ಚನ್ನಪಟ್ಟಣ:ಚನ್ನಪಟ್ಟಣ ಉಪಚುನಾವಣೆಯಲ್ಲಿ ಸಿ.ಪಿ.ಯೋಗೇಶ್ವರ್ ಗೆದ್ದರೆ ಚನ್ನಪಟ್ಟಣ ತಾಲೂಕಿನ ಸಮಗ್ರ ಅಭಿವೃದ್ಧಿಯಾಗಲಿದೆ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಭರವಸೆ ನೀಡಿದರು.
ನಗರದ ಕೋಟೆ ಬೀದಿಯಲ್ಲಿ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿದ ಅವರು,ಯೋಗೇಶ್ವರ್ ಗೆದ್ದರು ಕ್ಷೇತ್ರದಲ್ಲಿ ಅಭಿವೃದ್ಧಿಯಾಗದೆ ಇದ್ದರೆ ನನ್ನನ್ನು, ಉಪಮುಖ್ಯಮಂತ್ರಿ, ಡಿ.ಕೆ.ಸುರೇಶ್, ಪುಟ್ಟಣ್ಣ ಹಾಗೂ ಅಭ್ಯರ್ಥಿಯನ್ನು ನಿಲ್ಲಿಸಿ ಪ್ರಶ್ನೆ ಮಾಡಬಹುದು ಎಂದು ಬೆಂಬಲಿಗರಿಗೆ ಸ್ವತಂತ್ರ ಅವಕಾಶ ನೀಡಿದರು.
ಅಭಿವೃದ್ಧಿ ವಿಚಾರವಾಗಿ ಕಾಂಗ್ರೆಸ್ ನ ಸಚಿವರುಗಳು, ನಾಯಕರುಗಳನ್ನು ಪರಿಚಯ ಮಾಡಿಕೊಳ್ಳಿ, ಯಾರನ್ನು ಬೇಕಾದರೂ ಪ್ರಶ್ನೆ ಮಾಡಿ ನಮ್ಮ ಸರ್ಕಾರ ಇನ್ನೂ ಮೂರುವರೆ ವರ್ಷ ಇರಲಿದ್ದು, ಕಡಾಖಂಡಿತವಾಗಿ ಅಭಿವೃದ್ಧಿ ಮಾಡುತ್ತೇವೆ ಎಂದು ತಿಳಿಸಿದರು.
ರೈತರಿಗೆ 3ಲಕ್ಷ ಬಡ್ಡಿರಹಿತ ಸಾಲ 5 ಲಕ್ಷಕ್ಕೆ ಏರಿಕೆ ಮಾಡಿದ್ದೇವೆ. ಹಾಲಿಗೆ 6 ರೂ ಪ್ರೋತ್ಸಾಹ ಧನ ನೀಡುತಿದ್ದೇವೆ. ಕಾಂಗ್ರೆಸ್ ಸರ್ಕಾರದ ಯಾವ ಕಾರ್ಯಕ್ರಮಗಳು ನಿಲ್ಲುವುದಿಲ್ಲ ಎಂದರು.
5 ವರ್ಷ ಜನರ ಬಳಿಗೆ ಹೋಗಬೇಡಿ ಎನ್ನುವ ಕುಮಾರಸ್ವಾಮಿಯನ್ನು ನಂಬಬೇಡಿ
5ವರ್ಷ ಜನರ ಬಳಿ ಹೋಗಬಾರದು.ಕೊನೆಯ ಕ್ಷಣದಲ್ಲಿ ಹೇಗೆ ಚುನಾವಣೆ ಮಾಡಬೇಕು ಎಂಬುದು ನನಗೆ ಗೊತ್ತು ಎಂಬ ಮಾತನ್ನು ಹೆಚ್ ಡಿ ಕುಮಾರಸ್ವಾಮಿ ಆಡಿದ್ದಾರೆ. ರಾಮನಗರದಲ್ಲಿ ಗೆದ್ದಾಗಲೂ ಅಲ್ಲಿಗೆ ಹೋಗಿಲ್ಲ, ಚನ್ನಪಟ್ಟಣದಲ್ಲೂ ಮತದಾರರ ಸಮಸ್ಯೆ ಕೇಳಿಲ್ಲ. ಇಂಥವರಿಂದ ಎಂಥಾ ಅಭಿವೃದ್ಧಿ ನಿರೀಕ್ಷೆ ಮಾಡಬಹುದು ಎಂದು ಪ್ರಶ್ನಿಸಿದರು.
ಬಿಜೆಪಿಯ 5 ವರ್ಷ ಆಡಳಿತದಲ್ಲಿ ಏನಾದರು ಅಭಿವೃದ್ಧಿ ಆಗಿದೆಯೇ, ಕುಮಾರಸ್ವಾಮಿ ಮೂರುಬಾರಿ ಮುಖ್ಯಮಂತ್ರಿಯಾಗಿ ಚನ್ನಪಟ್ಟಣದಲ್ಲಿ ಅಭಿವೃದ್ಧಿ ಮಾಡಿದ್ದಾರೆಯೇ ಅವಲೋಕನ ಮಾಡಿ, ಬರೀ ದುಡ್ಡಿನ ಆಸೆ, ಜಾತಿ ಆಮಿಷ ತೋರುತ್ತಾರೆ ಮರುಳಾಗಬೇಡಿ ಎಂದು ಜಾಗೃತಿ ಮೂಡಿಸಿದರು.
ಕುಮಾರಸ್ವಾಮಿ ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಎಷ್ಟು ದುಡ್ಡು ಚೆಲ್ಲಿದ್ದರೋ ತಿಳಿಯದು, ಬರೀ ದುಡ್ಡಿನಿಂದ ಚುನಾವಣೆ ನಡೆಯದು. ಮತದಾರರು ಮನಃಸಾಕ್ಷಿಗೆ ಅಷ್ಟೇ ಬೆಲೆಕೊಡುತ್ತಾರೆ ಎಂದು ಈ ಚುನಾವಣೆಯಲ್ಲಿ ಅವರಿಗೆ ತಿಳಿಸಬೇಕು ಎಂದು ಕರೆ ನೀಡಿದರು.
ನಿಖಿಲ್ ಸೋತದ್ದು ಚನ್ನಪಟ್ಟಣದಲ್ಲಿ ಅಲ್ಲ, ಸೋಲುಂಡು ಅನ್ಯಾಯವಾಗಿರೋದು ಯೋಗೇಶ್ವರ್ ಗೆ, ಚನ್ನಪಟ್ಟಣದಲ್ಲಿ ಕೆರೆಗಳ ನೀರು ತುಂಬಿಸಿ ಭಗೀರಥ ಎಂದು ಹೆಸರಾದವರು ಯೋಗೇಶ್ವರ್. ಅವರನ್ನು ಗೆಲ್ಲಿಸಿ ಎಂದು ಮನವಿ ಮಾಡಿದರು.
ಈ ವೇಳೆ ವಿಧಾನಪರಿಷತ್ ಸದಸ್ಯ ಪುಟ್ಟಣ್ಣ, ಶಾಸಕ ಪಿ.ರವಿಕುಮಾರ್ ಗೌಡ, ಮುಖಂಡ ರಾಜೇಗೌಡ ಇತರರಿದ್ದರು.
——————ರವಿ ಬಿ ಹೆಚ್