ಚಿಕ್ಕಮಗಳೂರು-ಆಂಗ್ಲಭಾಷೆ ಜೊತೆಗೆ ಮಾತೃಸ್ವರೂಪಿ ಕನ್ನಡಕ್ಕೂ ಹೆಚ್ಚಿನ ಮಹತ್ವ ನೀಡುವುದು ಅವಶ್ಯಕ-ಕಣ್ಣನ್

ಚಿಕ್ಕಮಗಳೂರು-ಆಂಗ್ಲಭಾಷೆ ಜೊತೆಗೆ ಮಾತೃಸ್ವರೂಪಿ ಕನ್ನಡಕ್ಕೂ ಹೆಚ್ಚಿನ ಮಹತ್ವ ನೀಡುವುದು ಅವಶ್ಯಕವಾಗಿದ್ದು ಮಕ್ಕಳಿಗೆ ಬಾಲ್ಯದಲ್ಲೇ ಭಾಷಾಭಿಮಾನ ಮೂಡಿಸುವ ದಂತಕಥೆಗಳನ್ನು ಪಾಲಕರು ಪರಿಚಯಿಸಬೇಕು ಎಂದು ಕನ್ನಡ ಪೂಜಾರಿ ಹಿರೇಮಗಳೂರು ಕಣ್ಣನ್ ಹೇಳಿದರು.

ನಗರದ ಬೈಪಾಸ್ ಸಮೀಪದ ನರ್ಚರ್ ಇಂಟರ್ ನ್ಯಾಷನಲ್ ಶಾಲೆಯಲ್ಲಿ ಏರ್ಪಡಿಸಿದ್ಧ 69ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಗುರುವಾರ ಉದ್ಘಾಟಿಸಿ ಅವರು ಮಾತನಾಡಿದರು.

ವಿದ್ಯಾರ್ಥಿ ಜೀವನದಲ್ಲೇ ಮಕ್ಕಳಿಗೆ ಕನ್ನಡಪ್ರೇಮ ಬೆಳೆಸುವ ನಿಟ್ಟಿನಲ್ಲಿ ಶಿಕ್ಷಕರು ಹಾಗೂ ಪಾಲಕರು ಚುಟುಕು ಸಾಹಿತ್ಯ, ನೀತಿಕಥೆ, ಗಾದೆೆ, ಒಗಟು, ಹನಿಗವನ ಸೇರಿದಂತೆ ಕನ್ನಡಾಭಿಮಾನದ ಆಸಕ್ತಿಯನ್ನು ಪ್ರೇರೇಪಿಸಬೇಕು. ಆಗ ಮಾತ್ರ ಬಾಲ್ಯದಿಂದಲೇ ಕನ್ನಡಪ್ರೀತಿ ಚಿಗುರೊಡೆಯಲು ಸಾಧ್ಯವಾಗಲಿದೆ ಎಂದರು.

ನಾಡಿನ ಖ್ಯಾತ ಕವಿಗಳು, ಶ್ರೇಷ್ಟ ಸಂತರು, ದಾರ್ಶನಿಕರು ವಿಭಿನ್ನ ಶೈಲಿಯಿಂದಲೇ ಕೃತಿಗಳ ರಚನೆ, ವಚನಗಳ ಮುಖಾಂತರ ಭಾಷಾಭಿಮಾನ ಮೆರೆದಿರುವ ಕಾರಣ ಕನ್ನಡವು ಎಲ್ಲೆಡೆ ವಿಶಾಲವಾಗಿ ಪಸರಿಸಿದೆ. ಹೀಗಾಗಿ ಇಂದಿನ ಯುವಸಮೂಹ ಜಾಗೃತೆ ವಹಿಸುವ ಮೂಲಕ ಕನ್ನಡದ ಬೆಳಕನ್ನು ಬತ್ತದಂತೆ ನಿಗಾವಹಿ ಸಬೇಕು ಎಂದು ಹೇಳಿದರು.

ಶಾಲೆಯ ಬೋಧಕ ವರ್ಗವು ಅನೇಕ ವಿಷಯಗಳ ಅಭ್ಯಾಸಿಸುವ ವೇಳೆಯಲ್ಲಿ ಭಾಷಾಭಿಮಾನದ ಸೊಗಡನ್ನು ಹಂತ ಹಂತವಾಗಿ ವಿದ್ಯಾರ್ಥಿಗಳಿಗೆ ತಿಳಿಹೇಳಬೇಕು.ಅಲ್ಲದೇ ನಾಡಿಗಾಗಿ ದುಡಿದ ಕವಿಸಂತರ ಜೀವನಚರಿತ್ರೆಯನ್ನು ಪರಿಚಯಿಸಿದಾಗ ಮಾತ್ರ ಮುಂದಿನ ಪೀಳಿಗೆಗೆ ಕನ್ನಡವನ್ನು ಉಳಿಸಿ, ಬೆಳೆಸಲು ಅನುಕೂಲವಾಗಲಿದೆ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಲೆಯ ಪ್ರಾಂಶುಪಾಲೆ ಸುಪ್ರೀಯಾ, ನರ್ಚರ್ ಶಾಲೆ ಆಂಗ್ಲಮಾಧ್ಯಮದ ಜೊತೆಗೆ ಕನ್ನಡಪ್ರೀತಿಯನ್ನು ಮಕ್ಕಳಿಗೆ ನಿರಂತರವಾಗಿ ಕಲಿಸುತ್ತಿದೆ. ಆ ನಿಟ್ಟಿನಲ್ಲಿ ಬ್ರಿಟಿಷರ ವಿರುದ್ಧ ಹೋರಾಡಿದ ರಾಜ್ಯದ ಸೇನಾನಿಗಳು, ಸಾಧಕರ ತ್ಯಾಗ, ಬಲಿದಾನದ ಪರಿಪಾಠವನ್ನು ಮಕ್ಕಳಿಗೆ ತಿಳಿಸುವ ಕೆಲಸ ಮಾಡುತ್ತಿದೆ ಎಂದು ಹೇಳಿದರು.

ಕಾರ್ಯಕ್ರಮಕ್ಕೂ ಮುನ್ನ ಕನ್ನಡ ಪೂಜಾರಿ ಕಣ್ಣನ್ ಅವರಿಗೆ ಕನ್ನಡರಥದ ಮೂಲಕ ವೇದಿಕೆತನಕ ಕರೆತರಲಾಯಿತು.

ವಿಶೇಷವಾಗಿ ವಿಜಯನಗರ ಸಾಮ್ರಾಜ್ಯವನ್ನು ಪ್ರತಿಬಿಂಬಿಸುವ ಸ್ಥಬ್ದಚಿತ್ರಗಳು ಶಾಲಾ ಆವರಣದಲ್ಲಿ ಪ್ರದರ್ಶನಗೊಂಡವು.ಸಾಂಸ್ಕೃತಿಕ ಕಾರ್ಯಕ್ರಮ ನಂತರ ಉತ್ತಮ ಸ್ಥಬ್ದಚಿತ್ರ ತಯಾರಿಸಿದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

ಈ ಸಂದರ್ಭದಲ್ಲಿ ಶಾಲೆಯ ಆಡಳಿತ ವ್ಯವಸ್ಥಾಪಕ ರಾಕೇಶ್, ವ್ಯವಸ್ಥಾಪಕ ಪ್ರೀತ್ರೇಶ್, ಶಿಕ್ಷಕರಾದ ಪುಷ್ಪರಾಜ್, ಕಾವ್ಯ, ಸವಿತಾ ಮತ್ತಿತರರಿ ಉಪಸ್ಥಿತರಿದ್ದರು.

————ಸುರೇಶ್

Leave a Reply

Your email address will not be published. Required fields are marked *

× How can I help you?