ಕೆ.ಆರ್.ಪೇಟೆ-ತ್ರಿವೇಣಿ ಸಂಗಮ-ವಿಜೃಂಭಣೆಯಿಂದ ನಡೆದ ಮಲೈಮಹದೇಶ್ವರ ಸ್ವಾಮಿಯ ಹುಲಿವಾಹನ ಉತ್ಸವ

ಕೆ.ಆರ್.ಪೇಟೆ,-ತಾಲೂಕಿನ ಅಕ್ಕಿಹೆಬ್ಬಾಳು ಹೋಬಳಿಯ ಅಂಬಿಗರಹಳ್ಳಿ, ಪುರ ಸಂಗಾಪುರ ಗ್ರಾಮಗಳ ಸಮೀಪದಲ್ಲಿರುವ ಹೇಮಾವತಿ, ಕಾವೇರಿ ಮತ್ತು ಲಕ್ಷ್ಮಣ ತೀರ್ಥ ನದಿಗಳು ಜೀವಂತವಾಗಿ ಒಂದಾಗಿ ಸೇರುವ ಪವಿತ್ರ ತ್ರಿವೇಣಿ ಸಂಗಮದಲ್ಲಿ ಕಾರ್ತೀಕ ಮಾಸದ ಮೊದಲ ಸೋಮವಾರದ ಅಂಗವಾಗಿ ಮಲೈಮಹದೇಶ್ವರ ಸ್ವಾಮಿಯ ಶಿಲಾಮೂರ್ತಿಗೆ ವಿಶೇಷ ಅಭಿಷೇಕ, ಪೂಜೆ ಪುರಸ್ಕಾರಗಳು ಹಾಗೂ ಹುಲಿವಾಹನ ಉತ್ಸವವು ಶ್ರದ್ಧಾಭಕ್ತಿಯಿಂದ ಸಾವಿರಾರು ಭಕ್ತರ ಸಮಕ್ಷಮದಲ್ಲಿ ನಡೆಯಿತು.

ಇಂದು ಮುಂಜಾನೆಯಿಂದಲೇ ಮಲೈ ಮಹದೇಶ್ವರರ ಶಿಲಾ ಮೂರ್ತಿಗೆ ಅಭಿಷೇಕ,ಪುಷ್ಪಾಭಿಷೇಕ ಹಾಗೂ ಹುಲಿವಾಹನ ಉತ್ಸವಗಳು ಸಾವಿರಾರು ಭಕ್ತಾಧಿಗಳ ಸಮಕ್ಷಮದಲ್ಲಿ ವಿಶ್ರಾಂತ ಶಿಕ್ಷಕ, ಸಂಸ್ಕೃತಿ ಸಂಘಟಕ ಡಾ. ಅಂಚಿ ಸಣ್ಣಸ್ವಾಮಿಗೌಡ ಹಾಗೂ ಶ್ರೀಮತಿ ಕಮಲ ಸಣ್ಣ ಸ್ವಾಮಿಗೌಡ, ಹಾಗೂ ವೇದಬ್ರಹ್ಮ ಶ್ರೀ ನವೀನ್ ಕುಮಾರ್ ಹಿರೇಮಠ ಅವರ ನೇತೃತ್ವದಲ್ಲಿ ಪೂಜಾ ವಿಧಿ ವಿಧಾನಗಳು ಶ್ರದ್ಧಾ ಭಕ್ತಿಯಿಂದ ನಡೆದವು.

ಹುಲಿವಾಹನ ಉತ್ಸವ ಹಾಗೂ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಭಕ್ತಾಧಿಗಳಿಗೆ ಬಿಸಿಬೇಳೆ ಭಾತ್, ಮೊಸರನ್ನ, ಸಿಹಿ ಪೊಂಗಲ್ ಹಾಗೂ ಸಜ್ಜೆ ಪಾಯಸ ಪ್ರಸಾದವನ್ನು ವಿತರಿಸಲಾಯಿತು.

ಕೃಷ್ಣರಾಜ ಸಾಗರ ಜಲಾಶಯವು ಭರ್ತಿಯಾಗಿದ್ದು ಜಲಾಷಯದ ಹಿನ್ನೀರು ತ್ರಿವೇಣಿ ಸಂಗಮವನ್ನು ಸಂಪೂರ್ಣವಾಗಿ ಆವರಿಸಿಕೊಂಡಿರುವ ಹಿನ್ನೆಲೆಯಲ್ಲಿ ಕಣ್ಣು ಹಾಯಿಸಿದಷ್ಟು ವಿಶಾಲವಾದ ಪ್ರದೇಶದಲ್ಲಿ ಹರಡಿಕೊಂಡಿರುವ ನೀರಿನ ಸೊಬಗನ್ನು ಕಣ್ತುಂಬಿಕೊಳ್ಳಲು ಎರಡು ಕಣ್ಣುಗಳು ಸಾಲದಾಗಿವೆ.

2022ರಲ್ಲಿ ತ್ರಿವೇಣಿ ಸಂಗಮದಲ್ಲಿ ಮೂರು ದಿನಗಳ ಕಾಲ ನಡೆದ ಮಹಾ ಕುಂಭಮೇಳ ಹಾಗೂ ಮಹದೇಶ್ವರರ ದೇವಾಲಯವು ಲೋಕಾರ್ಪಣೆಗೊಂಡ ಹಿನ್ನೆಲೆಯಲ್ಲಿ ತ್ರಿವೇಣಿ ಸಂಗಮವು ದೇಶದಾದ್ಯಂತ ಪ್ರಖ್ಯಾತವಾಗಿತ್ತು. ಮಹಾಕುಂಭಮೇಳ ನಡೆದ ನಂತರ ತ್ರಿವೇಣಿ ಸಂಗಮವು ಅಭಿವೃದ್ಧಿ ಕೆಲಸ ಕಾರ್ಯಗಳಿಂದ ವಂಚಿತವಾಗಿದ್ದು, ಪವಿತ್ರ ತ್ರಿವೇಣಿ ಸಂಗಮ ಸುಕ್ಷೇತ್ರಕ್ಕೆ ಆಗಮಿಸುವ ಭಕ್ತಾಧಿಗಳಿಗೆ ಕನಿಷ್ಠ ಮೂಲಭೂತ ಸೌಲಭ್ಯಗಳು ದೊರೆಯುತ್ತಿಲ್ಲ. ಸಂಗಮ ಕ್ಷೇತ್ರಕ್ಕೆ ಭಕ್ತಾಧಿಗಳು ಆಗಮಿಸಲು ಬಸ್ ಸೌಲಭ್ಯವಂತೂ ಇಲ್ಲವೇ ಇಲ್ಲ. ಆದ್ದರಿಂದ ಜಿಲ್ಲಾಡಳಿತ ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರಾದ ಚಲುವರಾಯಸ್ವಾಮಿ ಅವರು ಕ್ಷೇತ್ರದಲ್ಲಿ ಅರ್ಧಕ್ಕೆ ನಿಂತಿರುವ ಅಭಿವೃದ್ಧಿ ಕೆಲಸ ಕಾರ್ಯಗಳನ್ನು ಆರಂಭಿಸಿ ಭಕ್ತರು ಹಾಗೂ ಯಾತ್ರಾರ್ಥಿಗಳಿಗೆ ಮೂಲ ಭೂತ ಸೌಲಭ್ಯಗಳನ್ನು ದೊರಕಿಸಿಕೊಡಲು ಮುಂದಾಗಬೇಕು.
ಎಂದು ತ್ರಿವೇಣ ಸಂಗಮ ಅಭಿವೃದ್ಧಿ ಹೋರಾಟ ಸಮಿತಿಯ ಸಂಚಾಲಕ ಡಾ. ಅಂಚಿ ಸಣ್ಣಸ್ವಾಮಿಗೌಡ ಮನವಿ ಮಾಡಿದ್ದಾರೆ.

ಕಾರ್ತಿಕ ಮಾಸದ ವಿಶೇಷ ಪೂಜಾ ಕಾರ್ಯಕ್ರಮದಲ್ಲಿರಾಜ್ಯ ಆರ್.ಟಿ.ಓ ಅಧಿಕಾರಿಗಳ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ್, ಮುಖಂಡ ಗುಡುಗನಹಳ್ಳಿ ರಾಯಪ್ಪ, ಬಿ.ನಾಗೇಂದ್ರ ಕುಮಾರ್, ಎ.ಎಂ.ಸಂಜೀವಪ್ಪ, ಸಂಸ್ಕೃತ ವಿಶ್ವ ವಿದ್ಯಾನಿಲಯದ ವಿಶ್ರಾಂತ ಉಪಕುಲಪತಿ ಡಾ.ಪದ್ಮಾಶೇಖರ್, , ಶಿಕ್ಷಕರ ಸಂಘದ ಅಧ್ಯಕ್ಷ ಪೂರ್ಣಚಂದ್ರ ತೇಜಸ್ವಿ, ಕಟ್ಟೆಕ್ಯಾತನಹಳ್ಳಿ ಪಾಪಣ್ಣ, ಬಲ್ಲೇನಹಳ್ಳಿ ನಂಧೀಶ್, ಬೋರೇಗೌಡ ಸೇರಿದಂತೆ ಅಂಬಿಗರಹಳ್ಳಿ, ದಗ್ಗನಾಳು, ತಿಪ್ಪುರು, ಸಾಲಿಗ್ರಾಮ, ಸೋಮನಹಳ್ಳಿ, ಪುರ, ಸಂಗಾಪುರ ಗ್ರಾಮಗಳ ನೂರಾರು ಜನರು ಭಾಗವಹಿಸಿದ್ದರು.

——————-ಶ್ರೀನಿವಾಸ್ ಕೆ ಆರ್ ಪೇಟೆ

Leave a Reply

Your email address will not be published. Required fields are marked *

× How can I help you?