ಬೇಲೂರು-ಅಧಿಕಾರದ ದಾಹಕ್ಕೆ ಒಂದು ವರ್ಗದ ಜನರನ್ನು ಓಲೈಸಲು ಹೊರಟ ಸಿದ್ದರಾಮಯ್ಯನವರು ನಾಡಿನ ರೈತರು ಹಾಗು ಇತರ ವರ್ಗದ ಜನರನ್ನು ಸಂಕಷ್ಟಕ್ಕೆ ಸಿಲುಕಿಸಿದ್ದಾರೆ ಎಂದು ಶಾಸಕ ಹೆಚ್ ಕೆ ಸುರೇಶ್ ಕಿಡಿಕಾರಿದರು.
ಬಿ.ಜೆ.ಪಿ ಘಟಕದಿಂದ ಪಟ್ಟಣದ ತಾಲ್ಲೂಕು ಕಚೇರಿ ಬಳಿ ಹಮ್ಮಿಕೊಂಡಿದ್ದ ವಕ್ಫ್ ಮಂಡಳಿಯ ವಿರುದ್ದದ ಹೋರಾಟದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ವಕ್ಫ್ ಭೂತ ನಮ್ಮ ತಾಲೂಕಿಗೂ ಕಾಲಿಟ್ಟಿದ್ದು ಹಳೇಬೀಡು ಹೋಬಳಿಯಲ್ಲಿ ರೈತರೊಬ್ಬರ ಐದು ಎಕರೆ ಭೂಮಿಯ ಪಹಣಿಯಲ್ಲಿ ವಕ್ಫ್ ಆಸ್ತಿ ಎಂದು ನಮೂದಾಗಿದ್ದು ತಿಳಿದು ಬಂದಿದೆ.ರಾಜ್ಯದ ವಿಜಯಪುರದಲ್ಲಿ ವಕ್ಫ್ ಆಸ್ತಿ ಬಗ್ಗೆ ಹೋರಾಟ ನಡೆಸುತ್ತಿರುವ ಬೆನ್ನಲ್ಲೆ ಈ ಘಟನೆ ಬೆಳಕಿಗೆ ಬಂದಿದ್ದು ನಮ್ಮ ಪಾಡೇನಾಗುತ್ತದೆಯೋ ಎಂದು ತಾಲೂಕಿನ ರೈತಾಪಿ ವರ್ಗ ಚಿಂತೆಗೆ ಈಡಾಗುವಂತೆ ಮಾಡಿದೆ.
ಕೇವಲ ಮತ ಗಳಿಕೆಯ ಉದ್ದೇಶವೊಂದರಿಂದಲೇ ಅನ್ಯಕೋಮೊಂದರ ಜನರನ್ನು ಸಂತುಷ್ಟಿ ಗೊಳಿಸಲು ಸಿದ್ದರಾಮಯ್ಯನವರ ಸರಕಾರ ರೈತರ ಪ್ರಾಣ ಹಿಂಡುವ ಕೆಲಸಕ್ಕೆ ಮುಂದಾಗಿರುವುದು ವಿಷಾಧನೀಯ ಎಂದರು.
ವಕ್ಫ್ ಮಂಡಳಿಯ ಈ ಎಲ್ಲಾ ಕರಾಮತ್ತುಗಳ ಹಿಂದೆ ಸಿ ಎಂ ರವರ ಖಾಸಾ ಬಳಗದ ಸಚಿವ ಝಮೀರ್ ಅಹಮ್ಮದ್ ರವರ ಕೈವಾಡವಿದೆ.ಈ ಕೂಡಲೇ ಅವರ ರಾಜೀನಾಮೆಯನ್ನು ಪಡೆದು ಸಂಪೂರ್ಣ ಘಟನೆಯ ಬಗ್ಗೆ ತನಿಖೆ ನಡೆಸಬೇಕು ಎಂದು ಶಾಸಕ ಹೆಚ್ ಕೆ ಸುರೇಶ್ ಆಗ್ರಹಿಸಿದರು.
ತಾಲೂಕಿನ ರೈತರು ಹಾಗು ಸಾರ್ವಜನಿಕರು ತಮ್ಮ ಆಸ್ತಿಗಳ ದಾಖಲಾತಿಗಳನ್ನು ಪರಿಶೀಲನೆ ಮಾಡಿಕೊಳ್ಳುವಂತೆ ಮನವಿ ಮಾಡಿಕೊಂಡ ಅವರು ಶ್ರೀ ಚನ್ನಕೇಶವ ಸ್ವಾಮಿ ದೇವಾಲಯದ ದಾಖಲೆಗಳನ್ನು ಪರೀಕ್ಷಿಸುವಂತೆ ಸಂಬಂಧ ಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.
ಬಿ.ಜೆ.ಪಿ ಮಾಜಿ ಜಿಲ್ಲಾಧ್ಯಕ್ಷ ರೇಣುಕುಮಾರ್ ಮಾತನಾಡಿ, ಭ್ರಷ್ಟಾಚಾರಗಳ ಸರಮಾಲೆಯಲ್ಲಿ ಅಧಿಕಾರ ನಡೆಸುತ್ತಿರುವ ರಾಜ್ಯ ಸರ್ಕಾರ ಮೂಡ ಹಗರಣದಿಂದ ಜನರ ಗಮನ ಸರಿಸಲು ವಕ್ಫ್ ಎಂಬ ಅಸ್ತ್ರವನ್ನು ಬಿಟ್ಟಿದೆ.
ಸಚಿವ ಜಮೀರ್ ಖಾನ್ ಒಬ್ಬ ನೀಡಿದ ಹೇಳಿಕೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕುಮ್ಮಕ್ಕು ನೀಡುವ ಮೂಲಕ ರಾಜ್ಯ ಜನತೆಯ ಆಶೋತ್ತರಗಳಿಗೆ ಧಕ್ಕೆ ತರಲಾಗಿದೆ.ಈ ದುಷ್ಟ ಕಂಟಕಪ್ರಾಯವಾಗಿರುವ ಸರ್ಕಾರವನ್ನು ರಾಜ್ಯಪಾಲರು ಶೀಘ್ರವೇ ವಜಾಗೊಳಿಸಬೇಕಿದೆ. ಇಲ್ಲವಾದರೆ ಮುಂದಿನ ದಿನದಲ್ಲಿ ಹೋರಾಟ ಹೆಚ್ಚಲಿದೆ ಎಂದರು.
ಆದಷ್ಟು ಶೀಘ್ರ ವಕ್ಫ್ ಮಂಡಳಿಯ ಆಟಾಟೋಪಗಳಿಗೆ ಬ್ರೇಕ್ ಹಾಕದೆ ಹೋದಲ್ಲಿ ಮನೆಮನೆಗಳಿಂದಲೂ ಜನ ಬೀದಿಗಿಳಿದು ಹೊರಾಟ ನಡೆಸಲಿದ್ದಾರೆಂದು ಅವರು ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ಬಿ.ಜೆ.ಪಿ ತಾಲ್ಲೂಕು ಅಧ್ಯಕ್ಷ ಸಂಜುಕೌರಿ, ಮುಖಂಡರುಗಳಾದ ಜೆ.ಕೆ.ಕುಮಾರ್, ಪವರ್ತಯ್ಯ,ಬಸವರಾಜು, ಶೋಭಗಣೇಶ್,ಯತೀಶ್, ವಿನಯ್, ಪ್ರಸನ್ನ, ಕೋಟೆ ಶ್ರೀನಿವಾಸ್, ವಿಜಯಕುಮಾರ್, ಸಿ.ಎಸ್.ಪ್ರಕಾಶ್ ಸೇರಿದಂತೆ ಇನ್ನು ಮುಂತಾದವರು ಹಾಜರಿದ್ದರು.