಿಕೆಗಳಿಗೆ ಬಿಡುಗಡೆ ಮಾಡುತ್ತಿರುವ ನಿದರ್ಶನಗಳು ನಮ್ಮ ಕಣ್ಮುಂದೆ ಇವೆ. ಆದುದರಿಂದ ಎಲ್ಲಾ ಸರ್ಕಾರಿ/ ನಿಗಮ ಮಂಡಳಿಗಳ ಜಾಹೀರಾತುಗಳನ್ನು ವಾರ್ತಾ ಇಲಾಖೆಯ ಮೂಲಕವೇ ಕೊಡುವಂತೆ ಕ್ರಮ ಕೈಗೊಳ್ಳಲು ಮನವಿ ಮಾಡಿದರು.
ಸರ್ಕಾರದ 2017ಜನವರಿ 19ರ ತಿದ್ದುಪಡಿ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸುವುದರ ಮೂಲಕ ಟೆಂಡರ್ ಮತ್ತು ವರ್ಗೀಕೃತ ಜಾಹೀರಾತುಗಳನ್ನು ಆಯಾ ಕಾಮಗಾರಿಗಳ ಕನಿಷ್ಠ ಮತ್ತು ಗರಿಷ್ಠ ಮೊತ್ತವನ್ನು ಪರಿಗಣಿಸಿ ಅನ್ವಯವಾಗುವ ಜಿಲ್ಲಾ/ ಪ್ರಾದೇಶಿಕ/ ರಾಜ್ಯ ಮಟ್ಟದ ಪತ್ರಿಕೆಗಳಿಗೆ ಬಿಡುಗಡೆ ಮಾಡುವಂತೆ ಅಗ್ರಹಿಸಿದರು.
ವಾರ್ತಾ ಇಲಾಖೆಯಿಂದ ಸ್ಥಳೀಯ/ ಪ್ರಾದೇಶಿಕ ಪತ್ರಿಕೆಗಳಿಗೆ ಬಿಡುಗಡೆ ಮಾಡುವ ಜಾಹೀರಾತುಗಳನ್ನು ಸರದಿ ಪ್ರಕಾರ ಬಿಡುಗಡೆ ಮಾಡಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ತಿಳಿಸಿದರು.
ಮನವಿ ಸ್ವೀಕರಿಸಿದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಹಿಮಂತರಾಜು, ಜಿಲ್ಲಾ ಪಂಚಾಯಿತಿ ಸಿಇಒ ಅವರು ಈಗಾಗಲೇ ಸೂಚಿಸಿದ್ದು, ಸಿಇಒ ಆವರ ಆದೇಶದ ಪ್ರಕಾರ ಮಾಧ್ಯಮ ಪಟ್ಟಿಯಲ್ಲಿರುವ ಎಲ್ಲಾ ಪತ್ರಿಕೆಗಳನ್ನು ಜಿಲ್ಲಾ ಪಂಚಾಯಿತಿಗೆ ಕಳುಹಿಸಿಕೊಡಲಾಗುವುದು ಹಾಗೂ ಸರ್ಕಾರದ ಆದೇಶದಂತೆ ಕ್ರಮ ಜರುಗಿಸಲಾಗುವುದು ಎಂದು ಸoಪಾದಕರ ಸಂಘಕ್ಕೆ ಭರವಸೆ ನೀಡಿದರು.
ಈ ವೇಳೆ ಸಂಘದ ಜಿಲ್ಲಾಧ್ಯಕ್ಷ ಜಿ.ಕರುಣಾಕರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ.ಎನ್. ಮಂಜುನಾಥಗೌಡ, ರಾಜ್ಯ ಜಂಟಿ ಕಾರ್ಯದರ್ಶಿ ಸಿ.ರಂಗನಾಥ, ಜಿಲ್ಲಾ ಉಪಾಧ್ಯಕ್ಷ ಪಿ.ಎಸ್.ಮಲ್ಲಿಕಾರ್ಜುನಸ್ವಾಮಿ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಸಿ.ಎನ್.ಮಹೇಶ್ಕುಮಾರ್, ಜಿಲ್ಲಾ ಖಜಾಂಚಿ ಕಂಬಣ್ಣ, ಜಿಲ್ಲಾ ನಿರ್ದೇಶಕ ಬಸವರಾಜು ಹಾಜರಿದ್ದರು.