ಮೈಸೂರು-ನಗರದಲ್ಲಿ ನಾಮಫಲಕಗಳಲ್ಲಿ ಕನ್ನಡ ಕಡ್ಡಾಯಗೊಳಿಸಲು ಮಹಾನಗರ ಪಾಲಿಕೆ ಎದುರು ಕರ್ನಾಟಕ ಸೇನಾಪಡೆ ಪ್ರತಿಭಟನೆ

ಮೈಸೂರು-ನಗರದಲ್ಲಿರುವ ಎಲ್ಲಾ ಅಂಗಡಿ, ಮುಂಗಟ್ಟು, ವ್ಯಾಪಾರ ಮಳಿಗೆಗಳು, ಮಾಲ್ ಗಳು, ಖಾಸಗಿ ಕಚೇರಿಗಳು, ಶಾಲಾ-ಕಾಲೇಜು ಹಾಗೂ ಜಾಹೀರಾತು ಫಲಕಗಳು ಹಾಗೂ ಎಲ್ಲಾ ರೀತಿಯ ನಾಮಫಲಕಗಳಲ್ಲಿ ಕನ್ನಡವನ್ನು ಶೇ 60 ರಷ್ಟು ಭಾಗ ಬಳಸಬೇಕೆಂದು ಮಹಾ ನಗರ ಪಾಲಿಕೆ ಕಟ್ಟುನಿಟ್ಟಾಗಿ ಆದೇಶ ಹೊರಡಿಸಬೇಕೆಂದು ಒತ್ತಾಯಿಸಿ ಕರ್ನಾಟಕ ಸೇನಾಪಡೆಯ ಕಾರ್ಯಕರ್ತರು ಜಿಲ್ಲಾಧ್ಯಕ್ಷ ತೇಜಸ್ ಲೋಕೇಗೌಡ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು.

ಈ ಸಮಯದಲ್ಲಿ ತೇಜಸ್ ಲೋಕೇಗೌಡ ಮಾತನಾಡಿ ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ – ಕನ್ನಡ ಭಾಷೆಯೇ ಸಾರ್ವಭೌಮ ಭಾಷೆ. ಕನ್ನಡ ನಾಡಿನಲ್ಲಿ ಮೊದಲು ಕನ್ನಡ ಭಾಷೆಯನ್ನು ಪ್ರಧಾನವಾಗಿ ಬಳಸಬೇಕು ಹಾಗೂ ಕನ್ನಡದಲ್ಲಿ ವ್ಯವಹರಿಸಬೇಕು. ಕನ್ನಡ ಭಾಷೆ ಕಲಿಯಬೇಕು. ಇಲ್ಲದಿದ್ದರೆ ನಾವು ಪಾಠ ಕಲಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಎಲ್ಲಾ ನಾಮಫಲಕಗಳಲ್ಲಿ ಶೇ.60 ರಷ್ಟು ಕನ್ನಡ ಬಳಸಬೇಕು ಎನ್ನುವುದು ಹೊಸ ಕಾನೂನಲ್ಲ ಅದು ಜಾರಿಗೆ ಬಂದಿರಲಿಲ್ಲ.ಕನ್ನಡ ಸಂಘಟನೆಗಳ ಹೋರಾಟದ ಮೇರೆಗೆ ರಾಜ್ಯ ಸರ್ಕಾರ ಈಗ ನಾಮಫಲಕಗಳಲ್ಲಿ ಶೇ 60 ಕನ್ನಡ ಬಳಸುವಂತೆ ಕಡ್ಡಾಯ ಸುಗ್ರೀವಾಜ್ಞೆ ಹೊರಡಿಸಿದೆ.

ಜತೆಗೆ ಹೈಕೋರ್ಟ್ ಸಹ ಬೆಂಗಳೂರಿನ ಎಲ್ಲಾ ಮಾಲ್, ಖಾಸಗಿ ಕಛೇರಿಗಳು ನಾಮಫಲಕಗಳಲ್ಲಿ ಕನ್ನಡವನ್ನು ಪ್ರಧಾನವಾಗಿ, ಕಡ್ಡಾಯವಾಗಿ 60 ಶೇಕಡಾ ಬಳಸಬೇಕೆಂದು ಆದೇಶಿಸಿದೆ.

ಈ ಮಾದರಿಯಲ್ಲಿಯೇ ಮೈಸೂರು ನಗರ ಪಾಲಿಕೆ ಈ ಕೂಡಲೇ ಅಧಿಕಾರಿಗಳ ಹಾಗೂ ವಲಯ ಕಛೇರಿ ಸಹಾಯಕ ಆಯುಕ್ತರ ತುರ್ತು ಸಭೆ ಕರೆದು, ಎಲ್ಲಾ ಅಂಗಡಿ, ಮಳಿಗೆ, ಮಾಲ್, ಶಾಲಾ ಕಾಲೇಜು, ಜಾಹಿರಾತು ಫಲಕಗಳಲ್ಲಿ ಕನ್ನಡ ಶೇ. 60 ಭಾಗ ಪ್ರಧಾನವಾಗಿ, ಕಡ್ಡಾಯವಾ ಗಿರಬೇಕೆಂದು,ಕನ್ನಡ ನಾಮಪಲಕ ಹಾಕದೇ ಇರುವವರ ಮೇಲೆ ಕಟ್ಟುನಿಟ್ಟಾದ ಕ್ರಮ ಕೈಗೊಂಡು ಸರ್ಕಾರದ ಸುಗ್ರೀವಾಜ್ಞೆಯ ಸುತ್ತೋಲೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಬೇಕು ಎಂದು ಅವರು ಒತ್ತಾಯಿಸಿದರು.

ಎಲ್ಲರಿಗು ಕನ್ನಡೀಕರಣಗೊಳ್ಳಲು ಒಂದು ತಿಂಗಳ ಕಾಲಾವಕಾಶ ನೀಡಿ, ನಂತರ ಅವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಮನವಿ ಪತ್ರವನ್ನು ಆಯುಕ್ತರಿಗೆ ನೀಡಲಾಯಿತು.

ಈ ಸಂದರ್ಭದಲ್ಲಿ ಕೃಷ್ಣಯ್ಯ, ಪ್ರಭುಶಂಕರ್, ಪ್ರಜೀಶ್ ಪಿ, ವರಕೂಡು ಕೃಷ್ಣೇಗೌಡ, ಬೋಗಾದಿ ಸಿದ್ದೇಗೌಡ, ನಾಗರಾಜು, ಸಿಂದುವಳ್ಳಿ ಶಿವಕುಮಾರ್, ಮಹದೇವ ಸ್ವಾಮಿ, ನಂದ ಕುಮಾರ್ ಗೌಡ, ಹನುಮಂತಯ್ಯ, ಮಂಜುಳ, ನೇಹ, ಭಾಗ್ಯಮ್ಮ, ಬೇಬಿ ರತ್ನ, ಎಳನೀರು ರಾಮಣ್ಣ, ರಾಮಕೃಷ್ಣೇಗೌಡ, ರಾಧಾಕೃಷ್ಣ, ರಘು ಅರಸ್, ಗುರು ಮಲ್ಲಪ್ಪ , ಹರೀಶ್ ,ಆನಂದ, ತ್ಯಾಗರಾಜ್, ರವೀಶ್, ಪ್ರಭಾಕರ, ಗಣೇಶ್ ಪ್ರಸಾದ್, ಸ್ವಾಮಿ ಗೌಡ, ವಿಷ್ಣು ಹಾಗೂ ರವಿ ನಾಯಕ ಇನ್ನೂ ಮುಂತಾದವರು ಉಪಸ್ಥಿತರಿದ್ದರು.

———–ಮಧುಕುಮಾರ್

Leave a Reply

Your email address will not be published. Required fields are marked *

× How can I help you?