ಮೂಡಿಗೆರೆ:ಸರ್ವಧರ್ಮಿಯರ ಏಳಿಗೆಯನ್ನು ಬಯಸುವ ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರಹೆಗ್ಗಡೆಯವರು ರಾಜ್ಯಸಭಾ ಸದಸ್ಯರಾದಾಗ ಅವರು ಒಂದು ಪಕ್ಷವನ್ನು ಪ್ರತಿನಿಧಿಸಬಾರದಿತ್ತು ಎಂದೆನಿಸಿತ್ತು.ಆದರೆ ಅವರನ್ನು ಬೇಟಿ ಮಾಡಿ ಚರ್ಚಿಸಿದಾಗ ನನಗೆ ಯಾವುದೇ ಪಕ್ಷವಿಲ್ಲ. ನನಗೆ ಎಲ್ಲರೂ ಸಮಾನರು ಎಂದು ಹೇಳಿದಾಗ ಸಂತೋಷವಾಯಿತು ಎಂದು ಮಾಜಿ ಸಚಿವೆ ಡಾ.ಮೋಟಮ್ಮ ತಿಳಿಸಿದರು.
ಅವರು ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಮತ್ತು ಶೌರ್ಯ ಮತ್ತು ವಿಪತ್ತು ಘಟಕದಿಂದ ಲೋಕವಳ್ಳಿ ಗ್ರಾಮದ ಮನೆಯಿಲ್ಲದ ಒಂಟಿವೃದ್ದೆ ಲಕ್ಷಾಮಮ್ಮ ಎಂಬುವವರಿಗೆ ಮನೆ ನಿರ್ಮಿಸಿ ಕೊಟ್ಟು ಅದನ್ನು ಹಸ್ತಾಂತರಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಲಾಭ ಪಡೆದಿರುವ ಜನರು ನೆಮ್ಮದಿಯಾಗಿದ್ದಾರೆ. ಈ ಯೋಜನೆಯಿಂದ ಜನರ ಸಂಕಷ್ಟಕ್ಕೆ ಸಾಲ ಸೇರಿದಂತೆ ಬಡವರಿಗೆ ಆರ್ಥಿಕನೆರವು, ವೃದ್ದರಿಗೆ ಮಾಸಿಕಪಿಂಚಣಿ,ಶಿಕ್ಷಣ, ಆರೋಗ್ಯ ಹಾಗೂ ನಿರ್ಗತಿಕರಿಗೆ ಮನೆ ನಿರ್ಮಿಸಿ ಕೊಡುವ ವಿನೂತನ ಯೋಜನೆಯಿಂದಾಗಿ ಧರ್ಮಾಧಿಕಾರಿ ಶ್ರೀವೀರೇಂದ್ರ ಹೆಗ್ಡೆಯವರ ಘನತೆ ಮತ್ತಷ್ಟು ಹೆಚ್ಚಾಗಿದೆ.
ಮೂಡಿಗೆರೆಯಲ್ಲಿ ನಾನು ಹಲವಾರು ವರ್ಷಗಳು ಸಾಮೂಹಿಕ ವಿವಾಹ ಕಾರ್ಯ ನಡೆಸಿಕೊಂಡು ಬಂದಿದ್ದು,ಆಗ ವಧೂ-ವರರಿಗೆ ತಾಳಿ ಮತ್ತು ಬಟ್ಟೆಯನ್ನು ಶ್ರೀ ಕ್ಷೇತ್ರದಿಂದಲೇ ನೀಡಿದ್ದಾರೆ. ಈಗ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಸ್ವ ಸಹಾಯ ಗುಂಪುಗಳನ್ನು ರಚಿಸಿ ಫಲಾನುಭವಿಗಳನ್ನು ಆಯ್ಕೆ ಮಾಡಿ ವಿವಿಧ ರೀತಿಯ ಸವಲತ್ತುಗಳನ್ನು ನೀಡುತ್ತಿದ್ದಾರೆ. ಸ್ವಸಹಾಯ ಗುಂಪಿನ ಮಹಿಳೆಯರು ಸಂಘದಲ್ಲಿ ಹೆಚ್ಚಿನ ಸಾಲಪಡೆದು ಸಂಕಷ್ಟಕ್ಕೆ ಸಿಲುಕಿಕೊಳ್ಳಬಾರದು.ಅಗತ್ಯಕ್ಕೆ ಮಾತ್ರ ಸಾಲ ಮಾಡಿ ತಮ್ಮ ಆರ್ಥಿಕ ಸಂಕಷ್ಟವನ್ನು ಪರಿಹರಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಪ್ರದೇಶಿಕ ನಿರ್ಧೇಶಕ ವಿವೇಕ್ ವಿನ್ಸಂಟ್ ಪಾಯಿಸ್ ಮಾತನಾಡಿ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯಿಂದ ವಾತ್ಸಲ್ಯ ಯೋಜೆನೆಯಡಿ ಮೂಡಿಗೆರೆ ತಾಲೂಕಿನಲ್ಲಿ 8 ಮನೆಗಳನ್ನು ನಿರ್ಮಿಸಿಕೊಟ್ಟಿದ್ದು ರಾಜ್ಯಾದ್ಯಂತ ಇದುವರೆಗೆ 2ಸಾವಿರ ಮನೆಗಳನ್ನು ನಿರ್ಮಿಸಿದ್ದಾರೆ.10 ಸಾವಿರ ಮಂದಿಗೆ ಮಾಸಿಕ 1ಸಾವಿರ ರೂ ಪಿಂಚಣಿ ನೀಡಲಾಗುತ್ತಿದೆ. ಅದಕ್ಕಾಗಿ ವಾರ್ಷಿಕ 12 ಕೋಟಿ ರೂ ಖರ್ಚಾಗುತ್ತಿದೆ. ಗ್ರಾಮಾಭಿವೃದ್ದಿ ಯೋಜನೆಗೆ ರಾಜ್ಯಾದ್ಯಂತ 58ಲಕ್ಷ ಮಂದಿ ಫಲಾನುಭವಿ ಗಳಿದ್ದಾರೆ. 45 ಸಾವಿರ ಕೋಟಿರೂಗಳ ವ್ಯವಹಾರ ನಡೆಯುತ್ತಿದೆ.ಕೃಷಿ ಕೈಗಾರಿಕೆ ಸೇರಿದಂತೆ ಹಲವು ಉಪಯುಕ್ತ ಯೋಜನೆ ಜಾರಿಯಲ್ಲಿದೆ. ಯೋಜನೆಯ ಲಾಭ ಪಡೆದವರು ಉನ್ನತಮಟ್ಟದ ಅಧಿಕಾರಿಗಳಾ ಗಿದ್ದಾರೆ. ಸ್ವ-ಉದ್ಯೋಗ ಮತ್ತು ಕೃಷಿಕ್ಷೇತ್ರಕ್ಕೆ ಧುಮುಕಿ ಸ್ವಾವಲಂಭಿಗಳಾಗಿದ್ದಾರೆ
ಎoದು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಫಲಾನುಭವಿ ಲಕ್ಷಾಮಮ್ಮ ಅವರಿಗೆ ಶ್ರೀ ವೀರೇಂದ್ರ ಹೆಗ್ಗಡೆ ಮತ್ತು ಶ್ರೀ ಮಂಜುನಾಥಸ್ವಾಮಿಯ ಫೋಟೋದೊಂದಿಗೆ ಹಣ್ಣು ಹಂಪಲು, ಸೀರೆ ಕೊಡುವ ಮೂಲಕ ಮನೆಯನ್ನು ಹಸ್ತಾಂತರಿಸಲಾಯಿತು.
ತಾಲೂಕು ಯೋಜನಾಧಿಕಾರಿ ಪಿ.ಶಿವಾನಂದ, ಹಳೇಮೂಡಿಗೆರೆ ಗ್ರಾ.ಪಂ.ಸದಸ್ಯೆ ಸಫಿಯ, ಮಾಜಿ ಅಧ್ಯಕ್ಷ ಲೋಕವಳ್ಳಿ ರಮೇಶ್,ಶೌರ್ಯ ಮತ್ತು ವಿಪತ್ತು ಘಟಕದ ಮಾಸ್ಟರ್ ಪ್ರವೀಣ್ ಪೂಜಾರಿ, ರವಿ ಪೂಜಾರಿ, ಬೆಳ್ತಂಗಡಿ ತಾಲೂಕಿನ ಯೋಜನಾಧಿಕಾರಿಗಳಾದ ಕಿಶೋರ್, ನಾಗರಾಜ್, ದಾಮೋದರ್, ಶ್ರೇಯಸ್,ಪ್ರಶಾಂತ್, ರವೀಂದ್ರ ಮತ್ತಿತರರಿದ್ದರು.
——-ವಿಜಯಕುಮಾರ್, ಮೂಡಿಗೆರೆ