ಹಾಸನ:ಇಂದಿನ ಯುವ ಪೀಳಿಗೆ ಕನ್ನಡ ನಾಡು,ನುಡಿ,ಸಂಸ್ಕೃತಿಯ ಕುರಿತು ತಿಳಿಯಬೇಕಾದ ಅವಶ್ಯಕತೆ ಇದೆ-ಎಚ್.ಬಿ.ಮದನ್‌ಗೌಡ ಅಭಿಪ್ರಾಯ

ಹಾಸನ:ಕನ್ನಡ ನಾಡು ನುಡಿ, ಸಂಸ್ಕೃತಿಯ ಕುರಿತು ಇಂದಿನ ಯುವ ಪೀಳಿಗೆ ತಿಳಿಯಬೇಕಾದ ಅವಶ್ಯಕತೆ ಇದೆ ಎಂದು ರಾಜ್ಯೋತ್ಸವ ಸುವರ್ಣ ಸಂಭ್ರಮ ಪ್ರಶಸ್ತಿ ವಿಜೇತ ಹಾಗೂ ಪತ್ರಕರ್ತ ಎಚ್.ಬಿ.ಮದನ್‌ಗೌಡ ಅಭಿಪ್ರಾಯಪಟ್ಟರು.

ನಗರದ ಬೆಸ್ಟ್ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕನ್ನಡ ಭಾಷೆ ಶಾಸ್ತ್ರೀಯ ಸ್ಥಾನಮಾನ ಪಡೆದುಕೊಂಡಿರುವ ಭಾಷೆಯಾಗಿದ್ದು, ಯುವಕರು ನಮ್ಮ ಮಾತೃ ಭಾಷೆಯ ಬಗ್ಗೆ ತಿಳಿದು ಕೊಳ್ಳುವ ಪ್ರಯತ್ನ ಮಾಡಬೇಕು. ಮಾತೃ ಭಾಷೆಯಾಗಿರುವ ಕನ್ನಡವನ್ನು ನಾವು ಕೇವಲ ಓದುವುದು, ಮಾತನಾಡುವುದನ್ನು ಅಷ್ಟೆ ಮಾಡದೆ ನಮ್ಮ ಭಾಷೆಗೆ ಇರುವ ಪರಂಪರೆಯ ಬಗ್ಗೆ ತಿಳಿಯಬೇಕು ಎಂದು ಸಲಹೆ ನೀಡಿದರು.

ನಮ್ಮ ನಾಡಿನಲ್ಲಿ ಪಾಕೃತಿಕವಾಗಿ ಹಲವು ವೈಶಿಷ್ಟಗಳು ಇದ್ದು,ಪ್ರತಿಯೊಂದು ಸ್ಥಳಗಳ ಬಗ್ಗೆ ಮಾಹಿತಿ ಹೊಂದಬೇಕು. ಕನ್ನಡ ಭಾಷೆಯ ಮೂಲ ಬೇರಾಗಿರುವ ಹಲ್ಮಿಡಿ ಶಾಸನವನ್ನು ಕೊಟ್ಟ ಜಿಲ್ಲೆ ನಮ್ಮದು.ಪ್ರತಿಯೊಬ್ಬರೂ ಒಮ್ಮೆಯಾದರು ಹಲ್ಮಿಡಿ ಗ್ರಾಮಕ್ಕೆ ಭೇಟಿ ನೀಡಿ ಶಾಸನದ ಪ್ರತಿ ರೂಪಕವಾಗಿರುವ ಶಾಸನದ ಪ್ರತಿಮೆಯನ್ನು ನೋಡಬೇಕು. ನಮ್ಮ ಜಿಲ್ಲೆಯಲ್ಲಿ ಕಲೆ, ಸಂಸ್ಕೃತಿ ಬಹಳ ಹಿಂದಿನಿಂದ ಬಂದಿದೆ, ಇದನ್ನು ಉಳಿಸಿ ಬೆಳೆಸುವ ಕೆಲಸವನ್ನು ಎಲ್ಲರೂ ಮಾಡಬೇಕು ಎಂದು ಕರೆ ನೀಡಿದರು.

ಹಾಸನಾoಬ ರೂರಲ್ ಎಜುಕೇಷನ್ ಟ್ರಸ್ಟ್ ಅಧ್ಯಕ್ಷ ಪಿ.ಎಸ್. ಮಂಜೇಗೌಡ ಮಾತನಾಡಿ, ಕನ್ನಡ ರಾಜ್ಯೋತ್ಸವ ಆಚರಣೆಯನ್ನು ಕೇವಲ ನವೆಂಬರ್ 1 ರಂದು ಆಚರಣೆ ಮಾಡಿ ಸುಮ್ಮನಾಗಬಾರದು. ಕನ್ನಡ ಭಾಷೆಯನ್ನು ಬಳಸುವ ಮೂಲಕ, ಅದರ ಬಗ್ಗೆ ತಿಳಿದುಕೊಳ್ಳುವ
ಮೂಲಕ ಪ್ರತಿದಿನ ನಾವು ಕನ್ನಡದ ಹಬ್ಬವನ್ನು ಆಚರಣೆ ಮಾಡಬೇಕು ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ನವೀನ್ ಕೆ.ಸಿ. ಮಾತನಾಡಿ,ರಾಜ್ಯ ಸರ್ಕಾರ ಈ ಭಾರಿ ನಮ್ಮ ಜಿಲ್ಲೆಯ ಮಾಧ್ಯಮ ಕ್ಷೇತ್ರದ ಸಾಧಕ ಎಚ್.ಬಿ. ಮದನ್‌ಗೌಡ ಅವರಿಗೆ ರಾಜ್ಯೋತ್ಸವ ಸುವರ್ಣ ಸಂಭ್ರಮ ಪ್ರಶಸ್ತಿ ನೀಡಿರುವುದು ಅತ್ಯಂತ ಅರ್ಥಪೂರ್ಣವಾಗಿದೆ.
ಕೇವಲ ಮಾಧ್ಯಮ ಕ್ಷೇತ್ರ ಮಾತ್ರವಲ್ಲದೆ ಕನ್ನಡ ಭಾಷೆಗಾಗಿ ಅವರ ದುಡಿಮೆ ಅಪಾರವಾದದ್ದು, ಹಲ್ಮಿಡಿ ಶಾಸನದ ಸಂರಕ್ಷಣೆ, ಅದರ ಬಗ್ಗೆ ಜನರಿಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಅವರ ಹೋರಾಟ, ಪರಿಶ್ರಮ ಮೆಚ್ಚುವಂಹದ್ದು.ಹಲ್ಮಿಡಿ ಶಾಸನ ದೊರೆತ ಜಾಗದ ಅಭಿವೃದ್ಧಿಗೆ ಅವರು ಕೈಗೊಂಡಿರುವ ಕಾರ್ಯಗಳು ಇತರರಿಗೆ ಮಾದರಿ ಎಂದರು.

ಹಾಸನಾoಬ ರೂರಲ್ ಎಜುಕೇಷನ್ ಟ್ರಸ್ಟ್ ಖಜಾಂಚಿ ವೈ.ಎಚ್. ಈಶ್ವರಪ್ಪ, ಬೆಸ್ಟ್ ಪಿ.ಯು. ಕಾಲೇಜು ಪ್ರಾಂಶುಪಾಲ ಮಧು, ಅಧ್ಯಾಪಕರಾದ ಅತಿಥ್, ಪುನೀತ್ ಹಾಗೂ ಇತರರು ಹಾಜರಿದ್ದರು.

Leave a Reply

Your email address will not be published. Required fields are marked *

× How can I help you?