ಹೊಳೆನರಸೀಪುರ:ದೀಪದ ಕೆಳೆಗೆ ಕತ್ತಲು ಎನ್ನುವಂತೆ ಪುರಸಭೆಯ ಪಕ್ಕ, ಕೋಟೆ ಪ್ರವೇಶ ರಸ್ತೆಯಲ್ಲಿ ದೊಡ್ಡಗುಂಡಿ ಬಿದ್ದು ಮಳೆ ಬಂದಾಗ ನೀರು ನಿಂತು,ವಾಹನಗಳ ಹಾಗೂ ಸಾರ್ವಜನಿಕರ ಓಡಾಟಕ್ಕೆ ತೀವ್ರ ತೊಂದರೆ ಆಗುತ್ತಿದೆ.
ಪುರಸಭೆ ಮುಂಭಾಗದ ಗಾಂಧೀವೃತ್ತ, ಸುಭಾಶ್ ವೃತ್ತ, ಹಾಸನ ಮೈಸೂರು ರಸ್ತೆಯ ಕೋಳಿ ಅಂಗಡಿ ಮುಂಭಾಗ, ಹೌಸಿಂಗ್ ಬೋರ್ಡ್ ನಿಂದ ಎಲ್.ಐ.ಸಿ ಕಚೇರಿಗೆ ಹೋಗುವ ರಸ್ತೆ ಸೇರಿದಂತೆ ಅನೇಕ ರಸ್ತೆಗಳು ಗುಂಡಿ ಬಿದ್ದು ವಾಹನಗಳ ಹಾಗೂ ಸಾರ್ವಜನಿಕರ ಓಡಾಟಕ್ಕೆ ತೀವ್ರ ತೊಂದರೆ ಆಗುತ್ತಿದ್ದು ಈ ಬಗ್ಗೆ ಪತ್ರಿಕೆ ವಿಸ್ತೃತ ವರದಿ ಪ್ರಕಟಿಸಿತ್ತು.
ಆದರೂ ಅದನ್ನು ಮುಚ್ಚಿ ಸಾರ್ವಜನಿಕರಿಗೆ ಹಾಗೂ ವಾಹನಗಳ ಓಡಾಟಕ್ಕೆ ಅನುಕೂಲ ಮಾಡಿಕೊಟ್ಟಿಲ್ಲ ಎಂದು ಸಾರ್ವಜನಿಕರು ಪುರಸಭೆ ಆಡಳಿತದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬೀದಿ ನಾಯಿಗಳ ದರ್ಬಾರು
ಪೇಟೆ, ಕೋಟೆ ಮುಖ್ಯರಸ್ತೆ, ಹೌಸಿಂಗ್ ಬೋರ್ಡ್ ವೃತ್ತ, ನರಸಿಂಹನಾಯಕನಗರ, ತಾಲ್ಲೂಕು ಕಚೇರಿ ರಸ್ತೆ, ಅರಕಲಗೂಡು ರಸ್ತೆ, ರಿವರ್ ಬ್ಯಾಂಕ್ ರಸ್ತೆಗಳಲ್ಲಿ ಹತ್ತಾರು ನಾಯಿಗಳು ಹಿಂಡು, ಹಿಂಡಾಗಿ ತಿರುಗುತ್ತಾ ಕಚ್ಚಾಡುತ್ತಾ, ಬೊಗಳುತ್ತಾ ಆತಂಕ ಸೃಷ್ಟಿಸುತ್ತಿವೆ.
ಈ ಹಿಂದೆ ನಾಯಿಗಳ ಹಿಂಡು ನರಸಿಂಹನಾಯಕ ನಗರದ ಬಾಲಕನೊಬ್ಬನ ಮೇಲೆ ದಾಳಿ ನಡೆಸಿದ್ದವು. ಈ ಬಗ್ಗೆಯೂ ಪತ್ರಿಕೆಗಳಲ್ಲಿ ವರದಿ ಪ್ರಕಟವಾಗಿತ್ತು.
ಆಗ ಪುರಸಭೆ ಅಧಿಕಾರಿಗಳು ರಸ್ತೆ ಡಾಂಬರಿಕರಣಗೊಳಿಸುವ, ನಾಯಿಗಳನ್ನು ಹಿಡಿಸುವ ಬಗ್ಗೆ ಮಾತನಾಡಿದ್ದರು. ಆದರೆ ಇದುವರೆವಿಗೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ನರಸಿಂಹನಾಯಕನಗರದ ನಿವಾಸಿ ವಸಂತ, ರಮೇಶ, ಪ್ರವೀಣ ದೂರಿದ್ದಾರೆ.
ರಸ್ತೆ ಗುಂಡಿಗಳಲ್ಲಿ ಇಳಿದು, ಬೈಕ್ ಸವಾರರು ಪ್ರಾಣ ಕಳೆದುಕೊಂಡರೆ, ನಾಯಿಗಳುಕಚ್ಚಿ ಅನಾಹುತ ಸಂಭವಿಸಿದರೆ ಯಾರು ಹೊಣೆ ಎಂದು ಸಾರ್ವಜನಿಕರು ಕೇಳುವ ಪ್ರಶ್ನೆಗೆ ಪುರಸಭೆ ಉತ್ತರಿಸಬೇಕಿದೆ.
—————--ವಸಂತ್ ಕುಮಾರ್