ಚಿಕ್ಕಮಗಳೂರು-ಸಹಕಾರ ಸಂಘಗಳ ಚುನಾವಣಾ ವಿಧಿವಿಧಾನಗಳ ಕುರಿತು ತರಬೇತಿ ಕಾರ್ಯಾಗಾರ

ಚಿಕ್ಕಮಗಳೂರು-ಸಹಕಾರ ಸಂಘಗಳಿಗೆ ಪ್ರತಿವರ್ಷ ಚುನಾವಣೆ ಮೂರು ವರ್ಷಕ್ಕೆ ನಿಗಧಿಯಾಗಿತ್ತು. ತದನಂತರ ಸಹಕಾರ ಕಾಯ್ದೆಗೆ ತಿದ್ದುಪಡಿ ಬಳಿಕ ಸ್ಥಳೀಯ ಸಂಸ್ಥೆಗಳ ರೀತಿ ಸಹಕಾರ ಸಂಘಗಳಿಗೆ ಐದು ವರ್ಷಗಳಿಗೆ ಚುನಾವಣೆ ನಡೆಸಲಾಗುತ್ತಿದೆ ಎಂದು ರಾಜ್ಯ ಸಹಕಾರ ಮಹಾ ಮಂಡಳ ನಿರ್ದೇಶಕ ಬಿ.ಸಿ.ಲೋಕಪ್ಪಗೌಡ ಹೇಳಿದರು.

ನಗರದ ಜಿಲ್ಲಾ ಸಹಕಾರ ಯೂನಿಯನ್ ಸಭಾಂಗಣದಲ್ಲಿ ರಾಜ್ಯ ಸಹಕಾರ ಮಹಾಮಂಡಳ, ಜಿಲ್ಲಾ ಸಹಕಾರ ಯೂನಿಯನ್ ಇಲಾಖೆ ಸಹಯೋಗದಲ್ಲಿ ಸಹಕಾರ ಸಂಘದ ಕಾರ್ಯನಿರ್ವಾಹಕರು, ವ್ಯವಸ್ಥಾಪಕರಿಗೆ ಚುನಾವಣಾ ವಿಧಿವಿಧಾನಗಳ ಕುರಿತು ವಿಶೇಷ ಸಹಕಾರ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಜಿಲ್ಲೆಯ ಉಪವಿಭಾಗದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು, ಹಾಲು ಉತ್ಪಾದಕರ ಸಹಕಾರ ಸಂಘಗಳು ಹಾಗೂ ಚುನಾವಣೆಗೆ ಬಾಕಿಯಿರುವ ಇತರೆ ಸಹಕಾರ ಸಂಘಗಳ ಕಾರ್ಯನಿರ್ವಾಹಕರು ಹಾಗೂ ವ್ಯವಸ್ಥಾಪಕರುಗಳಿಗೆ ಈ ತರಬೇತಿ ಅತ್ಯಂತ ಪ್ರಯೋಜನವಾಗಲಿದೆ ಎಂದು ಹೇಳಿದರು.

ಜಿಲ್ಲೆಯಲ್ಲಿ ಸುಮಾರು ಶೇ.75 ರಷ್ಟು ಸಹಕಾರ ಸಂಘಗಳಿಗೆ ಪ್ರಸಕ್ತ ಸಾಲಿನಲ್ಲಿ ಚುನಾವಣೆ ನಡೆಯಲಿದೆ. ಈ ನಿಟ್ಟಿನಲ್ಲಿ ಸಹಕಾರ ಕಾಯ್ದೆ ನಿಯಮಗಳಿಗನುಸಾರವಾಗಿ ಯಾವುದೇ ಅಡೆತಡೆಗಳಿಲ್ಲದೆ ಸುಗಮವಾಗಿ ಚುನಾವಣೆ ನಡೆಯುವಂತೆ ಎಲ್ಲಾ ಸಹಕಾರ ಸಂಘಗಳಿಗೆ ಮಾಹಿತಿ ನೀಡುವ ಸಂಬoಧ ತರಬೇತಿಯನ್ನು ಏರ್ಪಡಿಸಲಾಗಿದೆ ಎಂದರು.

ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾ ಸಹಕಾರ ಯೂನಿಯನ್ ಉಪಾಧ್ಯಕ್ಷ ಜಿ.ಕೆ. ದಿವಾಕರ, ಈ ಹಿಂದೆ ಸಹಕಾರ ಸಂಘಗಳಲ್ಲಿ ನೌಕರರಿಗೆ ಸಂಬಳ ಒದಗಿಸುವುದು ಸುಲಭವಾಗಿರಲಿಲ್ಲ. ಇದೀಗ ಎಲ್ಲಾ ಸಹಕಾರ ಸಂಘ, ಬ್ಯಾಂಕ್‌ಗಳೂ ಹಾಗೂ ಕಾರ್ಪೋರೇಟ್ ಸಂಸ್ಥೆಗಳ ಸರಿಸಮಾನಾಗಿ ಬೆಳೆದು ನಿಂತಿವೆ ಎಂದರು.

ಪ್ರಸ್ತುತ ಸಹಕಾರ ಸಂಘಗಳ ಚುನಾವಣೆಯಲ್ಲಿ ಒತ್ತಡ ಹೆಚ್ಚಳಗೊಂಡ ಕಾರಣ ಸಹಕಾರ ಸಂಘಗಳಲ್ಲಿ ಎಲ್ಲಾ ರಾಜಕೀಯ ಪಕ್ಷಗಳ ಮುಖಂಡರು ಇರಲಿದ್ದು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಉತ್ತಮ ರೀತಿ ಯಲ್ಲಿ ಚುನಾವಣೆ ನಡೆಸಬೇಕು. ಈ ನಿಟ್ಟಿನಲ್ಲಿ ಇಂದಿನ ತರಬೇತಿ ಮಾಹಿತಿಯನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು.

ಸಹಕಾರ ಸಂಘಗಳ ಸಹಾಯಕ ನಿಬಂಧಕಿ ತ್ರಿವೇಣಿರಾವ್ ಸಹಕಾರ ಸಂಘಗಳ ಆಡಳಿತ ಮಂಡಳಿ ಚುನಾವಣಾ ವಿಧಿವಿಧಾನಗಳ ಕುರಿತು ಉಪನ್ಯಾಸ ನೀಡಿದರು.

ಈ ಸಂದರ್ಭದಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮುಖ್ಯಕಾರ್ಯನಿರ್ವಾಹಕ ದೇವೇಂದ್ರ,ಜಿಲ್ಲಾ ಸಹಕಾರ ಯೂನಿಯನ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹೆಚ್.ಕೆ.ಯಶಸ್ಸು ಮತ್ತಿತರರಿದ್ದರು.

—————-ಸುರೇಶ್

Leave a Reply

Your email address will not be published. Required fields are marked *

× How can I help you?