ತುಮಕೂರು:ತುಮಕೂರಿನ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ದುರಾಡಳಿತ ಹೆಚ್ಚುತ್ತಿದ್ದು, ಕಳೆದ ಐದು ವರ್ಷಗಳಿಂದ ಠಿಕಾಣಿ ಹೂಡಿರುವ ಸದ್ರುಲ್ಲಾ ಷರೀಫ್ ಅವರನ್ನು ಅಮಾನತುಮಾಡುವಂತೆ ಒತ್ತಾಯಿಸಿ ತುಮಕೂರು ನಗರ ಮತ್ತು ತಾಲ್ಲೂಕು ಲಾರಿ ಮಾಲೀಕರುಗಳ ಸಂಘ ಸಾರಿಗೆ ಆಯುಕ್ತರಿಗೆ ಪತ್ರ ಬರೆದಿತ್ತು.
ಕಳೆದ ಆಗಸ್ಟ್ ತಿಂಗಳಲ್ಲಿ ಸಂಘ ಪತ್ರ ಬರೆದಿದ್ದರೂ ಆಯುಕ್ತರು ಇಲ್ಲಿಯವರೆಗೂ ಯಾವುದೇ ಕ್ರಮ ಕೈಗೊಳ್ಳದ ಬಗ್ಗೆ ಸಾಕಷ್ಟು ಅನುಮಾನಗಳು ವ್ಯಕ್ತವಾಗುತ್ತಿವೆ.
ಪತ್ರದಲ್ಲಿ ಆರ್.ಟಿ.ಓ.ಕಚೇರಿ ಭ್ರಷ್ಟಾಚಾರ ತಾಣವನ್ನಾಗಿ ಮಾರ್ಪಡಿಸಿಕೊಂಡಿರುವ ಸದ್ರುಲ್ಲಾ ಷರೀಫ್ ಅವರು ಖಾಸಗಿ ವ್ಯಕ್ತಿಗಳ ಮೂಲಕ ಡಿ.ಎಲ್, ಎಫ್.ಸಿಗಳನ್ನು ಕಚೇರಿಯ ಹೊರಗಡೆ ಮಾಡುತ್ತಿದ್ದಾರೆ ಎಂದು ಸಂಘ ಆರೋಪಿಸಿತ್ತು.
ಶಾಲಾ-ಕಾಲೇಜು, ವಾಣಿಜ್ಯ ವಾಹನಗಳನ್ನು ಆರ್.ಟಿ.ಓ ಕಚೇರಿಗೆ ಕರೆಸದೇ, ವಾಹನಗಳು ಇರುವ ಸ್ಥಳಕ್ಕೆ ಹೋಗಿ ಎಫ್.ಸಿ (ಫಿಟ್ನೆಸ್ ಸರ್ಟಿಫಿಕೇಟ್) ಗಳನ್ನು ನೀಡುತ್ತಿದ್ದು ಕಾನೂನು ಮೀರಿ ವರ್ತಿಸುತ್ತಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಸರ್ಕಾರಿ ನೌಕರರಲ್ಲದ ಕೆಲ ಖಾಸಗಿ ವ್ಯಕ್ತಿಗಳನ್ನು ಇಟ್ಟುಕೊಂಡು ಡಿ.ಎಲ್, ಎಫ್.ಸಿ. ಅನುಪಯುಕ್ತ ವಾಹನಗಳ ವರದಿ ತೆಗೆಸಿ ತುಮಕೂರು, ಕುಣಿಗಲ್, ಶಿರಾ ಹಾಗೂ ಗುಬ್ಬಿ ತಾಲ್ಲೂಕುಗಳ ಕ್ರಷರ್ ಗಳಿಂದ ಅಧಿಕ ಭಾರ ಸಾಗಾಣಿಕೆಗೆ ಹಣ ಪಡೆಯುತ್ತಿದ್ದಾರೆ.
ಕಚೇರಿಯಲ್ಲಿರುವ ಅವರ ಕೊಠಡಿಯಲ್ಲಿ ಅನೇಕ ಖಾಸಗಿ ವ್ಯಕ್ತಿಗಳನ್ನು ಕೂರಿಸಿಕೊಂಡು ಸಾರಿಗೆ ಕಚೇರಿಗೆ ಬರುವ ವಾಣಿಜ್ಯ ವಾಹನಗಳ ಎಫ್.ಸಿಯನ್ನು, ವಾಹನಗಳನ್ನು ಪರಿಶೀಲಿಸದೇ ಹಣ ಪಡೆದು ನೀಡುತ್ತಿದ್ದಾರೆ, ಖಾಸಗಿ ವ್ಯಕ್ತಿಗಳಿಗೆ ತಮ್ಮ ಕೆಲಸಗಳನ್ನು ಹಂಚಿ ಮೇಲುಸ್ತುವಾರಿ ಮಾಡುತ್ತಿದ್ದಾರೆ ಎಂದು ಆರೋಪಿಸಿ ಸದ್ರುಲ್ಲಾ ಷರೀಫ್ ಅವರನ್ನು ಅಮಾನತುಗೊಳಿಸಿ, ವಿಚಾರಣೆ ನಡೆಸುವಂತೆ ಮನವಿ ಮಾಡಲಾಗಿತ್ತು.
ಕಿರಿಯ ಮೋಟಾರ್ ವಾಹನ ನಿರೀಕ್ಷಕರಾಗಿ ತುಮಕೂರಿಗೆ ಬಂದ ಸದ್ರುಲ್ಲಾ ಷರೀಫ್, ಹಿರಿಯ ಮೋಟಾರ್ ವಾಹನ ನಿರೀಕ್ಷಕರಾಗಿ ಮುಂಬಡ್ತಿ ಪಡೆದು ಕಳೆದ ಐದು ವರ್ಷಗಳಿಂದ ಇಲ್ಲಿಯೇ ಠಿಕಾಣಿ ಹೂಡಿದ್ದು, ಸರ್ಕಾರ ಇವರನ್ನು ವರ್ಗಾವಣೆ ಮಾಡಬೇಕು ಆಗ ಮಾತ್ರ ಆರ್.ಟಿ.ಓ ಕಚೇರಿಯಲ್ಲಿನ ದುರಾಡಳಿತ ಕೊನೆಯಾಗಲಿದೆ ಎಂದು ಸಂಘ ಅಭಿಪ್ರಾಯ ವ್ಯಕ್ತಪಡಿಸಿತ್ತು.
ಇಷ್ಟೆಲ್ಲ ಆರೋಪಗಳನ್ನು ಹೊತ್ತ ಅಧಿಕಾರಿಯ ವಿರುದ್ಧ ತನಿಖೆಯನ್ನು ನಡೆಸದ ಹಿರಿಯ ಅಧಿಕಾರಿಗಳ ವಿರುದ್ಧ ಸಂಘವು ಗರಂ ಆಗಿದ್ದು ಲೋಕಾಯುಕ್ತಕ್ಕೆ ದೂರು ನೀಡುವ ತೀರ್ಮಾನಕ್ಕೆ ಬರಲಾಗಿದೆ.