ಚಿಕ್ಕಮಗಳೂರು-ಡಾ ಬಿ ಆರ್ ಅಂಬೇಡ್ಕರ್ ಸಮಾಧಿಗೆ ಜಾಗವನ್ನು ನೀಡದ ಕಾಂಗ್ರೆಸ್ ಪಕ್ಷ ದ,ಲಿತರನ್ನು ಕೇವಲ ಮತಕ್ಕಾಗಿ ಬಳಸಿಕೊಂಡು ಬರುತ್ತಿದೆ.ನೆಪಮಾತ್ರಕ್ಕೆ ಮಾತ್ರ ಮಲ್ಲಿಕಾರ್ಜುನ್ ಖರ್ಗೆ ಅವರನ್ನು ಎ.ಐ.ಸಿ.ಸಿ ಅಧ್ಯಕ್ಷರಾಗಿಸಿದೆಯೇ ಹೊರತು ಅವರಿಗೆ ದಕ್ಕಬೇಕಾದ ಪ್ರಮುಖ ಅಧಿಕಾರಗಳನ್ನು ನೀಡದೆ ವಂಚಿಸಿದೆ ಎಂದು ಬಹುಜನ ಸಮಾಜ ಪಕ್ಷದ ರಾಜ್ಯಾಧ್ಯಕ್ಷ ಕೃಷ್ಣಮೂರ್ತಿ ಆರೋಪಿಸಿದರು.
ನಗರದ ಅಂಬೇಡ್ಕರ್ ಸಮುದಾಯ ಭವನದಲ್ಲಿ ಜಿಲ್ಲಾ ಬಹುಜನ ಸಮಾಜ ಪಕ್ಷದ ಕಾರ್ಯಕರ್ತರ ಸಭೆಯನ್ನು ಮಂಗಳವಾರ ಉದ್ಘಾಟಿಸಿ ಅವರು ಮಾತನಾಡಿದರು.
ಶೋಷಿತರು ಮುಂಚೂಣಿಗೆ ಧಾವಿಸುವ ಹಾಗೂ ಅಧಿಕಾರ ಪಡೆಯಲಿಚ್ಚಿಸುವ ನಿಟ್ಟಿನಲ್ಲಿ ಅಂಬೇಡ್ಕರ್ ಸಿದ್ಧಾಂತವನ್ನು ಪ್ರತಿಬಿಂಬಿಸುವ ಬಿಎಸ್ಪಿ ಪಕ್ಷವನ್ನು ಬಲಪಡಿಸುವುದು ಪ್ರತಿಯೊಬ್ಬರ ಧ್ಯೇಯವಾಗಬೇಕು.
ದೇಶವನ್ನಾಳಿದ ಎರಡು ರಾಷ್ಟ್ರೀಯ ಪಕ್ಷಗಳ ಕೊಡುಗೆ ಶೂನ್ಯವಾಗಿದೆ.ನೆಹರು ಕಾಲಘಟ್ಟದಿಂದ ಮೋದಿ ಕಾಲದವರೆಗೂ ಶೋಷಿತರಿಗೆ ಸ್ಪಂದಿಸುವ ಗುಣವನ್ನು ಯಾರೊಬ್ಬರೂ ಬೆಳೆಸಿಕೊಂಡಿಲ್ಲ.ಒಂದೆಡೆ ಬಿಜೆಪಿ ಧರ್ಮಗಳ ನಡುವೆ ವಿಷಬೀಜ ಭಿತ್ತಿದರೆ,ಇನ್ನೊಂದೆಡೆ ಕಾಂಗ್ರೆಸ್ ದಲಿತರ ಮತಕ್ಕಾಗಿ ಓಲೈಕೆ ರಾಜಕಾರಣ ಮಾಡಿ ಅಧಿಕಾರ ಗಿಟ್ಟಿಸಿಕೊಳ್ಳುತ್ತಿದೆ ಎಂದು ದೂರಿದರು.
ನೂರಾರು ವರ್ಷಗಳಿಂದ ವಾಸಿಸುತ್ತಿರುವ ಬಹುಜನರಿಗೆ ಇಂದಿಗೂ ಸ್ವಂತ ನಿವೇಶನ, ಭೂಮಿಗಳಿಲ್ಲ.ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಹಿಂದಾ ಮುಖವಾಡ ಧರಿಸಿ ದಲಿತರು, ಹಿಂದುಳಿದವರು ಹಾಗೂ ಶೋಷಿತರಿಗೆ ಮಂಕುಬೂದಿ ಎರಚುತ್ತಿದೆ.ಎಸ್ಸಿ,ಎಸ್ಟಿ ಸಮುದಾಯಗಳಿಗೆ ಮೀಸಲಿಟ್ಟಿದ ಕೋಟ್ಯಂತರ ಹಣವನ್ನು ಪಕ್ಷದ ಚಟುವಟಿಕೆ ಹಾಗೂ ಇನ್ನಿತರೆ ಕಾರ್ಯಕ್ಕೆ ದುರ್ಬಳಕೆ ಮಾಡಿಕೊಂಡು ದ್ರೋಹ ಎಸಗಿದೆ ಎಂದು ಆಕ್ರೋಶ ಹೊರಹಾಕಿದರು.
ಬಿಎಸ್ಪಿ ರಾಜ್ಯ ಉಪಾಧ್ಯಕ್ಷ ಝಾಕೀರ್ ಹುಸೇನ್ ಪ್ರಾಸ್ತಾವಿಕವಾಗಿ ಮಾತನಾಡಿ,ರಾಜ್ಯ ಸಮಿತಿಗೆ ನೂತನವಾಗಿ ಆಯ್ಕೆಗೊಂಡಿರುವ ಪದಾಧಿಕಾರಿಗಳ ಸಮಿತಿಯು ಮುಂಬರುವ ಚುನಾವಣೆಗಳಲ್ಲಿ ಪಕ್ಷವನ್ನು ಸದೃಢಗೊಳಿಸುವ ನಿಟ್ಟಿನಲ್ಲಿ ರಾಜ್ಯಾದ್ಯಂತ ಪ್ರವಾಸ ಕೈಗೊಂಡು ಪದಾಧಿಕಾರಿಗಳಿಗೆ ಶಕ್ತಿ ತುಂಬುವ ಕಾರ್ಯದಲ್ಲಿ ನಿರತವಾಗಿದೆ ಎಂದರು.
ಹಲವಾರು ದಾರ್ಶನಿಕರು,ಸಂತರು ಬಿಟ್ಟಿದ್ದ ಚಳುವಳಿಯನ್ನು ಅಂಬೇಡ್ಕರ್ ಹಾಗೂ ಕಾನ್ಷಿರಾಂರವರು ವಿಚಲೀತರಾಗದೇ ಸುಖ ಹಾಗೂ ನೆಮ್ಮದಿಯನ್ನು ಬದಿಗಿರಿಸಿ,ಶೋಷಿತರಿಗೆ ನೆರವಾಗಲು ಮುಂದುವರೆಸಿದರು.
ದೇಶದಲ್ಲಿ ಸಂವಿಧಾನವನ್ನು ಯಥಾವತ್ತಾಗಿ ಜಾರಿಗೊಳಿಸಿದರೆ ಬಡವರು,ಉದ್ಯೋಗ ವಂಚಿತರನ್ನು ನಿರ್ಮೂಲಗೊಳಿಸಬಹುದು ಎಂದು ಹೇಳಿದರು.
ಕಾರ್ಯಕ್ರಮ ಅಧ್ಯಕ್ಷತೆಯನ್ನು ಬಿಎಸ್ಪಿ ಜಿಲ್ಲಾಧ್ಯಕ್ಷ ಕೆ.ಟಿ.ರಾಧಾಕೃಷ್ಣ ವಹಿಸಿದ್ದರು.
ಈ ಸಂದರ್ಭದಲ್ಲಿ ಬಿಎಸ್ಪಿ ರಾಜ್ಯ ಸಂಯೋಜಕ ಅಶೋಕ್ ಚಕ್ರವತ್ರಿ, ಉಸ್ತುವಾರಿ ಗಂಗಾಧರ್ ಬಹುಜನ್, ಕಾರ್ಯದರ್ಶಿ ಕೆ.ಬಿ.ಸುಧಾ, ಜಿಲ್ಲಾ ಉಪಾಧ್ಯಕ್ಷೆ ಮಂಜುಳಾ, ತಾಲ್ಲೂಕು ಅಧ್ಯಕ್ಷ ಹೆಚ್.ಕುಮಾರ್, ಮುಖಂಡರುಗಳಾದ ಪರಮೇಶ್, ಜಾಕೀರ್ ಆಲಿಖಾನ್, ಗಂಗಾಧರ್, ವೇಲಾಯುಧನ್, ಮಂಜಯ್ಯ, ಶಂಕರ್, ಪಿ.ಕೆ.ಮಂಜು ನಾಥ್ ಮತ್ತಿತರರಿದ್ದರು.