ಅರೇಹಳ್ಳಿ:ಬೇರೆ ರಾಜ್ಯಗಳಿಂದ ವಲಸೆ ಬಂದಿರುವ ಕೂಲಿ ಕಾರ್ಮಿಕರಿಗೆ ಮನೆ ಬಾಡಿಗೆ ಕೊಡುವ ವೇಳೆ ಮಾಲೀಕರು ದಾಖಲೆಗಳನ್ನು ಸೂಕ್ತವಾಗಿ ಪರಿಶೀಲಿಸಬೇಕು ಎಂದು ಅರೇಹಳ್ಳಿ ಪೊಲೀಸ್ ಉಪನಿರೀಕ್ಷಕಿ ಶೋಭ ಭರಮಣ್ಣನವರ ಸೂಚಿಸಿದರು.
ಅರೇಹಳ್ಳಿ ಪೊಲೀಸ್ ಠಾಣೆಯಲ್ಲಿ ಅನ್ಯ ರಾಜ್ಯಗಳಿಂದ ಬರುತ್ತಿರುವ ವಲಸೆ ಕಾರ್ಮಿಕರಿಗೆ ಆಶ್ರಯ ನೀಡುತ್ತಿರುವ ಮನೆ ಮಾಲೀಕರು,ತೋಟದ ಮಾಲೀಕರಿಗೆ ಆಯೋಜಿಸಲಾಗಿದ್ದ ಜನ ಸಂಪರ್ಕ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ಕೂಲಿ ಕಾರ್ಮಿಕರಿಗೆ ಕೆಲಸ ನೀಡುವುದು ತಪ್ಪಲ್ಲ. ಆದರೆ ಇತ್ತೀಚಿನ ದಿನಗಳಲ್ಲಿ ಕೂಲಿ ಮಾಡುವ ನೆಪದಲ್ಲಿ ಅನೇಕ ದುಷ್ಕೃತ್ಯಗಳಲ್ಲಿ ವಲಸಿಗರು ಭಾಗಿಯಾಗುತ್ತಿರುವುದು ಆತಂಕಕಾರಿಯಾಗಿದೆ. ಈ ಕಾರಣದಿಂದಾಗಿ ವಲಸಿಗರ ಆಧಾರ್ ಕಾರ್ಡ್ಗಳನ್ನು ಸೂಕ್ಷ್ಮವಾಗಿ ಪರಿಶೀಲಿಸುವುದರಿಂದ ಎಷ್ಟು ಸಂಖ್ಯೆಯಲ್ಲಿ ವಲಸಿಗರು ಅಧಿಕೃತವಾಗಿ ನೆಲೆಸಿದ್ದಾರೆ ಎಂಬ ಅಂಕಿ ಅಂಶ ಲಭ್ಯವಾಗುತ್ತದೆ ಎಂದರು.
ತಾಲೂಕು ಕಾಫಿ ಬೆಳೆಗಾರರ ಸಂಘದ ಅಧ್ಯಕ್ಷ ಅದ್ಧೂರಿ ಕುಮಾರ್ ಮಾತನಾಡಿ, ಅರೇಹಳ್ಳಿ ಹಾಗೂ ಬಿಕ್ಕೋಡು ಹೋಬಳಿ ವ್ಯಾಪ್ತಿಯಲ್ಲಿ ಬಾಡಿಗೆ ಮನೆ ನೀಡುವ ಮಾಲೀಕರಿಗೆ ಕಡಿವಾಣ ಹಾಕಬೇಕು.ವಲಸಿಗರು ಹೆಚ್ಚಿರುವ ಭಾಗಗಳಲ್ಲಿ ಪೊಲೀಸರು ಹಗಲು ಹಾಗೂ ರಾತ್ರಿ ಹೆಚ್ಚೆಚ್ಚು ಗಸ್ತು ತಿರುಗಬೇಕು. ಕೂಲಿ ಕೆಲಸಕ್ಕೆ ನೇಮಕ ಮಾಡಿಕೊಳ್ಳುವ ತೋಟದ ಮಾಲೀಕರು, ಕಾರ್ಮಿಕರಿಗೆ ತಮ್ಮ ತೋಟದ ಮನೆಗಳಲ್ಲೆ ವಾಸಿಸಲು ಅವಕಾಶ ನೀಡಿದರೆ ಹಳ್ಳಿ ಹಾಗೂ ಪಟ್ಟಣ ಪ್ರದೇಶಗಳಲ್ಲಿ ಅಪರಾಧಗಳ ಸಂಖ್ಯೆ ಕಡಿಮೆಯಾಗಬಹುದು ಎಂದರು.
ಈ ವೇಳೆ ಖಲೀಲ್ ಅಹಮದ್, ಗೋವಿಂದ ಶೆಟ್ಟಿ, ವಿಕ್ರಂ, ಶಿವೇಗೌಡ, ಬಿ.ಜಿ.ಸಂತೋಷ್ ಅನುಘಟ್ಟ, ಪೊಲೀಸ್ ಸಿಬ್ಬಂದಿಗಳಾದ ಶಶಿ ಕುಮಾರ್, ಪೃಥ್ವಿ ಎ.ಎಸ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು