ಕೆ.ಆರ್.ಪೇಟೆ-ತಾಲ್ಲೂಕಿನ ಗಡಿಗ್ರಾಮ ದಡಿಘಟ್ಟ ಗ್ರಾಮದ ಗ್ರಾಮ ದೇವತೆ ಶ್ರೀ ಲಕ್ಷ್ಮೀದೇವಿ ಅಮ್ಮನವರ ಸಿಡಿಲು ಕಲ್ಲು ಜಾತ್ರೆಯು ಸೋಮವಾರ ಸಡಗರ ಸಂಭ್ರಮದಿoದ ನಡೆಯಿತು.
ಪ್ರತಿ ವರ್ಷವು ದೀಪಾವಳಿ ಹಬ್ಬವು ಮುಗಿದ ನಂತರ ಕಾರ್ತೀಕ ಮಾಸದ ಮೊದಲನೇ ವಾರದಲ್ಲಿ ನಡೆಯುವ ಜಾತ್ರೆಯು ಅಪ್ಪಟ ಜಾನಪದ ಸೊಗಡಿನಿಂದ ನಡೆಯುತ್ತಾ ಬಂದಿರುವುದು ವಿಶೇಷವಾಗಿದೆ.
ಜಾತ್ರೆಯು ನಡೆಯುವುದಕ್ಕೆ ಮುನ್ನ ದಿನ ಶ್ರೀ ಲಕ್ಷ್ಮಿ ದೇವಿಯು ದಡಿಘಟ್ಟದಿಂದ ಚಲ್ಯ, ಕುಂಬೇನಹಳ್ಳಿ ಗ್ರಾಮಗಳಿಗೆ ಹೋಗಿ ನಂತರ ಸಿಡಿಲು ಕಲ್ಲು ಜಾತ್ರೆಗೆ ಆಗಮಿಸುತ್ತಾಳೆ. ಇಲ್ಲಿ ಮಧ್ಯಾಹ್ನದಿಂದ ಸಂಜೆವರೆಗೂ ಭಕ್ತಾಧಿಗಳಿಗೆ ಪೂಜೆ ಸಲ್ಲಿಸಲು ಅವಕಾಶ ಕಲ್ಪಿಸಲಾಗುತ್ತದೆ.
ಜೊತೆಗೆ ಬೆಟ್ಟದಹಳ್ಳಿ ಗ್ರಾಮದ ದೊಡ್ಡಯ್ಯ, ಚಿಕ್ಕಯ್ಯ, ಮೈಲಾರಲಿಂಗೇಶ್ವರ ಸ್ವಾಮಿಗೂ ಪೂಜೆ ಸಲ್ಲಿಸಲಾಗುತ್ತದೆ. ನಂತರ ಶ್ರೀ ಲಕ್ಷ್ಮಿದೇವಿ ಮತ್ತು ದೊಡ್ಡಯ್ಯ, ಚಿಕ್ಕಯ್ಯ, ಮೈಲಾರಲಿಂಗೇಶ್ವರ ಸ್ವಾಮಿಯವರ ಪೂಜಾ ಕುಣಿತ ಹಾಗೂ ಶ್ರೀ ಲಕ್ಷ್ಮಿ ದೇವಿ ಅಮ್ಮನವರ ಪಲ್ಲಕ್ಕಿ ಉತ್ಸವವು ಹೆಣ್ಣು ಮಕ್ಕಳ ಉಯ್ಯಾಲೆಯ ಜೊತೆ ಜೊತೆಗೆ ನಡೆಯುವುದು ಈ ಜಾತ್ರೆಯ ರಂಗನ್ನು ಹೆಚ್ಚಿಸುತ್ತದೆ.
ಭಕ್ತಾಧಿಗಳು ಸರತಿ ಸಾಲಿನಿಂತು ದೇವರ ದರ್ಶನ ಪಡೆದು ಹಣ್ಣು ಕಾಯಿ ಸಮರ್ಪಿಸಿ ತಮ್ಮ ಭಕ್ತಿ ಭಾವ ಪ್ರದರ್ಶನ ಮಾಡುತ್ತಾರೆ.ಹಾಲು ಮತ ಸಮುದಾಯದವರು ಶ್ರೀ ಲಕ್ಷ್ಮಿದೇವಿಗೆ ಕುರಿಗಳ ಪ್ರದರ್ಶನ ಮಾಡಿ ತಮ್ಮ ಭಕ್ತಿಯನ್ನು ಸಲ್ಲಿಸುತ್ತಾರೆ.
ಜಾತ್ರೆಯಲ್ಲಿ ಕೆ.ಆರ್.ಪೇಟೆ ತಾಲ್ಲೂಕು,ಚನ್ನರಾಯಪಟ್ಟಣ ತಾಲ್ಲೂಕು,ನಾಗಮಂಗಲ ತಾಲ್ಲೂಕಿನ ಸಾವಿರಾರು ಭಕ್ತಾದಿಗಳು ಭಾಗವಹಿಸಿದ್ದರು.
ದಡಿಘಟ್ಟ ಗ್ರಾಮದ ಹಿರಿಯ ಮುಖಂಡರು ಹಾಗೂ ಯುವಕರು ಜಾತ್ರಾ ಮಹೋತ್ಸವದ ನೇತೃತ್ವ ವಹಿಸಿದ್ದರು.
ಸ್ಥಳದ ವಿಶೇಷ
ಪಾಂಡವರು ಅಜ್ಞಾನವಾಸದ ವೇಳೆ ಸಿಡಿಲು ಕಲ್ಲು ಜಾತ್ರೆ ನಡೆಯುವ ಸ್ಥಳದಲ್ಲಿ ಬಂದು ವಾಸವಿದ್ದರು ಎಂಬ ಪ್ರತೀತಿ ಈ ಸ್ಥಳಕ್ಕೆ ಇದೆ. ಬೆಟ್ಟದ ಮೇಲೆ ಸಿಡಿದು ನಿಂತಿರುವ ಎರಡು ಬೃಹತ್ ಬಂಡೆಗಳು ಉರುಳಿ ಹೋಗದಂತೆ ಕೇವಲ ಸಣ್ಣ ಕಲ್ಲಿನಿಂದ ನಿಲ್ಲಿಸಿರುವಂತೆ ಇರುವುದು ಇಲ್ಲಿನ ಪವಾಡವಾಗಿದೆ.
ಪಾಂಡವರು ಅಜ್ಞಾತವಾಸಕ್ಕೆ ಬಂದಿದ್ದ ವೇಳೆ ಸಿಡಿದ ಕಲ್ಲುಗಳನ್ನು ತಾವು ಆಡುತ್ತಿದ್ದ ಅಣ್ಣೇ ಕಲ್ಲಿನಿಂದ ಉರುಳಿ ಹೋಗದಂತೆ ತಡೆದಿದ್ದಾರೆ ಎಂಬ ಜನಪದರ ಮಾತು ಪೌರಾಣಿಕ ಹಿನ್ನೆಲೆಯ ಜೊತೆ ಜೊತೆಗೆ ಈ ಭಾಗದ ಹಿರಿಯರಿಂದ ಕೇಳಿ ಬರುತ್ತದೆ.
—————-ಶ್ರೀನಿವಾಸ್ ಕೆ ಆರ್ ಪೇಟೆ