ಮೈಸೂರು:ಮೈಸೂರಿನ ಮುಡಾ ಅಕ್ರಮದಲ್ಲಿ ಸಚಿವ ಭೈರತಿ ಸುರೇಶ್ ಕಿಂಗ್ ಪಿನ್,ಭೈರತಿ ಸುರೇಶ್ ಮುಡಾದಲ್ಲಿ ಸಭೆ ನಡೆಸಿ 50:50 ನಿವೇಶನ ಹಂಚಿಕೆ ವಾಪಾಸ್ ಪಡೆಯುತ್ತೇನೆ ಎಂದರು.ಆದರೆ ಇದುವರೆಗೂ ಯಾವುದೇ ನಿವೇಶನ ವಾಪಸ್ ಪಡೆಯಲಿಲ್ಲ ಎಂದು ಬಿಜೆಪಿ ಒಬಿಸಿ ಮೋರ್ಚಾ ರಾಜ್ಯಾಧ್ಯಕ್ಷ ರಘು ಕೌಟಿಲ್ಯ ಆರೋಪಿಸಿದರು.
ಮೈಸೂರಿನಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಲಿಲ್ಲ. ಭೈರತಿ ಸುರೇಶ್ ಅಕ್ರಮದಲ್ಲಿ ಭಾಗಿಯಾಗಿರುವುದಕ್ಕೆ ಸಿಎಂ ಇದನ್ನ ತನಿಖೆಗೆ ನೀಡುತ್ತಿಲ್ಲ. ಕೇವಲ 14 ಸೈಟ್ ಗಳ ಬಗ್ಗೆ ಮಾತ್ರ ಚರ್ಚೆ ಆಗುತ್ತಿದೆ. ಇದರಿಂದ ಆಚೆ ಅಕ್ರಮವಾಗಿರುವ 14 ಸಾವಿರ ಸೈಟ್ ಗಳ ಬಗ್ಗೆ ಯಾರು ಚರ್ಚೆ ಮಾಡುತ್ತಿಲ್ಲ ಎಂದು ಹೇಳಿದರು.
ಮುಡಾ ಹಗರಣ ರಾಜಕೀಯದ ವಿಷಯ ವಸ್ತು ಆಗಬಾರದು. ಮುಡಾದಲ್ಲಿ ಐದು ಸಾವಿರ ನಿವೇಶನ ಅಕ್ರಮವಾಗಿದೆ ಎಂಬ ಆರೋಪ ಬಂದಿದೆ. ಐದು ಸಾವಿರ ಅಷ್ಟೇ ಅಲ್ಲ;ಹತ್ತು ಸಾವಿರಕ್ಕೂ ಹೆಚ್ಚು ನಿವೇಶನಗಳು ಅಕ್ರಮವಾಗಿ ದರೋಡೆಯಾಗಿದೆ.ಇಂತಹ ದೊಡ್ಡ ಹಗರಣ ಮೈಸೂರಿನ ಇತಿಹಾಸದಲ್ಲೇ ಆಗಿಲ್ಲ ಎಂದು ವಿವರಿಸಿದರು.
ಕಳೆದ ಮೂವತ್ತು ವರ್ಷಗಳಿಂದ ಇಲ್ಲಿಯವರೆಗೆ ಯಾವುದೇ ನಿವೇಶನ ಹಂಚಿಕೆ ಮಾಡಲಾಗಿಲ್ಲ.ಆದರೆ ಇಲ್ಲಿ ಪ್ರಭಾವಿಗಳು,ರಾಜಕಾರಣಿಗಳು,ರಿಯಲ್ ರಿಯಲ್ ಎಸ್ಟೇಟ್ ಉದ್ಯಮಿಗಳು ಅಕ್ರಮವಾಗಿ ನಿವೇಶನ ಪಡೆದಿದ್ದಾರೆ. ತವರು ಜಿಲ್ಲೆಯಲ್ಲಿ ನಡೆದಿರುವ ಅಕ್ರಮ ಹೊರ ತೆಗೆಯಲಿಕ್ಕೆ ಸಿದ್ದರಾಮಯ್ಯ ಯಾಕೆ ಮನಸ್ಸು ಮಾಡಲಿಲ್ಲ ಎಂದು ಟೀಕಿಸಿದರು.
ಇಲ್ಲಿ ಆ ಪಕ್ಷ ಈ ಪಕ್ಷ ಅಂತೇನಿಲ್ಲ ಎಲ್ಲರೂ ದರೋಡೆಕೋರರೇ.ಅಧಿಕಾರಿಗಳು ತಪ್ಪು ಮಾಡಿದ್ದಾರೆ.ಅಧಿಕಾರಿಗಳಿಗೆ ಶಿಕ್ಷೆ ಆಗಲಿ ಎಂದು ಆಗ್ರಹಿಸಿದರು.50:50 ಅನುಪಾತದಲ್ಲಿ ಇಲ್ಲಿಯವರೆಗೂ ಹಂಚಿಕೆ ಮಾಡಲಾಗಿರುವ ಎಲ್ಲಾ ನಿವೇಶನಗಳು ಅಕ್ರಮ ಎಂದು ಸರ್ಕಾರದ ಟೆಕ್ನಿಕಲ್ ಟೀಮ್ ಹೇಳುತ್ತಿದೆ.ಸಿದ್ದರಾಮಯ್ಯನವರು ಈಗಲಾದರೂ ತಮಗೆ ನೀಡಿರುವ 14 ಸೈಟ್ ಗಳನ್ನ ವಾಪಾಸ್ ನೀಡಲಿ.ನ್ಯಾಯಯುತವಾಗಿ ತನಿಖೆ ಮುಗಿದ ಬಳಿಕ ಬೇಕಿದ್ದರೆ ಪಡೆಯಿರಿ ಎಂದು ಹೇಳಿದರು.
———————ಆಶ್ರಿತ್ ಬೆಳ್ತಂಗಡಿ