ಚಿಕ್ಕಮಗಳೂರು-ನಗರದ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದಲ್ಲಿ ವಾಹನ ನಿಲುಗಡೆಯ ಅವ್ಯವಸ್ಥೆ ಹಾಗೂ ಸಾರ್ವಜನಿಕರ ತೊಂದರೆ ಸರಿಪಡಿಸಬೇಕು ಎಂದು ಒತ್ತಾಯಿಸಿ ಸಮಾಜ ಪರಿವರ್ತನಾ ಸಂಘದ ಮುಖಂಡರುಗಳು ಕೆ.ಎಸ್.ಆರ್.ಟಿ.ಸಿ. ವಿಭಾಗೀಯ ನಿಯಂತ್ರಣಾಧಿಕಾರಿಗೆ ಸೋಮವಾರ ಮನವಿ ಸಲ್ಲಿಸಿ ಆಗ್ರಹಿಸಿದರು.
ಬಳಿಕ ಮಾತನಾಡಿದ ಸಂಘದ ಅಧ್ಯಕ್ಷ ಆರ್.ಶ್ರೀನಿವಾಸ್, ನಗರ ಸೇರಿದಂತೆ ಗ್ರಾಮೀಣ ಪ್ರದೇಶಗಳಿoದ ಶಾಲೆ,ಆಸ್ಪತ್ರೆ, ತಾಲ್ಲೂಕು ಕಚೇರಿ ಹಾಗೂ ಇನ್ನಿತರೆ ಕೆಲಸಗಳಿಗಾಗಿ ಬರುವ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಹೆಚ್ಚಾಗಿ ಸರ್ಕಾರಿ ಬಸ್ ಸಂಚಾರವನ್ನು ಆಶ್ರಯಿಸಿದ್ದಾರೆ ಎಂದರು.
ಚಿಕ್ಕಮಗಳೂರು ಕೇಂದ್ರ ಬಸ್ ನಿಲ್ದಾಣದಲ್ಲಿ ವಾಹನಗಳ ನಿಲುಗಡೆ ಅವೈಜ್ಞಾನಿಕವಾಗಿದೆ. ಸಾರ್ವಜನಿಕರು ನಿಲ್ದಾಣದ ಒಳಗೆ ದ್ವಿಚಕ್ರ ಮತ್ತು ನಾಲ್ಕು ಚಕ್ರದ ವಾಹನಗಳನ್ನು ಅಡ್ಡಾದಿಡ್ಡಿ ನಿಲ್ಲಿಸಿರುವ ಕಾರಣ ಪ್ರಯಾಣಿಕರ ಓಡಾಟಕ್ಕೆ ಪರದಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ ಎಂದು ಹೇಳಿದರು.
ಬಸ್ ನಿಲ್ದಾಣದಲ್ಲಿ ಮೂಲಭೂತ ಸೌಕರ್ಯ, ನಿಲ್ದಾಣದ ಒಳಗೆ ಅಂಗಡಿಗಳಲ್ಲಿ ಶುಚಿತ್ವದ ಕೊರತೆ, ಸಿಹಿ ಹಾಗೂ ಆಹಾರ ಪದಾರ್ಥಗಳನ್ನು ಮುಚ್ಚಿಡದೇ ತೆರೆದಿರುವುದರಿಂದ ರೋಗ ಹರಡಲು ಸಾಧ್ಯತೆಗಳಿವೆ. ಅಲ್ಲದೇ ಅಂಗಡಿಗಳಲ್ಲಿ ಪದಾರ್ಥಗಳು ದುಬಾರಿ ಬೆಲೆಗೆ ಮಾರಾಟ ಮಾಡುತ್ತಿರುವುದು ಕಂಡುಬರುತ್ತಿದೆ ಎಂದರು.
ಸoಘದ ಪ್ರಧಾನ ಕಾರ್ಯದರ್ಶಿ ಜಗದೀಶ್ ಕೋಟೆ ಮಾತನಾಡಿ ಪ್ರಸ್ತುತ ಶೃಂಗಾರ್ ಹಾಗೂ ಹನುಮಂತಪ್ಪ ವೃತ್ತದಲ್ಲಿ ಬಸ್ ನಿಲುಗಡೆ ರದ್ದತಿಯಿಂದ ದೈನಂದಿನ ಸಂಚರಿಸುವ ಸಾರ್ವಜನಿಕರಿಗೆ ತೊಂದರೆ ಆಗುತ್ತಿದ್ದು ಪರಿಶೀಲನೆ ನಡೆಸಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಿಕೊಡಬೇಕು ಹಾಗೂ ಕೆ.ಎಸ್.ಆರ್. ಟಿ.ಸಿ. ಮೂಲಭೂತ ಸೌಕರ್ಯಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಸಂಘದ ಸದಸ್ಯರುಗಳಾದ ಅಬ್ಬಾಸ್ ಅಹ್ಮದ್, ಹಿರೇಮಗಳೂರು ಈಶ್ವರ್, ಯಶವಂತ್, ಸುರೇಶ್, ಶೇಖರ್ ಮತ್ತಿತರರಿದ್ದರು.
————–-ಸುರೇಶ್