ಕೆ.ಆರ್.ಪೇಟೆ-ವಯೋವೃದ್ಧ ತಂದೆ ತಾಯಿಗಳನ್ನು ಕೀಳಾಗಿ ಕಂಡು ಅಗೌರವದಿಂದ ನಡೆದುಕೊಳ್ಳುವುದು ಸರ್ವತಾ ಸರಿಯಲ್ಲ,-ನ್ಯಾಯಾಧೀಶ ಸುಧೀರ್

ಕೆ.ಆರ್.ಪೇಟೆ- ತಂದೆ ತಾಯಿಗಳು ಹಾಗೂ ಗುರು ಹಿರಿಯರನ್ನು ಗೌರವಿಸಿ ಭಕ್ತಿ ಭಾವದಿಂದ ಕಾಣುವುದು ನಮ್ಮ ಸಂಸ್ಕೃತಿಯ ಒಂದು ಭಾಗವಾಗಿರುವುದರಿಂದ ಹಿರಿಯ ನಾಗರಿಕರನ್ನು ಕಡೆಗಣಿಸುವುದು ಸಲ್ಲದು ಎಂದು ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶರಾದ ಸುಧೀರ್ ಹೇಳಿದರು.

ಅವರು ಕೃಷ್ಣರಾಜಪೇಟೆ ಪಟ್ಟಣದ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ ಹಾಗೂ ಕಾರ್ಮಿಕ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಹಿರಿಯ ನಾಗರೀಕರ ದಿನ ಮತ್ತು ಕಾರ್ಮಿಕರ ಕಾಯ್ದೆಗಳು ಕುರಿತು ಆಯೋಜಿಸಿದ್ದ ಜಾಗೃತಿ ಕಾರ್ಯಕ್ರಮವನ್ನು ಸಸಿಗೆ ನೀರೇರೆಯುವ ಮೂಲಕ ಉದ್ಘಾಟಿಸಿ ಮಾತನಾಡಿದರು.

ನಮ್ಮನ್ನು ಹೆತ್ತು ಹೊತ್ತು ಸಾಕಿ ಸಲಹಿದ ವಯೋವೃದ್ಧ ತಂದೆ ತಾಯಿಗಳನ್ನು ಕೀಳಾಗಿ ಕಂಡು ಅಗೌರವದಿಂದ ನಡೆದುಕೊಳ್ಳುವುದು ಸರ್ವತಾ ಸರಿಯಲ್ಲ, ಹಾಗೂ ಹಿರಿಯ ನಾಗರಿಕರನ್ನು ಅಗೌರವದಿಂದ ಕಂಡರೆ ನಮ್ಮ ಆತ್ಮಸಾಕ್ಷಿಯು ಕೂಡ ಒಪ್ಪುವುದಿಲ್ಲ ಮಾತ್ರವಲ್ಲದೆ ಆ ಭಗವಂತನು ಕೂಡಾ ನಮ್ಮನ್ನು ಕ್ಷಮಿಸುವುದಿಲ್ಲ. ಆದ್ದರಿಂದ ವಯೋವೃದ್ಧರನ್ನು ಗೌರವಯುತವಾಗಿ ನಡೆಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ಅಸಂಘಟಿತ ಕಾರ್ಮಿಕರು ಕಾರ್ಮಿಕ ಇಲಾಖೆಯಲ್ಲಿ ತಮ್ಮ ಹೆಸರನ್ನು ನೋಂದಾಯಿಸಿ ಗುರುತಿನ ಚೀಟಿಯನ್ನು ಪಡೆದುಕೊಂಡು ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಂಡು ನೆಮ್ಮದಿಯ ಜೀವನ ನಡೆಸಬೇಕು. ಕೆಲಸ ಮಾಡುವ ಸಮಯದಲ್ಲಿ ಎಚ್ಚರಿಕೆಯಿಂದ ಕೆಲಸ ಮಾಡುವ ಜೊತೆಗೆ ತಮ್ಮ ಮಕ್ಕಳನ್ನು ದುಡಿಮೆಗೆ ಹಚ್ಚದೆ ಶಾಲೆಗೆ ಕಳಿಸಿ ವಿದ್ಯಾವಂತರನ್ನಾಗಿ ಮಾಡಿಸಿ ಸಮಾಜದ ಮುಖ್ಯ ವಾಹಿನಿಗೆ ಬಂದು ಸಾಧನೆ ಮಾಡುವಂತೆ ಬೆನ್ನು ತಟ್ಟಿ ಪ್ರೋತ್ಸಾಹಿಸಬೇಕು ಎಂದು ಕರೆ ನೀಡಿದರು.

ಅಪರ ಸಿವಿಲ್ ನ್ಯಾಯಾಧೀಶರಾದ ದೇವರಾಜು ಮಾತನಾಡಿ, ಹಿರಿಯ ನಾಗರಿಕರಿಗೆ ತಮ್ಮ ಮಕ್ಕಳು ಸೇರಿದಂತೆ ಯಾವುದೇ ವ್ಯಕ್ತಿಯು ತೊಂದರೆ ನೀಡಿದರೆ ಉಪವಿಭಾಗಾಧಿಕಾರಿಗಳ ನ್ಯಾಯಾಲಯದಲ್ಲಿ ಮನವಿ ಸಲ್ಲಿಸಿ ಆರು ತಿಂಗಳ ಒಳಗೆ ನಿಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕು ಎಂದು ತಿಳಿಸಿದ ಅವರು ಬಡ ಜನರು ಹಾಗೂ ತುಳಿತಕ್ಕೊಳಗಾದವರು ಕಾನೂನು ಸೇವಾ ಸಮಿತಿಗೆ ಮನವಿ ಸಲ್ಲಿಸಿ ಉಚಿತವಾಗಿ ವಕೀಲರ ಸಹಾಯ ಪಡೆದು ನ್ಯಾಯವನ್ನು ಗಳಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ಸಂಪನ್ಮೂಲ ವ್ಯಕ್ತಿಗಳಾದ ವಕೀಲರ ಸಂಘದ ಕಾರ್ಯದರ್ಶಿ ಆರ್.ಕೆ.ರಾಜೇಗೌಡ, ಉಪಾಧ್ಯಕ್ಷ ಬಿ.ಸಿ.ದಿನೇಶ್ ಹಿರಿಯ ನಾಗರಿಕರ ಹಕ್ಕುಗಳು ಹಾಗೂ ಕಾರ್ಮಿಕರ ಕಾಯ್ದೆಗಳ ಕುರಿತು ಮಾತನಾಡಿದರು.

ವಕೀಲರ ಸಂಘದ ಅಧ್ಯಕ್ಷ ಎನ್.ಆರ್.ರವಿಶಂಕರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಮಂಡ್ಯ ಜಿಲ್ಲಾ ಕಾರ್ಮಿಕ ಅಧಿಕಾರಿಗಳಾದ ಸುಭಾಷ್ ಎಂ. ಆಲದಕಟ್ಟೆ, ಅಪರ ಸಿವಿಲ್ ನ್ಯಾಯಾಧಿಶರಾದ ಆರ್.ಶಕುಂತಲಾ ಮತ್ತು ಕೆ.ವಿ. ಅರ್ಪಿತಾ ಕಾರ್ಮಿಕರಿಗೆ ವಿವಿಧ ಸಾಧನ ಸಲಕರಣೆಗಳನ್ನು ವಿತರಿಸಿದರು.

ತಾಲೂಕು ಕಾರ್ಮಿಕ ನಿರೀಕ್ಷಕ ಎಂ.ಸ್ವಾಮಿ ಸ್ವಾಗತಿಸಿ ವಂದಿಸಿದರೆ, ಉದ್ಯೋಗಖಾತ್ರಿ ಯೋಜನೆಯ ಸಹಾಯಕ ನಿರ್ದೇಶಕ ಡಾ.ನರಸಿಂಹ ರಾಜು ಕಾರ್ಯಕ್ರಮ ನಡೆಸಿಕೊಟ್ಟರು.

ಕ್ರೈಸ್ಟ್ ದ ಕಿಂಗ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಪ್ರಾರ್ಥನೆ ಮಾಡಿ ಕಾರ್ಯಕ್ರಮಕ್ಕೆ ಶುಭ ಚಾಲನೆ ನೀಡಿದರು.

————ಶ್ರೀನಿವಾಸ್ ಕೆ ಆರ್ ಪೇಟೆ

Leave a Reply

Your email address will not be published. Required fields are marked *

× How can I help you?