ಹೊಳೆನರಸೀಪುರ:ಕಾನೂನಿನ ಜ್ಞಾನ ಇದ್ದರೆ ಅಪರಾಧಗಳು ಕಡಿಮೆ ಆಗುತ್ತವೆ-ನ್ಯಾಯಾಧೀಶೆ ನಿವೇದಿತಾ ಮಹಾಂತೇಶ್ ಮುನವಳ್ಳಿ ಮಠ್

ಹೊಳೆನರಸೀಪುರ:ಇಂದಿನ ದಿನದಲ್ಲಿ ಕಾನೂನಿನ ಸಾಮಾನ್ಯ ಜ್ಞಾನ ಪ್ರತಿಯೊಬ್ಬರಲ್ಲೂ ಇರಬೇಕು.ಕಾನೂನಿನ ಜ್ಞಾನ ಇದ್ದರೆ ಅಪರಾಧಗಳು ಕಡಿಮೆ ಆಗುತ್ತವೆ. ಆದ್ದರಿಂದ ಪ್ರತಿಯೊಬ್ಬರಲ್ಲೂ ಕಾನೂನಿನ ಬಗ್ಗೆ ಅರಿವು ಮೂಡಿಸಲು ತಾಲ್ಲೂಕು ಕಾನೂನು ಸೇವಾ ಅಮಿತಿ ಹಾಗೂ ವಕೀಲರ ಸಂಘದ ಸಹಯೋಗದಲ್ಲಿ ಕಾನೂನು ಅರಿವು ಹಾಗೂ ಜಾಗೃತಿ ಕಾರ್ಯಕ್ರಮಗಳನ್ನು ನಡೆಸುತ್ತಿದೆ ಎಂದು ಹಿರಿಯ ಶ್ರೇಣಿ ನ್ಯಾಯಾಧೀಶರಾದ ನಿವೇದಿತಾ ಮಹಾಂತೇಶ್ ಮುನವಳ್ಳಿ ಮಠ್ ತಿಳಿಸಿದರು.

ಶನಿವಾರ ಸರಕಾರಿ ಕಾನೂನು ಕಾಲೇಜಿನಲ್ಲಿ ಆಯೋಜಿಸಿದ್ದ ಉಚಿತ ಕಾನೂನು ಅರಿವು ನೆರವು ಶಿಬಿರ ಉದ್ಘಾಟಿಸಿ ಮಾತನಾಡಿ, ಕಾನೂನಿನ ಬಗ್ಗೆ ಅರಿವಿಲ್ಲದೆ ಅಪರಾಧ ಆಯಿತು ಎಂದರೂ ಮಾಡಿದ ಅಪರಾಧಕ್ಕೆ ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಆದ್ದರಿಂದ ನೀವು ಗ್ರಾಮೀಣ ಪ್ರದೇಶದ ಜನರಲ್ಲೂ ಕಾನೂನಿನ ಬಗ್ಗೆ ಅರಿವು ಮೂಡಿಸಿ ಎಂದು ಸಲಹೆ ನೀಡಿದರು.

ಸಿವಿಲ್ ನ್ಯಾಯಾಧೀಶೆ ಚೇತನಾ ಮಾತನಾಡಿ,ಭಾರತೀಯ ಸಂವಿಧಾನದಲ್ಲಿ ಪ್ರತಿಯೊಬ್ಬರಿಗೂ ಕಾನೂನಿನ ನೆರವು ದೊರೆಯಬೇಕು. ಕಾನೂನಿನ ಮುಂದೆ ಎಲ್ಲರೂ ಸಮಾನರು ಎಂದು ಪರಿಗಣಿಸಿ ಕಾನೂನು ಸೇವಾ ಸಮಿತಿ ಅಗತ್ಯ ಹಾಗೂ ಉಚಿತ ಕಾನೂನು ನೆರವು ಸೌಲಭ್ಯವನ್ನು ಕಲ್ಪಿಸಿದೆ. ಪುಟ್ಟ ಮಕ್ಕಳಿಗೆ, ಶಿಕ್ಷಣವಿಲ್ಲದ ಜನರಿಗೆ ಕಾನೂನಿನ ಅರಿವು ಮೂಡಿಸಲು ಸಾಧ್ಯವಿಲ್ಲ, ಆದ್ದರಿಂದ ವಿದ್ಯಾರ್ಥಿಗಳಾದ ನಿಮಗೆ ಕಾನೂನು ಅರಿವು ಮೂಡಿಸಲಾಗುತ್ತಿದೆ.ಮಾಹಿತಿ ಕೊರತೆ, ಹಣಕಾಸು, ಶೋಷಣೆ ಅಥವಾ ಹಲವಾರು ಸಮಸ್ಯೆಗಳಿಂದ ವಂಚಿತರಾದ ಜನರಿಗೆ ಸೂಕ್ತ ಕಾನೂನು ತಿಳುವಳಿಗೆ ನೀಡಿ ಎಂದರು.

ಭ್ರೂಣ ಲಿಂಗ ಪತ್ತೆ ಅಥವಾ ಭ್ರೂಣ ಹತ್ಯೆ, ಬಾಲ ಕಾರ್ಮಿಕ ಪದ್ಧತಿ, ಪೋಸ್ಕೊ ಕಾಯ್ದೆ, ವರದಕ್ಷಿಣೆ, ಬಾಲ್ಯ ವಿವಾಹ ಹಾಗೂ ದೈಹಿಕ ಹಾಗೂ ಮಾನಸಿಕ ಶೋಷಣೆಗೆ ಒಳಗಾದವರಿಗೆ ಕಾನೂನು ಸೇವೆಗಳ ಸಮಿತಿ ಅಡಿಯಲ್ಲಿ ಉಚಿತವಾಗಿ ಅಗತ್ಯ ನೆರವು ಪಡೆಯಬಹುದು. ಜನತಾ ನ್ಯಾಯಾಲಯ ಅಥವಾ ಲೋಕ ಅದಾಲತ್ ಗಳಲ್ಲಿ ಆಸ್ತಿ ವಿವಾದ, ಪತಿ ಪತ್ನಿ ವಿಚ್ಛೇದನ, ಜೀವನಾಂಶ, ಅಪಘಾತ ವಿಮೆ ಹಾಗೂ ಕೆಲವು ವ್ಯಾಜ್ಯಗಳನ್ನು ರಾಜಿ ಸಂಧಾನ ಮೂಲಕ ಬಗೆಹರಿಸಿಕೊಂಡಲ್ಲಿ ಸಮಯದ ಉಳಿತಾಯ,ಹಣದ ಉಳಿತಾಯ ಆಗುವುದರ ಜೊತೆಗೆ ರಾಜಿ ಆದ ವ್ಯಾಜ್ಯಗಳಿಂದ ಸಂಬಂಧ ಉಳಿಯುತ್ತದೆ ಎಂದು ಹೇಳಿದರು.

ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಎಂ.ವಿ.ಶಿವಕುಮಾರ್ ಮಾತನಾಡಿ, ಸ್ವಾರ್ಥಬಿಟ್ಟು ನಾವು ಆತ್ಮಾಭಿಮಾನ ಹಾಗೂ ಇತರರಿಗೆ ಒಳಿತನ್ನು ಬಯಸುವ ಮನಸ್ಥಿತಿ ಬೆಳೆಸಿಕೊಳ್ಳಬೇಕು. ಯಾರೇ ತಪ್ಪುಮಾಡಿದರೂ ಅದನ್ನು ಖಂಡಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ಇಂತಹ ಮನಸ್ಥಿತಿಯಿಂದ ಸಮಾಜಕ್ಕೆ ನಿಸ್ವಾರ್ಥವಾಗಿ ಸೇವೆ ಮಾಡಲು ಸಾಧ್ಯ ಎಂದರು.

ಹರೀಶ್ ಕಾರ್ಯಕ್ರಮ ನಿರೂಸಿದರು. ರೇಖಾ ಚೌಹಾಣ್ ಸ್ವಾಗತಿಸಿದರು. ಪ್ರಾಂಶುಪಾಲೆ ಎಚ್. ಭಾಗ್ಯಲಕ್ಷ್ಮಿ, ಉಪನ್ಯಾಸಕರಾದ ಜಯರಾಮ್, ಶ್ರೀಲಕ್ಷ್ಮಿ, ನ್ಯಾಯಾಲಯ ಸಿಬ್ಬಂದಿ ಯಶವಂತ್ ಭಾಗವಹಿಸಿದ್ದರು.

—————–ವಸಂತ್ ಕುಮಾರ್

Leave a Reply

Your email address will not be published. Required fields are marked *

× How can I help you?