ಕೆ.ಆರ್.ಪೇಟೆ:ನಾನು ಬಹಳ ಕಷ್ಟದ ಪರಿಸ್ಥಿತಿಯಲ್ಲಿ ಶಾಸಕನಾಗಿದ್ದೇನೆ.ರಾಜ್ಯ ಸರ್ಕಾರವು ವಿರೋಧ ಪಕ್ಷಗಳ ಶಾಸಕರಿರಲಿ,ತನ್ನ ಪಕ್ಷದ ಶಾಸಕರಿಗೂ ಅನುಧಾನ ನೀಡದೇ ಇರುವಷ್ಟು ಸಂಕಷ್ಟ ಅನುಭವಿಸುತ್ತಿದೆ ಎಂದು ಶಾಸಕ ಹೆಚ್ ಟಿ ಮಂಜು ಬೇಸರ ಹೊರಹಾಕಿದರು.
ಅವರು ಕೆಲ ದಿನಗಳಿಂದ ತಾಲೂಕಿನಲ್ಲಿ ಸುರಿಯುತ್ತಿರುವ ವ್ಯಾಪಕ ಮಳೆಯಿಂದಾಗಿ ಹಾನಿಯಾದ ಪ್ರದೇಶಗಳಿಗೆ ಭೇಟಿ ನೀಡಿ, ಪರಿಶೀಲನೆ ನಡೆಸಿ ಮಾತನಾಡಿದರು.
ದೊಡ್ಡ ಕೆಲಸಗಳಿರಲಿ ಸಣ್ಣಪುಟ್ಟ ಕಾಮಗಾರಿಗಳಿಗೆ ಅನುದಾನ ನೀಡಲು ಸರಕಾರದ ಬಳಿ ಹಣವಿಲ್ಲ.ಇಲ್ಲಿನ ಮತದಾರರು ಸಾಕಷ್ಟು ಕನಸ್ಸುಗಳ ಇಟ್ಟುಕೊಂಡು ನನ್ನನ್ನು ಶಾಸಕನಾಗಿ ಆಯ್ಕೆ ಮಾಡಿದ್ದಾರೆ.ಅವರ ಆಶೋತ್ತರಗಳನ್ನು ತೀರಿಸಲು ಅನುದಾನ ತರಲು ಹೋರಾಟ ಮಾಡುತ್ತಿದ್ದೇನೆ ಎಂದರು.
ತಾಲೂಕು ಆಡಳಿತವನ್ನೇ ಜನರ ಬಳಿಗೆ ಕೊಂಡೊಯ್ದ ಶಾಸಕ.
ಭಾರೀ ಮಳೆಯಿಂದಾಗಿ ತಾಲೂಕಿನ ಸಂತೇಬಾಚಹಳ್ಳಿ ಮತ್ತು ಕಿಕ್ಕೇರಿ ಹೋಬಳಿಯ ವ್ಯಾಪ್ತಿಯಲ್ಲಿ ಅಪಾರ ಪ್ರಮಾಣದ ಹಾನಿಯಾಗಿತ್ತು.ಈ ಭಾಗದ ಹಲವು ಗ್ರಾಮಗಳ ಕೆರೆಗಳು ಮತ್ತು ರಸ್ತೆಗಳು ಹಾನಿಗೀಡಾಗಿ ಸಾರ್ವಜನಿಕ ಸಂಚಾರಕ್ಕೆ ತೊಂದರೆಯಾಗಿತ್ತು.
ಈ ಹಿನ್ನೆಲೆಯಲ್ಲಿ ಶಾಸಕ ಹೆಚ್.ಟಿ. ಮಂಜು ಅವರು ತಹಸೀಲ್ದಾರ್, ತಾಲ್ಲೂಕು ಪಂಚಾಯತಿ ಇಓ, ಕೃಷಿ, ತೋಟಗಾರಿಕೆ, ಸಣ್ಣ ನೀರಾವರಿ, ಲೋಕೋಪಯೋಗಿ, ವಿದ್ಯುತ್ ಇಲಾಖೆ ಸೇರಿದಂತೆ ಹಲವು ಅಧಿಕಾರಿಗಳೊಂದಿಗೆ ತಾಲೂಕಿನ ಕೈಗೋನಹಳ್ಳಿ, ಸಾರಂಗಿ, ಶ್ಯಾರಹಳ್ಳಿ, ಹಲಸಿನಹಳ್ಳಿ, ಹಳೆ ಅತ್ತಿಗುಪ್ಪೆ, ಹೊಸಹಳ್ಳಿ, ಸಂತೇಬಾಚಹಳ್ಳಿ, ಹುಬ್ಬನಹಳ್ಳಿ, ಲೋಕನಹಳ್ಳಿ, ಅಘಲಯ, ದೊಡ್ಡಸೋಮನಹಳ್ಳಿ, ಮಾಳಗೂರು, ಮಾದಿಹಳ್ಳಿ, ಅಂಕನಹಳ್ಳಿ, ದೇವರಹಳ್ಳಿ, ಚೌಡೇನಹಳ್ಳಿ ಮುಂತಾದ ಪ್ರದೇಶ ಗಳಿಗೆ ಭೇಟಿ ನೀಡಿ ನೆರೆ ಪೀಡಿತ ಸ್ಥಳಗಳನ್ನು ಖುದ್ದು ವೀಕ್ಷಣೆ ಮಾಡಿದರು.
ಬೆಳೆ ಹಾನಿ, ಸೇತುವೆ ಹಾನಿ, ರಸ್ತೆ ಹಾನಿ, ಭೂಕುಸಿತದಿಂದ ಉಂಟಾಗಿರುವ ಅಂದಾಜು ಪಟ್ಟಿ ತಯಾರಿಸಿ ಸರ್ಕಾರಕ್ಕೆ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು.
ನೆರೆ ಹಾವಳಿಯಿಂದ ಹಾನಿಗೀಡಾಗಿರುವ ಸೇತುವೆ ಮತ್ತು ರಸ್ತೆಗಳನ್ನು ತಕ್ಷಣವೇ ದುರಸ್ತಿಗೆ ಅಗತ್ಯ ಕ್ರಮ ವಹಿಸುವ ಮೂಲಕ ಸರಿಪಡಿಸಿ ಸಾರ್ವಜನಿಕರ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು. ಕೆರೆಗಳ ಹಳ್ಳದ ನೀರಿನಿಂದ ಕೆಲವು ಹಲವಾರು ಕಡೆ ರೈತರಿಗೆ ಬೆಳೆ ಹಾನಿಯಾಗಿದೆ. ತಕ್ಷಣವೇ ಬೆಳೆ ಹಾನಿ ಪ್ರದೇಶದ ರೈತರಿಗೆ ಸೂಕ್ತ ಪರಿಹಾರ ನೀಡಲು ಅಧಿಕಾರಿಗಳು ಕ್ರಮ ವಹಿಸುವಂತೆ ಶಾಸಕರು ಸೂಚಿಸಿದರು.
ಕಳಪೆ ಕಾಮಗಾರಿಯಿಂದ ಹಾನಿ:
2021 ರಲ್ಲಿ ಸುರಿದ ಕುಂಭದ್ರೋಣ ಮಳೆಗೆ ತಾಲೂಕಿನ ಸಂತೇಬಾಚಹಳ್ಳಿ ಕೆರೆ ಏರಿ ಒಡೆದು ಹೋಗಿತ್ತು. ಒಡೆದುಹೋಗಿರುವ ಕೆರೆ ಏರಿ ಕಾಮಗಾರಿ ನಡೆಯುತ್ತಿದೆ. ನೀರಾವರಿ ಇಲಾಖೆ ವ್ಯಾ ಪ್ತಿಗೆ ಸೇರಿದ ಕೆರೆ ಏರಿ ಕಾಮಗಾರಿ ಕಳಪೆಯಾಗಿರುವುದು ಶಾಸಕರ ಭೇಟಿಯ ವೇಳೆ ಕಂಡು ಬಂತು. ಕೆರೆ ಏರಿ ಕಳಪೆ ಕಾಮಗಾರಿಯ ಬಗ್ಗೆ ರೈತರು ಶಾಸಕರ ಮುಂದೆಯೇ ಧ್ವನಿಯೆತ್ತಿದರು. ರಿಪೇರಿಯಾಗಿರುವ ಕೆರೆ ಏರಿಯಲ್ಲಿ ಮತ್ತೆ ಬಿರುಕು ಕಾಣಿಸಿಕೊಳ್ಳುತ್ತಿದೆ. ಕೆರೆ ಏರಿ ಮೇಲಿನ ವಾಕಿಂಗ್ ಪಾಥ್ ಶಿಥಿಲ ಗೊಂಡಿದೆ. ನಿಯಮಾನುಸಾರ ತಡೆಗೋಡೆ ಹಾಕಿಲ್ಲ ಎಂದು ದೂರಿದರು. ಇದೆಲ್ಲವನ್ನೂ ಗಮನಿಸಿದ ಶಾಸಕರು, ಕಳಪೆ ಕಾಮಗಾರಿ ನಡೆಸುತ್ತಿರುವ ಗುತ್ತಿಗೆದಾರರು ಮತ್ತು ಅಧಿಕಾರಿಗಳನ್ನು ಸ್ಥಳದಲ್ಲಿಯೇ ತರಾಟೆಗೆ ತೆಗೆದುಕೊಂಡು ಗುಣಮಟ್ಟದ ಕಾಮಗಾರಿಗೆ ಸೂಚನೆ ನೀಡಿದರು. ಜೊತೆಗೆ ಇನ್ನೊಂದು ಸೋಪಾನಕಟ್ಟೆ ನಿರ್ಮಿಸಿ ಕೊಡುವಂತೆ ಆದೇಶ ನೀಡಿದರು.
ಬೈಕ್ ನಲ್ಲಿ ಮಳೆ ಹಾನಿ ಪ್ರದೇಶಗಳ ವೀಕ್ಷಣೆ ಮಾಡಿದ ಶಾಸಕ ಮತ್ತು ತಹಸೀಲ್ದಾರ್:
ಮಳೆ ಹಾನಿ ವೀಕ್ಷಣೆ ವೇಳೆ ವಿಪರೀತ ಮಳೆಯಾಗಿರುವ ಕಾರಣ ಕಾರುಗಳು ಹೋಗಲು ಸಾಧ್ಯವಿಲ್ಲದ ಮಳೆಹಾನಿಯಾಗಿರುವ ಹೊಸಹಳ್ಳಿ, ಸಂತೇಬಾಚಹಳ್ಳಿ ಕೆರೆ ಅಚ್ಚುಕಟ್ಟು ಪ್ರದೇಶಗಳಿಗೆ ತಹಸೀಲ್ದಾರ್ ಅವರೊಂದಿಗೆ ಬೈಕ್ ನಲ್ಲಿ ಹೋಗಿ ವೀಕ್ಷಣೆ ಮಾಡಿದ ಶಾಸಕ ಹೆಚ್.ಟಿ.ಮಂಜು ನೀರಿನ ಪ್ರವಾಹದಿಂದ ಕೊಚ್ಚಿ ಹೋಗಿರುವ ಬೆಳೆಗಳು, ಜಮೀನುಗಳು, ಸಂಪರ್ಕ ಸೇತುವೆಗಳು, ಕೆರೆಕೋಡಿಗಳನ್ನು ವೀಕ್ಷಿಸಿ ರೈತರ ಮೆಚ್ಚುಗೆಗೆ ಪಾತ್ರರಾದರು.
ರೈತ ಕೊಚ್ಚಿ ಹೋಗಿದ್ದ ಸ್ಥಳಕ್ಕೆ ಬೇಟಿ:
ಕಳೆದ ವರ್ಷ ಚಂದ್ರೇಗೌಡ ಎಂಬ 30ವರ್ಷದ ರೈತ ನೀರಿನ ಪ್ರವಾಹಕ್ಕೆ ಸಿಲುಕಿ ಬೈಕ್ ಸಮೇತ ರೈತ ಕೊಚ್ಚಿ ಹೋಗಿದ್ದ ಕಿಕ್ಕೇರಿ ಹೋಬಳಿಯ ಚೌಡೇನಹಳ್ಳಿ ಗ್ರಾಮದ ಮೂಡಲ ಹಳ್ಳದ ಶಿಥಿಲಗೊಂಡಿರುವ ಸೇತುವೆಯನ್ನು ವೀಕ್ಷಣೆ ಮಾಡಿದ ಶಾಸಕ ಮಂಜು ಕೂಡಲೇ ಸರ್ಕಾರವು ಚೌಡೇನಹಳ್ಳಿ ಗ್ರಾಮದ ಬಳಿ ವೈಜ್ಞಾನಿಕ ಸೇತುವೆ ನಿರ್ಮಾಣಕ್ಕೆ ಅಗತ್ಯ ಅನುಧಾನ ಬಿಡುಗಡೆ ಮಾಡಬೇಕು ಎಂದು ಅಗ್ರಹಿಸಿದರು.ಇಲ್ಲದಿದ್ದರೆ ಗ್ರಾಮಸ್ಥರೊಂದಿಗೆ ಸಂಬoಧಪಟ್ಟ ಇಲಾಖೆಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳ ಕಚೇರಿಯ ಮುಂದೆ ಧರಣಿ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಕೆರೆಗೆ ಬಾಗೀನ ಅರ್ಪಣೆ:
ಸತತ ನಾಲ್ಕು ವರ್ಷಗಳಿಂದ ಚನ್ನರಾಯಪಟ್ಟಣ ತಾಲ್ಲೂಕಿನ ಏತನೀರಾವರಿಯಿಂದ ಭರ್ತಿಯಾಗುತ್ತಿರುವ ಹಳೆಅತ್ತಿಗುಪ್ಪೆ ಕೆರೆಗೆ ಶಾಸಕ ಹೆಚ್.ಟಿ.ಮಂಜು ಅವರು ಸ್ಥಳೀಯ ಗ್ರಾಮಸ್ಥರೊಂದಿಗೆ ಗಂಗಾಪೂಜೆ ನೆರವೇರಿಸಿ, ಕೆರೆಗೆ ಭಾಗೀನ ಅರ್ಪಿಸಿದರು.
ಇದೇ ರೀತಿ ತಾಲ್ಲೂಕಿನಲ್ಲಿ ಉತ್ತಮ ಮಳೆಬೆಳೆಯಾಗಿ ರೈತರು ಸಮೃದ್ದಿಯಿಂದ ಜೀವನ ನಡೆಸುವಂತಾಗಲಿ ಎಂದು ಪ್ರಾರ್ಥಿಸಿದರು. ಜೊತೆಗೆ ಹಳೆ ಅತ್ತಿಗುಪ್ಪೆ ಕೆರೆಗೆ ಏತನೀರಾವರಿ ಮೂಲಕ ದಮ್ಮನಿಂಗಲ ಭಾಗದಿಂದ ನೀರು ತುಂಬಿಸಿಕೊಡುತ್ತಿರುವ ಶ್ರವಣಬೆಳಗೊಳ ಶಾಸಕ ಸಿ.ಎನ್.ಬಾಲಕೃಷ್ಣ ಅವರಿಗೆ ಕೆ.ಆರ್.ಪೇಟೆ ತಾಲ್ಲೂಕಿನ ಪರವಾಗಿ ಕೃತಜ್ಞತೆಗಳನ್ನು ಸಲ್ಲಿಸುವುದಾಗಿ ತಿಳಿಸಿದರು.
ಈ ವೇಳೆ ತಹಸೀಲ್ದಾರ್ ಡಾ.ಎಸ್. ಯು.ಅಶೋಕ್, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಕೆ.ಸುಷ್ಮಾ, ಹೇಮಾವತಿ ಜಲಾಶಯ ಯೋಜನೆಯ ತಾಲ್ಲೂಕು ಕಾರ್ಯಪಾಲಕ ಇಂಜಿನಿಯರ್ ಆನಂದ್, ಸಣ್ಣ ನೀರಾವರಿ ಇಲಾಖೆ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ನಿರ್ಮಲೇಶ್, ತೋಟಗಾರಿಕಾ ಇಲಾಖೆ ಸಹಾಯಕ ನಿರ್ದೇಶಕ ಡಾ.ಲೋಕೇಶ್, ಸಹಾಯಕ ಕೃಷಿ ನಿರ್ದೇಶಕ ಸಂತೋಷ್ ಕುಮಾರ್, ಪಟ್ಟಣ ಪೊಲೀಸ್ ಠಾಣೆ ಸಬ್ ಇನ್ಸ್ ಪೆಕ್ಟರ್ ಕೆ. ನವೀನ್, ತಾಲೂಕು ಜೆಡಿಎಸ್ ಅಧ್ಯಕ್ಷ ಎ.ನ್.ಜಾನಕೀರಾಂ, ತಾಪಂ ಮಾಜಿ ಸದಸ್ಯ ಮಲ್ಲೇನಹಳ್ಳಿ ಮೋಹನ್, ಸಂತೇಬಾ ಚಹಳ್ಳಿ ಹೋಬಳಿ ಜೆಡಿಎಸ್ ಅಧ್ಯಕ್ಷ ಸಾಮಿಲ್ ರವಿಕುಮಾರ್, ಹೊಸಳ್ಳಿ ಉದಯಕುಮಾರ್, ಹುಬ್ಬನಹಳ್ಳಿ ಮಾಸ್ಟರ್ ನಂಜಪ್ಪ, ಕಿಕ್ಕೇರಿ ಹೋಬಳಿ ಜೆಡಿಎಸ್ ಅಧ್ಯಕ್ಷ ಕಾಯಿಮಂಜೇಗೌಡ, ಕೃಷ್ಣೇಗೌಡ, ಶೇಖರ್, ರೈತ ಮುಖಂಡ ಚೌಡೇನಹಳ್ಳಿ ನಾರಾಯಣಗೌಡ, ವಡಕಹಳ್ಳಿ ಮಂಜಣ್ಣ, ದೊಡ್ಡಸೋಮನಹಳ್ಳಿ ಡಿ.ಎಸ್.ನಾಗೇಂದ್ರ, ಜೆಡಿಎಸ್ ಓಬಿಸಿ ಘಟಕದ ಅಣೇಚೌಡೇನಹಳ್ಳಿ ರವಿ, ಗ್ರಾ.ಪಂ.ಸದಸ್ಯ ಸಾರಂಗಿ ರಮೇಶ್, ಅಘಲಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷೆ ಆಶಾನಾಗೇಂದ್ರ, ಮುಖಂಡ ನಾರ್ಗೋನಹಳ್ಳಿ ಮಂಜು ಸೇರಿದಂತೆ ನೂರಾರು ಮುಖಂಡರು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದು ಮಳೆಹಾನಿಯ ಬಗ್ಗೆ ಮಾಹಿತಿ ನೀಡಿದರು.
———————-ಶ್ರೀನಿವಾಸ್ ಕೆ ಆರ್ ಪೇಟೆ