ಚಿಕ್ಕಮಗಳೂರು-ವಿದ್ಯಾರ್ಥಿಗಳ ಕಲಿಕೆಗೆ ಹಾಗೂ ಹೊಸದಾದ ಜೀವನ ಕೌಶಲ್ಯವನ್ನು ಹೊಂದಲು ಪ್ರತಿಭಾ ಕಾರಂಜಿ ಉತ್ತಮ ವೇದಿಕೆ-ಗುರುಮಲ್ಲಪ್ಪ

ಚಿಕ್ಕಮಗಳೂರು-ವಿದ್ಯಾರ್ಥಿಗಳ ಕಲಿಕೆಗೆ ಹಾಗೂ ಹೊಸದಾದ ಜೀವನ ಕೌಶಲ್ಯವನ್ನು ಹೊಂದಲು ಪ್ರತಿಭಾ ಕಾರಂಜಿ ಉತ್ತಮ ವೇದಿಕೆಯಾಗಿದ್ದು ವಿದ್ಯಾರ್ಥಿಗಳಲ್ಲಿನ ಪ್ರತಿಭೆಯನ್ನು ಗುರುತಿಸಿ ಹೊರತರಲು ಶಿಕ್ಷಕರು ಮುಂದಾಗಬೇಕು ಎಂದು ನಗರಸಭೆ ಸದಸ್ಯ ಗುರುಮಲ್ಲಪ್ಪ ಹೇಳಿದರು.

ಜಿ.ಪಂ., ತಾ.ಪಂ. ಶಾಲಾ ಶಿಕ್ಷಣ ಇಲಾಖೆ,ನಗರಸಭೆ, ಸಮೂಹ ಸಂಪನ್ಮೂಲ ಕೇಂದ್ರ, ದಂಟರಮಕ್ಕಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸಹಯೋಗದಲ್ಲಿ ಶ್ರೀ ಗುರುಸಿದ್ಧರಾಮೇಶ್ವರ ದೇವಾಲಯದ ಆವರಣದಲ್ಲಿ ಶುಕ್ರವಾರ ನಗರ-3 ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮಕ್ಕಳಲ್ಲಿ ಸುಪ್ತವಾಗಿರುವ ಪ್ರತಿಭೆಗಳನ್ನು ಹೊರತರಲು ಶಿಕ್ಷಣ ಇಲಾಖೆಯು ರೂಪಿಸಿರುವ ಅತ್ಯುತ್ತಮ ಕಾರ್ಯಕ್ರಮಗಳಲ್ಲಿ ಪ್ರತಿಭಾ ಕಾರಂಜಿಯು ಒಂದು.ಶಾಲಾ ಹಂತದಿoದ ಆರಂಭವಾಗುವ ಸ್ಪರ್ಧೆಗಳು ಕ್ಲಸ್ಟರ್,ತಾಲೂಕು, ಜಿಲ್ಲಾ, ರಾಜ್ಯ ಮಟ್ಟದವರೆಗೂ ನಡೆದು ಮಕ್ಕಳ ಪ್ರತಿಭಾ ಪ್ರದರ್ಶನಕ್ಕೆ ಸೂಕ್ತ ವೇದಿಕೆಯನ್ನು ಒದಗಿಸುತ್ತವೆ ಎಂದರು.

ಮಕ್ಕಳ ವಯೋಮಾನಕ್ಕನುಸಾರವಾಗಿ ವಿವಿಧ ಬಗೆಯ ಸ್ಪರ್ಧೆಗಳು ನಡೆಯುವುದರಿಂದ ಮಕ್ಕಳಲ್ಲಿರುವ ಬಹುಮುಖ ಪ್ರತಿಭೆಯನ್ನು ಹೊರತರಲು ಈ ಕಾರ್ಯಕ್ರಮದಿಂದ ಸಹಾಯವಾಗಿದೆ.ಅದರಂತೆ ಪ್ರತಿಭಾ ಕಾರಂಜಿಯಲ್ಲಿ ಸುಮಾರು 20ಕ್ಕೂ ಹೆಚ್ಚು ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿರುವುದು ಹೆಮ್ಮೆಯ ಸಂಗತಿ ಎಂದು ಹೇಳಿದರು.

ಸಮನ್ವಯಾಧಿಕಾರಿ ನಾಗರಾಜ್ ಪ್ರಾಸ್ತಾವಿಕವಾಗಿ ಮಾತನಾಡಿ, ವಿದ್ಯಾರ್ಥಿದೆಸೆಯಲ್ಲಿ ಸಂಪೂರ್ಣ ವಿಕಸನ ಹೊಂದಲು ಪಾಲಕರು ಹಾಗೂ ಶಿಕ್ಷಕರು ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಬೇಕು.ಇದರಿಂದ ಮಕ್ಕಳು ಪಠ್ಯದ ಚಟುವಟಿಕೆ ಜೊತೆಗೆ ಕಲಾಸಕ್ತಿಯನ್ನು ರೂಢಿಸಿಕೊಳ್ಳಲು ಸಹಕಾರಿಯಾಗುತ್ತದೆ ಎಂದು ಹೇಳಿದರು.

ಪ್ರತಿಭಾ ಕಾರಂಜಿ ಪ್ರಾರಂಭಗೊoಡಿದ್ದೆ ಚಿಕ್ಕಮಗಳೂರು ಜಿಲ್ಲೆಯಿಂದ.ಗೋವಿಂದೇಗೌಡರು ಶಿಕ್ಷಣ ಮಂತ್ರಿಯಾದ ವೇಳೆಯಲ್ಲಿ ಮಕ್ಕಳಿಗೆ ಪ್ರೋತ್ಸಾಹಿಸಲು ಪ್ರತಿಭಾ ಕಾರಂಜಿ ಸೃಷ್ಟಿಸಿದ್ದು ಇದೀಗ ರಾಜ್ಯಾದ್ಯಂತ ಲಕ್ಷಾಂತರ ಮಕ್ಕಳು ತಮ್ಮಲ್ಲಿ ಅಡಗಿರುವ ಪ್ರತಿಭೆಯನ್ನು ಅನಾವರಣಗೊಳಿಸಲು ಸಹಕಾರಿಯಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ಪುಟ್ಟೇಗೌಡ, ಮಕ್ಕಳಿಗೆ ಮಿಮಿಕ್ರಿ, ಛದ್ಮವೇಷ,ಭಕ್ತಿಗೀತೆ,ಇಂಗ್ಲೀಷ್-ಹಿoದಿ ಕಂಠಪಾಠ, ಪ್ರಬಂಧ ಸ್ಪರ್ಧೆ ಹಾಗೂ ಚಿತ್ರಕಲೆ ಸೇರಿದಂತೆ ಸುಮಾರು 28 ಸ್ಪರ್ಧೆಗಳನ್ನು ಆಯೋಜಿಸಿದ್ದು ಪ್ರಥಮ ಸ್ಥಾನ ಪಡೆದುಕೊಂಡ ವಿದ್ಯಾರ್ಥಿಗಳು ತಾಲ್ಲೂಕು ಮಟ್ಟಕ್ಕೆ ಆಯ್ಕೆಯಾಗುವರು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಅಕ್ಷರ ದಾಸೋಹ ನಿರ್ದೇಶಕ ನೀಲಕಂಠಪ್ಪ, ಶಿಕ್ಷಣ ಸಂಯೋಜಕಿ ಜಾನಕಮ್ಮ, ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ಡಿ.ಸಿ.ಪುಟ್ಟೇಗೌಡ, ಗೌರವಾಧ್ಯಕ್ಷ ನಟರಾಜ್, ಕಾರ್ಯದರ್ಶಿ ಡಿ.ಟಿ. ಜಗದೀಶ್, ಶಾಲೆಯ ಮುಖ್ಯಶಿಕ್ಷಕಿ ಶಾರದಮ್ಮ, ದೈಹಿಕ ಶಿಕ್ಷಕ ಬಿ.ಡಿ.ಶಂಕರ್, ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಕಿರಣ್ ಮತ್ತಿತರರು ಉಪಸ್ಥಿತರಿದ್ದರು.

—————-ಸುರೇಶ್

Leave a Reply

Your email address will not be published. Required fields are marked *

× How can I help you?