ಹೊಳೆನರಸೀಪುರ:ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಕಾಲೇಜಿನಲ್ಲಿ ತೆಗೆದುಕೊಳ್ಳುವ ಅಂಕಗಳಿಂದಲೇ ಉತ್ತಮ ಬದುಕು ರೂಪಿಸಿಕೊಳ್ಳಲು ಸಾಧ್ಯವಿಲ್ಲ. ಆದ್ದರಿಂದ ನಮ್ಮ ಕಾಲೇಜಿನಲ್ಲಿ ಕ್ರೀಡೆ, ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಎನ್.ಎಸ್.ಎಸ್ ಚಟುವಟಿಕೆಗಳ ಕಾರ್ಯಕ್ರಮಗಳನ್ನು ನಡೆಸುತ್ತೇವೆ ಎಂದು ಪ್ರಾಂಶುಪಾಲೆ ಆಶಾಜ್ಯೋತಿ ತಿಳಿಸಿದರು.
ಮಂಗಳವಾರ ಕಾಲೇಜಿನಲ್ಲಿ ಆಯೋಜಿಸಿದ್ದ ಕ್ರೀಡೆ, ಸಾಂಸ್ಕೃತಿಕ,ಎನ್ಎಸ್ಎಸ್ ಕಾರ್ಯಕ್ರಮ ಗಳ ಉದ್ಘಾಟನೆ ಹಾಗೂ ಪ್ರಥಮ ವರ್ಷದ ಪದವಿ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯೆಯಿಂದ ಒಳ್ಳೆಯ ಅಂಕಗಳನ್ನು ತೆಗೆಯಬಹುದು.ಆದರೆ ಅತ್ಯುತ್ತಮ ಕೆಲಸ ಪಡೆದುಕೊಳ್ಳಲು ಉತ್ತಮ ಅಂಕದ ಜೊತೆ ಅತಿಹೆಚ್ಚಿನ ಸಾಮಾಜಿಕ ಜ್ಞಾನವೂ ಬೇಕು ಇಂತಹ ಜ್ಞಾನ ಪಠ್ಯೇತರ ಚಟುವಟಿಕೆಗಳಿಂದ ಸಿಗುತ್ತದೆ ಎಂದರು.
ಪ್ರಿಯಧರ್ಷಿಣಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಟಿ.ವೈ. ರಾಜು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ವಿದ್ಯಾರ್ಥಿಗಳು ವೈಜ್ಞಾನಿಕಾಗಿ ಚಿಂತಿಸಿ ವೈಚಾರಿಕತೆಯಿಂದ ಬೆಳೆಯಬೇಕು. ಮೂಡನಂಬಿಕೆಗಳನ್ನು ಬಿಡಬೇಕು. ಮನೆಗೆ ಹತ್ತಿರದಲ್ಲಿ ಕಾಲೇಜಿದೆ ಎಂದು ಕಾಟಾಚಾರಕ್ಕೆ ಓದುವುದರಿಂದ ಬದುಕು ರೂಪಿಸಿಕೊಳ್ಳಲು ಸಾಧ್ಯ ಇಲ್ಲ. ಈಗಲೇ ನಾನು ಮುಂದೆ ಏನಾಗಬೇಕು ಎನ್ನುವುದನ್ನು ನಿರ್ಧರಿಸಿ ಅದಕ್ಕೆ ತಕ್ಕಂತೆ ವಿದ್ಯಾಭ್ಯಾಸ ಮಾಡಿ ಸಾಮಾನ್ಯ ಜ್ಞಾನ ಹೆಚ್ಚಿಸಿಕೊಳ್ಳಿ ಎಂದು ಸಲಹೆ ಕೊಟ್ಟರು.
ತಾಲ್ಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಎಚ್.ವಿ. ಸುರೇಶ್ ಕುಮಾರ್ ಮಾತನಾಡಿ ನಾನು ಚೆನ್ನಾಗಿ ಓದುತ್ತೇನೆ. ಅತ್ಯುತ್ತಮವಾದ ಕೆಲಸ ಪಡೆದುಕೊಂಡು ನಾನು ಬದಕನ್ನು ಉತ್ತಮವಾಗಿ ರೂಪಿಸಿಕೊಳ್ಳುತ್ತೇನೆ ಎನ್ನುವ ದೃಢ ವಿಶ್ವಾಸ ಬೆಳೆಸಿಕೊಳ್ಳಬೇಕು. ಅವಕಾಶ ಸಿಕ್ಕಾಗೆಲ್ಲಾ ನಾಯಕತ್ವ, ಮುಂದಾಳತ್ವ ವಹಿಸಬೇಕು. ಇದರಿಂದ ನಮ್ಮ ಸಾಮಾಜಿಕ ಜ್ಞಾನ ಉತ್ತಮವಾಗುತ್ತದೆ ಎಂದು ಸಲಹೆ ನೀಡಿದರು.
ಪ್ರಾಧ್ಯಾಪಕ ಅಶೋಕ್ ಕಾಲೇಜಿನಲ್ಲಿ ಇರುವ ಸೌಲಭ್ಯಗಳು ಹಾಗೂ ಸಾಂಸ್ಕೃತಿಕ, ಕ್ರೀಡೆ, ಎನ್.ಎಸ್.ಎಸ್ ಹಾಗೂ ರೆಡ್ ಕ್ರಾಸ್ ಯೋಜನೆಗಳ ಬಗ್ಗೆ ವಿವರಿಸಿದರು.
ಪ್ರಾಧ್ಯಾಪಕರಾದ ಫಕೀರಮ್ಮ ಮುರುಗೋಡ್, ಸುನಿಲ್, ಜಯಚಂದ್ರ ಮಾತನಾಡಿದರು. ವಿದ್ಯಾರ್ಥಿನಿಯರಾದ ರೋಜಾ, ಅಮೃತಾ ಕಾರ್ಯಕ್ರಮ ನಿರೂಪಿಸಿದರು. ಪ್ರಾರ್ಥನಾ ಪ್ರಾರ್ಥಿಸಿದರು. ಪ್ರಾಧ್ಯಾಪಕ ಗಣೇಶ್ ಸ್ವಾಗತಿಸಿ, ಪ್ರಾಧ್ಯಾಪಕ ಕೃಷ್ಣಮೂರ್ತಿ ವಂದಿಸಿದರು. ಕಾರ್ಯಕ್ರಮದ ನಂತರ ವಿದ್ಯಾರ್ಥಿಗಳು ನಡೆಸಿಕೊಟ್ಟ ಸಾಂಸ್ಕೃತಿಕ ಕಾರ್ಯಕ್ರಮ ಗಮನಸೆಳೆಯಿತು.
———–-ವಸಂತ್ ಕುಮಾರ್