ಹಾಸನ:ಹಲ್ಮಿಡಿ ಶಾಸನ ದೊರೆತ ಸ್ಥಳವನ್ನು ಖ್ಯಾತ ಗ್ರಾನೈಟ್ ಉದ್ಯಮಿ ರಾಜಶೇಖರ್ ಅವರ ಸಹಕಾರದಿಂದ ಮತ್ತಷ್ಟು ಉನ್ನತ ದರ್ಜೆಗೆ ಅಭಿವೃದ್ಧಿಪಡಿಸಲಾಗಿದ್ದು, ಉದ್ಘಾಟನೆಗೆ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ.ಮುಖ್ಯಮಂತ್ರಿಗಳ ಸಮಯವನ್ನು ಕಾಯುತ್ತಿದ್ದು, ಅತೀ ಶೀಘ್ರದಲ್ಲಿ ಉದ್ಘಾಟನಾ ಕಾರ್ಯಕ್ರಮ ನೆರವೇರಿಸಲಾಗುವುದು ಎಂದು ರಾಜ್ಯೋತ್ಸವ ಸುವರ್ಣ ಸಂಭ್ರಮ ಪ್ರಶಸ್ತಿ ವಿಜೇತ ಹಾಗೂ ಪತ್ರಕರ್ತ ಎಚ್.ಬಿ.ಮದನ್‌ಗೌಡ ತಿಳಿಸಿದರು.
ನಗರದ ಖಾಸಗಿ ಹೋಟೆಲ್‌ನಲ್ಲಿ ಬುಧವಾರ ರೋಟರಿ ಕ್ಲಬ್ ಹಾಸನ್ ರಾಯಲ್ ಸಂಸ್ಥೆ ವತಿಯಿಂದ ಹಮ್ಮಿಕೊಂಡಿದ್ದ ವಾರದ ಸಭೆಯಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಕನ್ನಡ ಭಾಷೆಗೆ ನಮ್ಮ ಜಿಲ್ಲೆಯಲ್ಲಿ ದೊರೆತಿರುವ ಹಲ್ಮಿಡಿ ಶಾಸನದ ಕೊಡುಗೆ ಅಪಾರವಾದದ್ದು.ಹಲ್ಮಿಡಿ ಗ್ರಾಮದಲ್ಲಿ ಕೇವಲ ಒಂದು ಕಲ್ಲಿನ ರೂಪದಲ್ಲಿ ಇದ್ದ ಶಾಸನದಲ್ಲಿನ ಕನ್ನಡ ಭಾಷೆಯ ಬಗ್ಗೆ ಇದ್ದಂತಹ ಮಾಹಿತಿಗಳನ್ನು ಸಂಶೋಧಕ ಎಂ.ಎಚ್.ಕೃಷ್ಣಯ್ಯ ಅವರು ನಾಡಿಗೆ ತಿಳಿಸಿಕೊಟ್ಟರು.
ರಾಜ್ಯ ಸರ್ಕಾರದ ಅಂದಿನ ಸಚಿವರಾಗಿದ್ದ ರಾಣಿ ಸತೀಶ್ ಅವರು ಶಾಸನದ ಸಂರಕ್ಷಣೆಯ ಜವಬ್ದಾರಿಯನ್ನು ಮಾಡಿದರು. ಇದಾದ ಬಳಿಕ ಅಂದಿನ ಹಾಸನ ಜಿಲ್ಲಾಧಿಕಾರಿಗಳಾಗಿದ್ದ ಎಲ್.ಕೆ. ಅತೀಕ್ ಅವರು ಹಲ್ಮಿಡಿ ಶಾಸನದ ಪ್ರತಿರೂಪಕವಾಗಿ ಮತ್ತೊಂದು ಶಾಸನವನ್ನು ಮಾಡಿಸಿ ಗ್ರಾಮದಲ್ಲಿ ಇರಿಸಿ ಸರ್ಕಾರದ ಒಂದು ಯೋಜನೆಯನ್ನು ಬಳಸಿಕೊಂಡು ಅದಕ್ಕೊoದು ಮಂಟಪದ ಆಕಾರವನ್ನು ನೀಡಿದರು ಎಂದು ನೆನಪುಗಳನ್ನು ಹಂಚಿಕೊಂಡರು.
ಬೇಲೂರು ವಿಧಾನಸಭಾ ಕ್ಷೇತ್ರದ ಶಾಸಕ ರುದ್ರೇಶ್‌ಗೌಡ ಅವರು ಈ ಗ್ರಾಮಕ್ಕೆ ರಸ್ತೆ ಸಂಪರ್ಕ ಕಲ್ಪಿಸಿಕೊಡುವ ಮೂಲಕ ಅಭಿವೃದ್ಧಿಗೆ ಸಹಕಾರ ನೀಡಿದರು. ತಾವು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿದ್ದ ವೇಳೆ ಈ ಹಲ್ಮಿಡಿ ಶಾಸನದ ಬಗ್ಗೆ ಜನ ಸಾಮಾನ್ಯರಿಗೆ ಜಾಗೃತಿ ಮೂಡಿಸುವ ಕೆಲಸ ಮಾಡುವುದರ ಜೊತೆಗೆ ನಮ್ಮ ಯುವ ಪೀಳಿಗೆಗೆ ಇದರ ಬಗ್ಗೆ ತಿಳಿಸಿಕೊಡುವ ಪ್ರಯತ್ನ ಮಾಡಲಾಯಿತು ಎಂದರು.
ನಮ್ಮ ಜಿಲ್ಲೆಯ ಅನೇಕ ಯುವಕರಿಗೆ ಹಲ್ಮಿಡಿ ಶಾಸನ ನಮ್ಮ ಜಿಲ್ಲೆಯಲ್ಲಿ ಇದೇ ಎಂಬುವುದೇ ತಿಳಿದಿರಲಿಲ್ಲ. ಕಾಲೇಜು ಯುವಕ ಯುವತಿಯರಿಗೆ ರಸಪ್ರಶ್ನೆಯಂತಹ ಸ್ಪರ್ಧೆಗಳನ್ನು ಏರ್ಪಡಿಸುವ ಮೂಲಕ ಶಾಸನದ ಬಗ್ಗೆ ತಿಳಿಸಿಕೊಡುವ ಕೆಲಸ ಮಾಡಲಾಯಿತು ಎಂದು ಹೇಳಿದರು.
ಹಾಸನ ಜಿಲ್ಲೆಯೆಂದರೆ ಕೇವಲ ರಾಜಕೀಯ ಎಂಬ ನಾಣ್ಣುಡಿ ಇದೆ, ಇದನ್ನು ಹೊಗಲಾಡಿಸುವ ಸಲುವಾಗಿ ಕಲೆ, ಸಂಸ್ಕೃತಿಕೆ ಒತ್ತು ನೀಡುವ ಕೆಲಸ ಆಗಬೇಕು. ನಮ್ಮ ಜಿಲ್ಲೆಯಲ್ಲಿರುವ ಪ್ರವಾಸಿ ತಾಣಗಳು, ಶಿಲ್ಪ ಕಲೆಗಳು ಇತರೆ ರಾಷ್ಟ್ರಗಳಲ್ಲಿ ಇದ್ದಿದ್ದರೆ ಅದರ ಚಿತ್ರಣವೆ ಬೇರೆ ಇರುತಿತ್ತು. ನಮ್ಮಲ್ಲಿ ಹೆಜ್ಜೆಗೊಂದು ಮಧ್ಯಪಾನದಂಗಡಿ ಮಾಡುವ ಬದಲು ಪುಸ್ತಕದ ಅಂಗಡಿಗಳನ್ನು ಮಾಡಬೇಕಾದ ಅವಶ್ಯಕತೆ ಇದೆ ಎಂದು ಬೇಸರ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಈಚೆಗೆ ನಗರದ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ನಡೆದ ರೋಟರಿ ವಲಯ ಮಟ್ಟದ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಭಾಗವಹಿಸಿ ವಿವಿಧ ಸ್ಪರ್ಧೆಗಳಲ್ಲಿ ಬಹುಮಾನ ಪಡೆದಿದ್ದ ರೋಟರಿ ಕ್ಲಬ್ ಆಪ್ ಹಾಸನ ರಾಯಲ್ ಸಂಸ್ಥೆಯ ವಿಜೇತ ರೋಟರಿ ಸದಸ್ಯರಿಗೆ ಇದೇ ವೇಳೆ ಬಹುಮಾನ ಹಾಗೂ ಪ್ರಶಸ್ತಿ ಪತ್ರ ನೀಡಲಾಯಿತು.
ರೋಟರಿ ಕ್ಲಬ್ ಹಾಸನ್ ರಾಯಲ್ ಸಂಸ್ಥೆಯ ಅಧಕ್ಷ ಯು.ವಿ. ಸಚ್ಚಿನ್,ಕಾರ್ಯದರ್ಶಿ ಪುನೀತ್, ಖಜಾಂಚಿ ರವಿ ಕುಮಾರ್ ಪಿ., ವಲಯ ಸೇನಾನಿ ಡಾ.ವಿಕ್ರಂ, ಸದಸ್ಯರಾದ ಎಸ್. ಯೋಗೇಶ್, ಬಿ.ಕೆ.ಟೈಮ್ಸ್ ಗಂಗಾಧರ್,ವೇಣುಗೋಪಾಲ್, ಆರ್. ಯೋಗೇಶ್, ಕೆ.ಸಿ. ನವೀನ್, ಡಾ.ಎಂ.ಡಿ. ನಿತ್ಯಾನಂದ,ಸುನೀಲ್, ಚಂದನ್, ವಿನಯ್, ಅತಿಥ್, ದಿಲೀಪ್ ಕುಮಾರ್ ಎಚ್.ಕೆ., ಮಹೇಶ್,ಡಾ.ಎಚ್.ಎನ್. ಹರೀಶ್, ಶ್ರೀನಂದ, ಪಾಂಡು ಕುಮಾರ್, ದರ್ಶನ್ ಹಾಗೂ ಇತರರು ಹಾಜರಿದ್ದರು.