ಬೇಲೂರು-ರಾಜ್ಯೋತ್ಸವ ಪುರಸ್ಕೃತ ಪ್ರದೀಪ್ ತಿರುಮನಹಳ್ಳಿಯವರಿಗೆ ವಿವಿಧ ದ,ಲಿತ ಸಂಘಟನೆಗಳಿಂದ ಸನ್ಮಾನ

ಬೇಲೂರು-ಮನುಷ್ಯ ತನ್ನ ಬದುಕಿಗಾಗಿ ನಡೆಸುವ ಹೋರಾಟದ ಜೊತೆಗೆ ಸಮಾಜಕ್ಕಾಗಿಯೂ ತನ್ನನ್ನು ಸಮರ್ಪಿಸಿಕೊಂಡರೆ ಆತನಿಂದ ಸಹಾಯ ಪಡೆದ ಅದೇ ಸಮಾಜ ಆ ವ್ಯಕ್ತಿಯನ್ನು ಎತ್ತರಕ್ಕೆ ಒಯ್ಯುತ್ತೇ ಎಂಬುದಕ್ಕೆ ಪ್ರದೀಪ್ ತಿರುಮನಹಳ್ಳಿಯವರೇ ಸಾಕ್ಷಿ ಎಂದು ಭೌದ್ಧ ಉಪಾಸಕರಾದ ಶಶಿಧರ್ ಮೌರ್ಯ ಹೇಳಿದರು.

ಪಟ್ಟಣದ ಪ್ರಾರ್ಥನಾ ಅಕಾಡಮಿಯಲ್ಲಿ ವಿವಿಧ ದ,ಲಿತ ಸಂಘಟನೆಗಳ ವತಿಯಿಂದ ನಡೆದ ತಾಲೂಕು ರಾಜ್ಯೋತ್ಸವ ಪುರಸ್ಕೃತ ಪ್ರದೀಪ್ ತಿರುಮನಹಳ್ಳಿಯವರ ಅಭಿನಂದನಾ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಸಂವಿಧಾನ ಶಿಲ್ಪಿ ಬಾಬಾಸಾಹೇಬರು ಸಮಾಜ ಸೇವೆಯ ಅಗತ್ಯತೆಯನ್ನು ನಮಗೆ ಕಲಿಸಿ ಹೋಗಿದ್ದಾರೆ.ಪ್ರತಿಯೊಬ್ಬರೂ ಅವರು ಹಾಕಿಕೊಟ್ಟಿರುವ ದಾರಿಯಲ್ಲಿ ನಡೆದು ನಿರ್ಗತಿಕರ, ಅಬಲರ ಸೇವೆಯನ್ನು ಮಾಡುವ ಮನೋಭಾವ ಬೆಳೆಸಿಕೊಳ್ಳಬೇಕು.ಪ್ರದೀಪ್ ತಿರುಮನಹಳ್ಳಿಯವರು 24 /7 ತಂಡದ ಜೊತೆಗೂಡಿ ಮಾಡಿರುವ ಸಮಾಜ ಸೇವೆಯನ್ನೇ ಆಧಾರವಾಗಿಟ್ಟುಕೊಂಡು ತಾಲೂಕು ಆಡಳಿತ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಸಿದೆ.ಇನ್ನಷ್ಟು ಉತ್ತಮ ಕಾರ್ಯಗಳು ಅವರಿಂದ ನೆರವೇರಲಿ ಮತ್ತಷ್ಟು ಪ್ರಶಸ್ತಿಗಳು ಅವರದ್ದಾಗಲಿ ಎಂದು ಶಶಿಧರ್ ಮೌರ್ಯ ಹಾರೈಸಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಪ್ರದೀಪ್ ತಿರುಮನಹಳ್ಳಿ,ನಾನು ಪ್ರಶಸ್ತಿಗೋಸ್ಕರ ಸಮಾಜ ಸೇವಾ ಕಾರ್ಯದಲ್ಲಿ ತೊಡಗಿಲ್ಲ.ನನಗೆ ಸಾಕಷ್ಟನ್ನು ಕೊಟ್ಟಿರುವ ಈ ಸಮಾಜಕ್ಕೆ ಏನನ್ನಾದರು ಮರಳಿ ಕೊಡಬೇಕೆನ್ನುವ ಮಹತ್ವಾಕಾಂಕ್ಷೆ ನನ್ನದಾಗಿದೆ.ನನ್ನ ಅಣ್ಣ ಶಿಕ್ಷಕ ಟಿ.ಸಿ ಸಂಪತ್ ನನಗೆ ಮಾದರಿಯಾಗಿದ್ದು ಅವರು ಹಾಕಿಕೊಟ್ಟ ದಾರಿಯಲ್ಲಿಯೇ ನಾನು ನಡೆಯುತ್ತಿದ್ದೇನೆ ಎಂದರು.

ರಾಷ್ಟ್ರ ಕವಿ ಕುವೆಂಪು ಹಾಗು ಬಾಬಾ ಸಾಹೇಬ್ ಅಂಬೇಡ್ಕರ್ ಇನ್ನಿತರ ಮಹನೀಯರ ಆಧರ್ಶಗಳನ್ನು ಅಳವಡಿಸಿಕೊಂಡು ಸಮಾಜದ ಉದ್ದಾರಕ್ಕಾಗಿ ಹಗಲಿರುಳು ಶ್ರಮಿಸುತ್ತಿರುವ 24 /7 ಸಮಾಜ ಸೇವಾ ತಂಡದ ಸದಸ್ಯನಾಗಿರುವುದಕ್ಕೆ ನನಗೆ ಹೆಮ್ಮೆಯಿದೆ.ನನ್ನ ಸಹವರ್ತಿಗಳಿಗೂ ಹಾಗು ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಿದ ಎಲ್ಲರಿಗು ಧನ್ಯವಾದಗಳನ್ನು ತಿಳಿಸುವುದಾಗಿ ಹೇಳಿದರು.

24/7 ಸಮಾಜ ಸೇವ ತಂಡದ ಶಿಕ್ಷಕ ಸಂಪತ್ ಟಿ.ಸಿ ಮಾತನಾಡಿ,ತಾಲೂಕು ಆಡಳಿತ ಪ್ರದೀಪ್ ತಿರುಮನಹಳ್ಳಿಗೆ ಪ್ರಶಸ್ತಿ ನೀಡಿರುವುದು ಆತನಿಗಿಂತಲೂ ನಮ್ಮ ತಂಡಕ್ಕೆ ಜಾಸ್ತಿ ಖುಷಿ ತಂದಿದೆ.ಅರ್ಹರಿಗೆ ಪ್ರಶಸ್ತಿ ನೀಡಿದ ತಾಲೂಕು ಆಡಳಿತಕ್ಕೆ ಹಾಗು ಆಯ್ಕೆ ಮಾಡಿದ ಮಂಡಳಿಗೂ ಧನ್ಯವಾದಗಳನ್ನು ತಿಳಿಸುತ್ತೇನೆ ಎಂದರು.

ಈ ಸಂದರ್ಭದಲ್ಲಿ ಭೀಮ್ ಆರ್ಮಿ ತಾಲೂಕು ಅಧ್ಯಕ್ಷರಾದ ಕೀರ್ತಿ ಬಿ.ಎ, ಕಾರ್ಯದರ್ಶಿ ಸುನಿಲ್, ಸಂಚಾಲಕರುಗಳಾದ ಅಮಿತ್, ಶರಣ್, ಹರೀಶ್, ದಿರಾನ್, ರಾಕೇಶ್, ಅರೇಹಳ್ಳಿ ಹೋಬಳಿ ಅಧ್ಯಕ್ಷರಾದ ಗಿರೀಶ್ ,ಬಿ.ವಿ.ಎಸ್ ಸಂಯೋಜಕರಾದ ಲಕ್ಷ್ಮೀನಾರಾಯಣ್, ಅಧ್ಯಕ್ಷರಾದ ರಾಜು, ಸಂಚಾಲಕರಾದ ಭೂಮೇಶ್, ಪಶು ವೈದ್ಯಕೀಯ ಪರಿವೀಕ್ಷಕರಾದ ರವಿಕುಮಾರ್, ಶಿಕ್ಷಕರಾದ ಲಕ್ಷ್ಮಣ್ , ಹರೀಶ್ ಹಾಗೂ ಇನ್ನಿತರರು ಹಾಜರಿದ್ದರು.

Leave a Reply

Your email address will not be published. Required fields are marked *

× How can I help you?