ಕೊರಟಗೆರೆ-ಮಾದ್ಯಮಗಳು ಸುದ್ದಿಗಳನ್ನು ಬಿತ್ತರಿಸುವಾಗ ಸಂಪೂರ್ಣವಾಗಿ ಘಟನೆಯ ನೈಜತೆಯನ್ನು ಅರ್ಥಮಾಡಿಕೊಳ್ಳಬೇಕು.ಸಮಾಜದಲ್ಲಿ ತಪ್ಪುಗಳಿದ್ದರೆ ಅವುಗಳನ್ನು ತಿದ್ದುವ ಕೆಲಸ ಮಾಡಬೇಕು.ಆದರೆ ಮಾಧ್ಯಮದ ಜ್ಞಾನವೇ ಇಲ್ಲದ ಹಲವು ಯೂಟ್ಯೂಬ್ ಚಾನೆಲ್ಲುಗಳು ಜನರ ಹಾದಿ ತಪ್ಪಿಸುವ ಕೆಲಸ ಮಾಡುವುದರ ಜೊತೆಗೆ ಹಣ ವಸೂಲಿಗೂ ಇಳಿದಿದ್ದು ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಗೃಹ ಸಚಿವ ಡಾ ಜಿ ಪರಮೇಶ್ವರ್ ತಿಳಿಸಿದರು.
ಇತ್ತೀಚೆಗೆ ತಾಲೂಕಿನ ಬಜ್ಜಹಳ್ಳಿಯ ಏಕಲವ್ಯ ವಸತಿ ಶಾಲೆಯಲ್ಲಿ 8ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿ ಅಭಿಲಾಷ್ ಮೃತ ಪಟ್ಟ ಹಿನ್ನಲೆಯಲ್ಲಿ ಶಾಲೆಗೆ ಬೇಟಿ ನೀಡಿ ಪರಿಶೀಲನೆ ನಡೆಸಿ ಅವರು ಮಾತನಾಡಿದರು.
ಪತ್ರಿಕೋದ್ಯಮ ಹಿಂದಿನಂತಿಲ್ಲ.ಸುದ್ದಿಗಳ ನೈಜತೆಯನ್ನು ಅರಿತು ಪ್ರಕಟ ಮಾಡುವ ವರದಿಗಾರಿಕೆ ಮಾಯವಾಗುತ್ತಿದೆ.ಹಣಕ್ಕಾಗಿ ಪೀಡಿಸುವುದನ್ನೇ ಕಾಯಕ ಮಾಡಿಕೊಂಡಿರುವ ಪತ್ರಕರ್ತರ ಬಗ್ಗೆ ಸಾಕ್ಷಿಗಳ ಸಮೇತ ಮಾಹಿತಿಗಳು ದೊರೆತಿದ್ದು ಅವರ ವಿರುದ್ಧ ಕಠಿಣಾತಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ತಾಲೂಕಿನಲ್ಲಿ ಏಕಲವ್ಯ ಸೇರಿದಂತೆ ಹಲವು ವಸತಿ ಶಾಲೆಗಳನ್ನು ತರುವುದಕ್ಕಾಗಿ ನಾನು ಹಗಲಿರುಳು ಶ್ರಮಿಸಿದ್ದೇನೆ.ಈ ಶಾಲೆಗಳ ನಿರ್ಮಾಣಕ್ಕೆ ಇಲಾಖೆ ಮತ್ತು ಸರ್ಕಾರಗಳ ಬಳಿ ಅಲೆದಿದ್ದೇನೆ. ಪ್ರತಿಭಾವಂತ ಬಡ ವಿದ್ಯಾರ್ಥಿಗಳಿಗೆ ಮೂಲಬೂತ ಸೌಕರ್ಯದೊಂದಿಗೆ ಗುಣಾತ್ಮಕ ಶಿಕ್ಷಣ ನೀಡಬೇಕೆಂಬ ನನ್ನ ಶ್ರಮವನ್ನು ನಿಮ್ಮಂತಹವರು ಬಂದು ಹಾಳು ಮಾಡುತ್ತೀರ ಎಂದು ವಸತಿ ಶಾಲೆಗಳ ಅಧಿಕಾರಿ ಮತ್ತು ಪ್ರಾಂಶುಪಾಲರ ಮೇಲೆ ಆಕ್ರೋಶ ವ್ಯಕ್ತ ಪಡಿಸಿದರು.
ಮೊದಲು ನಿಲಯದ ಭೂಜನ ಶಾಲೆಯ ವ್ಯವಸ್ಥೆಯನ್ನು ಪರಿಶೀಲಿಸಿ ಆಹಾರ ಗುಣಮಟ್ಟವನ್ನು ಕಾಪಾಡುವಂತೆ ವಾರ್ಡನ್ ಗೆ ಎಚ್ಚರಿಸಿದರು.ವಿದ್ಯಾರ್ಥಿ ನಿಲಯದಲ್ಲಿ ಮೂಲಭೂತ ಸೌಕರ್ಯದ ಕೊರತೆ ಹಾಗೂ ವಿಧ್ಯಾರ್ಥಿ ನಿಲಯದ ಅವ್ಯವಸ್ಥೆಯನ್ನು ಕಂಡು ಕೆಂಡಾ ಮಂಡಲವಾದರು. ಶಾಲಾ ತರಗತಿಗೆ ಬೇಟಿ ನೀಡಿ ವಿದ್ಯಾರ್ಥಿಗಳ ಕಲಿಕೆಯನ್ನು ಪರಿಶೀಲಿಸಿ ಸಂತಸ ವ್ಯಕ್ತಪಡಿಸಿದರು.ನಂತರ ಏಕಲವ್ಯ ವಸತಿ ಶಾಲೆಯ ಪ್ರಾಂಶುಪಾಲರು ಎಲ್ಲಾ ಶಿಕ್ಷಕರು ಸಿಬ್ಬಂದಿ, ಆರೋಗ್ಯ ತಪಾಸಕರ ಸಭೆ ಕರೆದು ಹಲವು ಸಲಹೆ ಸೂಚನೆಗಳನ್ನು ನೀಡಿದರು.
ಸ್ಥಳದಲ್ಲೆ ಇದ್ದ ಪರಿಶಿಷ್ಠ ಪಂಗಡದ ಕಲ್ಯಾಣಾಧಿಕಾರಿ ತ್ಯಾಗರಾಜು ಹಾಗೂ ಕೆ.ಆರ್.ಡಿ.ಎಲ್ ಇಂಜಿನಿಯರ್ಗೆ ವಸತಿ ನಿಲಯದ ಮೂಲಭೂತ ಸೌಕರ್ಯಗಳ ಕೊರತೆಯ ಕಾಮಗಾರಿ ಪಟ್ಟಿಯನ್ನು ಮಾಡಿ ಸಲ್ಲಿಸುವಂತೆ ಆದೇಶಿಸಿದರು.ವಿದ್ಯಾರ್ಥಿಗಳ ಪರೀಕ್ಷಾ ಫಲಿತಾಂಶದ ಪಟ್ಟಿಗಳನ್ನು ನೋಡಿ ಅಸಮಧಾನ ವ್ಯಕ್ತ ಪಡಿಸಿದ ಗೃಹ ಸಚಿವರು ಪ್ರತಿ ವಿಷಯಗಳ ಶಿಕ್ಷಕ ಮತ್ತು ಶಿಕ್ಷಕಿಯರನ್ನು ಕರೆದು ವಿಷಯಗಳ ಬಗ್ಗೆ ವಿದ್ಯಾರ್ಥಿಗಳಿಗೆ ಯಾವ ರೀತಿ ಉತ್ತಮ ಬೋದನೆ ಮಾಡಬೇಕು ಎಂಬ ಬಗ್ಗೆ ತಿಳಿಸಿದರು.
ಏಕಲವ್ಯ ವಸತಿ ಶಾಲೆಯನ್ನು ರಾಜ್ಯ ಸರ್ಕಾರದಿಂದ ಕೇಂದ್ರ ಸರ್ಕಾರ ಸಂಪೂರ್ಣ ಸುಪರ್ದಿಗೆ ತೆಗೆದುಕೊಂಡಿದೆ.ಸುಮಾರು 8ತಿಂಗಳಿಂದ ವಸತಿ ನಿಲಯದಲ್ಲಿ ಸಂಪೂರ್ಣ ಶಿಕ್ಷಕರು ಮತ್ತು ಸಿಬ್ಬಂದಿ ಬದಲಾಗಿ ಹೊರ ರಾಜ್ಯಗಳಿಂದ ನೇಮಕ ಗೊಂಡಿದ್ದಾರೆ.ಇವರಲ್ಲಿ ಶೇ.95 ಮಂದಿಗೆ ಕನ್ನೆಡ ಬಾಷೆ ಬರುವುದಿಲ್ಲ.ಇದನ್ನು ಅರಿತ ಗೃಹ ಸಚಿವರು ಸುಮಾರು 2 ಗಂಟೆಗಳ ಕಾಲ ಹೊಸ ಶಿಕ್ಷಕ ಸಿಬ್ಬಂದಿಗಳ ಸಭೆ ನಡೆಸಿ ಹಲವು ಮಾರ್ಗದರ್ಶನ ಮತ್ತು ಸೂಚನೆಗಳನ್ನು ನೀಡಿದರು. ಹಾಗೂ ಮತ್ತೆ ಬೇಟಿ ನೀಡುವುದಾಗಿ ತಿಳಿಸಿ ಮುಂದಿನ ದಿನಗಳಲ್ಲಿ ವಸತಿ ನಿಲಯದ ಗುಣಮಟ್ಟದಲ್ಲಿ ಹಲವು ಬದಲಾವಣೆ ತರುವಂತೆ ತಿಳಿಸಿದರು.
ಮೃತ ವಿದ್ಯಾರ್ಥಿ ಕುಟುಂಬಕ್ಕೆ ಪರಿಹಾರ
ಏಕಲವ್ಯ ವಸತಿ ಶಾಲೆಯಲ್ಲಿ ಮೃತಪಟ್ಟ ವಿದ್ಯಾರ್ಥಿ ಮನೆಗೆ ಗೃಹ ಸಚಿವರು ಬೇಟಿ ನೀಡಿ ಸಾಂತ್ವಾನ ಹೇಳಿದರು. ವೈಯಕ್ತಿಕವಾಗಿ 2 ಲಕ್ಷ ರೂಗಳ ನಗದನ್ನು ತಂದೆ-ತಾಯಿಗಳಿಗೆ ನೀಡಿ ಕುಟುಂಬದ ಒಬ್ಬರಿಗೆ ನೌಕರಿ ಕೊಡಿಸುವುದಾಗಿ ಭರವಸೆ ನೀಡಿದರು.
ಮೃತ ವಿದ್ಯಾರ್ಥಿಯ ಮರಣೋತ್ತರ ಪರೀಕ್ಷೆಯಲ್ಲಿ ಹೃದಯಾಘಾತದ ಸಹಜ ಸಾವು ಎಂದು ವರದಿ ಬಂದಿರುವುದಾಗಿ ತಿಳಿದು ಬಂದಿದ್ದು ಇನ್ನು ಹೆಚ್ಚಿನ ತನಿಖೆಗಾಗಿ ಎಫ್.ಎಸ್.ಎಲ್ ಗೆ ಕಳುಹಿಸಿಕೊಡಲಾಗಿದೆ ಎಂದು ಮಾಹಿತಿ ನೀಡಿದರು.
ಕಿತ್ತೂರು ರಾಣಿ ಚನ್ನಮ್ಮ ಮತ್ತು ಮುರಾರ್ಜಿ ವಸತಿ ಶಾಲೆಗಳ ಪರಿಶೀಲನೆ
ಏಕಲವ್ಯ ವಸತಿ ಶಾಲೆ ಪರಿಶೀಲನೆಗೆ ಮುನ್ನಾ ಡಾ.ಜಿ.ಪರಮೇಶ್ವರ ಹುಲಿಕುಂಟೆ ಗ್ರಾಮದ ಹೆಣ್ಣು ಮಕ್ಕಳ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಗೆ ಬೇಟಿ ನೀಡಿ ಸಂಪೂರ್ಣ ಪರಿಶೀಲನೆ ಮಾಡಿದರು.ಇತ್ತೀಚೆಗೆ ಈ ವಸತಿ ಶಾಲೆಯಲ್ಲಿ ಹಲವು ಅಹಿತಕರ ಘಟನೆ ಮತ್ತು ಆಹಾರ ಪದಾರ್ಥಗಳ ದುರುಪಯೋಗ ಹಾಗೂ ಹಲವು ಅವ್ಯವಹಾರಗಳ ಬಗ್ಗೆ ದೂರುಗಳು ಕೇಳಿ ಬಂದಿದ್ದವು.
ಸಚಿವರೊಂದಿಗೆ ಜಿಲ್ಲಾಧಿಕಾರಿ ಶುಭಕಲ್ಯಾಣ್, ಜಿ.ಪಂ.ಮುಖ್ಯಕಾರ್ಯನಿರ್ವಹಣಾಧಿಕಾರಿ ಪ್ರಭು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಅಶೋಕ್, ಉಪವಿಭಾಗಾಧಿಕಾರಿ ಶಿವಪ್ಪ ಗೋಟೂರು, ತಹಶೀಲ್ದಾರ್ ಮಂಜುನಾಥ್, ಇ.ಓ ಅಪೂರ್ವ, ಡಾ ಜಿ ಪರಮೇಶ್ವರ್ ಸ್ಪೆಷಲ್ ಆಫೀಸರ್ ಡಾ. ನಾಗಣ್ಣ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಶ್ವಥ್ ನಾರಾಯಣ್ ಸೇರಿದಂತೆ ಜಿಲ್ಲಾ ಮಟ್ಟದ ಮತ್ತು ತಾಲೂಕು ಮಟ್ಟದ ವಿವಿಧ ಇಲಾಖಾ ಅಧಿಕಾರಿಗಳು ಹಾಜರಿದ್ದರು.
—————-ಶ್ರೀನಿವಾಸ್ ಕೊರಟಗೆರೆ