ಬೇಲೂರು-ರಸ್ತೆ ರಿಪೇರಿ ಮಾಡಿಕೊಳ್ಳುವ ಯುವಕರು-ಕಣ್ಮುಚ್ಚಿ ಕುಳಿತ ರಾಜಕಾರಣಿಗಳು

ಬೇಲೂರು-ಮಳೆ ಬಂದರೆ ಕೆಸರುಗದ್ದೆಯಾಗುವ ಮಳೆ ನಿಂತರೆ ನೀರಿಲ್ಲದ ಹಳ್ಳದಂತಾಗುವ ರಸ್ತೆಯನ್ನು ಕಳೆದ ಮೂರು ವರ್ಷಗಳಿಂದ ಗ್ರಾಮದ ಯುವಕರೇ ತಮ್ಮ ಸ್ವಂತ ಖರ್ಚಿನಿಂದ ದುರಸ್ತಿಗೊಳಿಸಿಕೊಳ್ಳುತ್ತಿರುವ ಘಟನೆಯೊಂದು ಬೆಳ್ಳಾವರ ಗ್ರಾಮದಿಂದ ವರದಿಯಾಗಿದೆ.

ದಶಕಗಳಿಂದ ದುರಸ್ಥಿ ಕಾಣದ ರಸ್ತೆಯನ್ನು ಸರಿಪಡಿಸುವಂತೆ ಸಂಬoಧಪಟ್ಟವರಿಗೆ ಮನವಿ ಸಲ್ಲಿಸಿದರು ಯಾವುದೇ ಪ್ರಯೋಜವಾಗಿಲ್ಲ,ಅಧಿಕಾರಿಗಳ ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷ್ಯಕ್ಕೆ ಬೇಸತ್ತ ಗ್ರಾಮದ ಯುವಕರು ಕಳೆದ ಮೂರು ವರ್ಷಗಳಿಂದ ತಾವು ದುಡಿದು ಉಳಿಸುವ ಹಣದಲ್ಲಿ ರಸ್ತೆ ದುರಸ್ತಿ ಮಾಡಿಕೊಳ್ಳುತ್ತಿದ್ದಾರೆ.

ಶಾಸಕ ಹುಲ್ಲಳ್ಳಿ ಸುರೇಶ್ ಅವರು ಪ್ರತಿನಿಧಿಸುವ ಬೇಲೂರು ವಿಧಾನಸಭಾ ಕ್ಷೇತ್ರದ ಅರೇಹಳ್ಳಿ ಹೋಬಳಿಯ ಅನುಘಟ್ಟ ಗ್ರಾ.ಪಂ ವ್ಯಾಪ್ತಿಯ ಬೆಳ್ಳಾವರ ಗ್ರಾಮದ ರಸ್ತೆ ಇದುವರೆಗೂ ಯಾವುದೇ ಡಾಂಬರ್ ಹಾಗೂ ಕಾಂಕ್ರಿಟ್ ಅಭಿವೃದ್ಧಿ ಕಂಡಿಲ್ಲ.ಮಳೆ ಬಂದರೆ ಸಾಕು ಸಂಪೂರ್ಣ ಕೆಸರುಮಯ,ಬೇಸಿಗೆಯಲ್ಲಿ ಬೃಹತ್ ಗುಂಡಿ ಹಾಗೂ ಧೂಳುಮಯವಾಗುತ್ತದೆ.

ಚುನಾವಣೆ ಬಂತೆಂದರೆ ಊರಿಗೆ ದಾಂಗುಡಿ ಇಡುವ ರಾಜಕಾರಣಿಗಳಿಗೆ ಈ ಊರಿನ ಜನ ಇಡುವ ಮುಖ್ಯ ಬೇಡಿಕೆ ನಮಗೊಂದು ಉತ್ತಮ ರಸ್ತೆ ಮಾಡಿಕೊಡಿ ಅನ್ನುವುದಷ್ಟೇ.ಆದರೆ ಇಲ್ಲಿಯವರೆಗೂ ಯಾವೊಬ್ಬ ಜನಪ್ರತಿನಿಧಿಯು ಈ ಸಮಸ್ಯೆ ಬಗೆಹರಿಸಲು ಮುಂದಾಗಿಲ್ಲ.

ಗ್ರಾಮಸ್ಥರು ,ವಿದ್ಯಾರ್ಥಿಗಳು,ರೈತರು,ನೌಕರಸ್ಥರು,ಕೂಲಿಕಾರ್ಮಿಕರು ಈ ರಸ್ತೆಯಲ್ಲಿಯೇ ಓಡಾಡುತ್ತ ಪ್ರತಿನಿತ್ಯವೂ ನರಕ ಯಾತನೆ ಅನುಭವಿಸುತ್ತಿದ್ದುದ ಗಮನಿಸಿದ ಯುವಕರಾದ ಪ್ರವೀಣ್,ಸಂತೋಷ್,ಮಹೇಶ್,ವಿನೋದ್,ಹರೀಶ್,ಸುರೇಶ್,ತೀರ್ಥರಾಜು,ಸುಮಂತ್ ತಾವು ದುಡಿಯುವ ಹಣದಲ್ಲಿಯೇ ಸ್ವಲ್ಪ ಭಾಗವನ್ನು ಈ ರಸ್ತೆ ದುರಸ್ತಿ ಗೊಳಿಸಲು ಕಳೆದ ಮೂರು ವರುಷಗಳಿಂದ ಬಳಸುತ್ತಿದ್ದಾರೆ.

ಈ ಯುವಕರಿಗೆ ಶಹಬ್ಬಾಶ್ ಎನ್ನುವುದೋ?ಅಥವಾ ಕಣ್ಮುಚ್ಚಿ ಕುಳಿತ ತಾಲೂಕು ಆಡಳಿತಕ್ಕೆ ದಿಕ್ಕಾರ ಹೇಳುವುದೋ? ತಿಳಿಯದಾಗಿದೆ.

Leave a Reply

Your email address will not be published. Required fields are marked *

× How can I help you?