ಬೇಲೂರು: ಬೇಲೂರು ತಾಲೂಕು ಅರೇಹಳ್ಳಿ ಗ್ರಾಮದ ಸರ್ವೆ. ನಂ.13 ರಲ್ಲಿ ಸಂತೆಗೆ ಮೀಸಲಿಟ್ಟಿದ್ದ 36 ಗುಂಟೆ ಜಾಗವನ್ನು ಒತ್ತುವರಿ ಮಾಡಲು ಗ್ರಾಮ ಪಂಚಾಯತಿ ಅಧಿಕಾರಿಗಳು, ಸದಸ್ಯರು ಕುಮ್ಮಕ್ಕು ನೀಡಿದ್ದಾರೆ ಎಂದು ಆರೋಪಿಸಿ ವಿವಿಧ ಪ್ರಗತಿಪರ ಸಂಘಟನೆಗಳ ವತಿಯಿಂದ ಪಟ್ಟಣದಲ್ಲಿ ಹಿರಿಯ ಮುಖಂಡ ಅರೇಹಳ್ಳಿ ನಿಂಗರಾಜು ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು.
ಪಟ್ಟಣದ ವೀರಯೋಧ ಚಂದ್ರು ಸರ್ಕಲ್ ನಿಂದ ಪ್ರತಿಭಟನೆ ಅರಭಿಸಿದ ಪ್ರತಿಭಟನಾಕಾರರು ಅಂಬೇಡ್ಕರ್ ಸರ್ಕಲ್ ಮೂಲಕ ಗಣಪತಿ ಪೆಂಡಾಲ್ ನಲ್ಲಿ ನಡೆಯುತ್ತಿದ್ದ ಗ್ರಾಮ ಪಂಚಾಯಿತಿ ಗ್ರಾಮಸಭೆ ದಿಕ್ಕರಿಸಿ ಗ್ರಾಮ ಪಂಚಾಯತಿ ಪಿಡಿಓ ಹಾಗೂ ಅಧಿಕಾರಿಗಳ ವಿರುದ್ಧ ಘೋಷಣೆ
ಕೂಗುವ ಜೊತೆಗೆ ಒತ್ತುವರಿ ಮಾಡಿರುವವರ ವಿರುದ್ಧ ಕ್ರಮ ಜರುಗಿಸುವಂತೆ ಆಗ್ರಹಿಸಿ ಆಕ್ರೋಶ ವ್ಯಕ್ತಪಡಿಸಿದರು.
ಇದೇ ವೇಳೆ ಸಭೆ ಮುಗಿಸಿ ಹೋರ ಬಂದ ಪಿಡಿಓ ಹಾಗೂ ಗ್ರಾಮ ಪಂಚಾಯತಿ ಸದಸ್ಯರನ್ನು ಪ್ರತಿಭಟನಾಕಾರರು ತೀವ್ರ ತರಾಟೆಗೆ ತೆಗೆದುಕೊಂಡರು. ಕಣ್ಣೆದುರೇ ಸರ್ಕಾರಿ ಜಾಗ ಒತ್ತುವರಿ ಯಾಗಿದ್ದರೂ ಅದನ್ನು ತೆರವು ಮಾಡಲು ಮುಂದಾಗದ ಅಧಿಕಾರಿ ಹಾಗೂ ಜನಪ್ರತಿನಿಧಿಗಳ ವಿರುದ್ಧ ತಮ್ಮ ಅಸಮಾಧಾನ ವ್ಯಕ್ತಪಡಿಸಿ ಒತ್ತುವರಿ ತೆರವಿಗೆ ಪಿಡಿಓ ವಿಫಲರಾಗಿದ್ದಾರೆ ಕೂಡಲೇ ಸ್ಥಳಕ್ಕೆ ತಹಶೀಲ್ದಾರ್ ಆಗಮಿಸಿ ಸಮಸ್ಯೆ ಬಗೆಹರಿಸಬೇಕು ಎಂದು ಆಗ್ರಹಿಸಿದರು.
ಈ ವೇಳೆ ಅಹಿಂದ ಚಳುವಳಿಯ ಮುಖಂಡ ಅರೇಹಳ್ಳಿ ನಿಂಗರಾಜು ಮಾತನಾಡಿ, ಅನಾದಿ ಕಾಲದಿಂದ ಪಟ್ಟಣದ ಸರ್ವ ನಂ.13 ರ ಜಾಗದಲ್ಲಿ ಸಂತೆ ನಡೆಸಿಕೊoಡು ಬರಲಾಗುತ್ತಿತ್ತು.ಕಾಲಕ್ರಮೇಣ ಅಲ್ಲಿನ ಸುಮಾರು 36 ಗುಂಟೆ ಜಾಗವನ್ನು ಒತ್ತುವರಿ ಮಾಡಲಾಗಿದ್ದು
ಜಾಗವನ್ನು ತೆರವು ಮಾಡಬೇಕು ಎಂದು ಒತ್ತಾಯಿಸಿ ಹಲವು ಬಾರಿ ಮನವಿ ಮಾಡಿದರೂ ನಾಮಕವಸ್ಥೆಗೆ ಒಂದೆರಡು ಬಾರಿ ಸರ್ವೆ ಮಾಡಿ ಜನರ ಕಣ್ಣು ಒರೆಸುವ ಕೆಲಸ ಮಾಡಿದ್ದಾರೆ ಆದರೆ ಈ ವರೆಗೆ ಪ್ರಾಮಾಣಿಕವಾಗಿ ತೆರವು ಕಾರ್ಯಾಚರಣೆಗೆ ಯಾರು ಮುಂದಾಗಿಲ್ಲ
ಎ0ದರು.
ಒತ್ತುವರಿ ತೆರವು ಬಗ್ಗೆ ಪ್ರಶ್ನೆ ಮಾಡಿದವರಿಗೆ ಗ್ರಾಮ ಪಂಚಾಯಿತಿ ಪಿಡಿಓ ಹಾಗೂ ಬಿಲ್ ಕಲೆಕ್ಟರ್ ಗಳು ಗೂಂಡಾಗಿರಿ ಮಾಡಿದ್ದಾರೆ. ಸಾರ್ವಜನಿಕರ ಅನುಕೂಲಕ್ಕೆ ಮೀಸಲಿರುವ ಜಾಗವನ್ನು ಉಳಿಸಲೇಬೇಕು ಈಗಾಗಲೇ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಗ್ರಾಮ ಪಂಚಾಯಿತಿ ಎಲ್ಲರಿಗೂ ಮನವಿ ನೆಡಲಾಗಿದೆ. ಆದರೆ ತೆರವಿಗೆ ಮುಂದಾಗಿಲ್ಲ.ಕೂಡಲೇ ಒತ್ತುವರಿ ಜಾಗವನ್ನು ತೆರವು ಮಾಡಬೇಕು ಇಲ್ಲವಾದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎoದು ಎಚ್ಚರಿಸಿದರು.
ಅಹಿಂದ ಮುಖಂಡರಾದ ದಿನೇಶ್, ಛಲವಾದಿ ಮಹಾಸಭಾದ ಜಿಲ್ಲಾಧ್ಯಕ್ಷ ಸಿದ್ದಯ್ಯನಗರ ರಾಘು, ವೆಂಕಟೇಶ್ ಬ್ಯಾಕರವಳ್ಳಿ, ಸಿದ್ದರಾಜು,ಪರಮೇಶ್, ಅಣ್ಣಪ್ಪ , ಎಸ್ ಡಿಪಿಐ ಉಪಾಧ್ಯಕ್ಷ ಇಮ್ರಾನ್, ಅರ್ಷದ್, ಯೂತ್ ಕಾಂಗ್ರೆಸ್ ಅರೇಹಳ್ಳಿ ಹೋಬಳಿ ಅಧ್ಯಕ್ಷ ಮುಸ್ತಾಪ್ ,
ಕಾಂಗ್ರೆಸ್ ಮುಖಂಡ ಮಂಜು, ಮೆಹಬೂಬ್ ಶರೀಪ್,ರಾಜೇಶ್ ,ಪಾಲಾಕ್ಷ, ಕರವೇ ಪ್ರವೀಣ್ ಶೆಟ್ಟಿ ಬಣದ ಮುಖಂಡರಾದ ನಾಗೇಶ್, ಇಬ್ರಾಹಿಂ, ಗೋಪಾಲ್ ,ಶರಣ್, ಪೂಜಾರಿ, ರವಿ ಹಾಗೂ ಗ್ರಾಮದ ಮುಖಂಡರು ಇದ್ದರು.