ಅರಕಲಗೂಡು-ಗೌರಿ ಕಟ್ಟೆ ಕೆರೆ ಆಸ್ತಿ ವಕ್ಫ್ ಪಾಲು-ಹಿಂದೂ ಧಾರ್ಮಿಕ ಕಾರ್ಯಕ್ಕೆ ಬಳಕೆಯಾಗುವ ಸರಕಾರಿ ಆಸ್ತಿಯನ್ನು ಉಳಿಸಲು ಹಿಂದೂ ಸಂಘಟನೆಗಳ ಆಗ್ರಹ-ಹೋರಾಟದ ಎಚ್ಚರಿಕೆ

ಅರಕಲಗೂಡು-ಪುರಾತನ ಕಾಲದಿಂದಲೂ ಗೌರಿ ಗಣೇಶ ವಿಸರ್ಜನೆ ಮಾಡಿಕೊಂಡು ಬರುತ್ತಿರುವ ಗೌರಿ ಕಟ್ಟೆ ಕೆರೆಯನ್ನು ವಕ್ಫ್ ಆಸ್ತಿ ಎಂದು ನಮೂದಿಸಿರುವುದನ್ನು ವಿರೋಧಿಸಿ ತಾಲೂಕಿನ ವಿವಿಧ ಹಿಂದೂ ಪರ ಸಂಘಟನೆಯ ಪದಾಧಿಕಾರಿಗಳು ಹಾಗು ನಾಗರೀಕರು ಪ್ರತಿಭಟನೆ ನಡೆಸಿ ತಾಲೂಕು ದಂಡಾಧಿಕಾರಿಗಳಿಗೆ ಪಹಣಿ ತಿದ್ದುಪಡಿ ಮಾಡುವಂತೆ ಮನವಿ ಸಲ್ಲಿಸಿದರು.

ಸರ್ವೇ ಸಂಖ್ಯೆ 120 ರಲ್ಲಿ ಇರುವ 4 ಎಕರೆ 10 ಕುಂಟೆ ಜಾಗವನ್ನು ಹಿಂದೆಯೇ ವಕ್ಫ್ ಆಸ್ತಿಯೆಂದು ನಮೂದಿಸಲಾಗಿದ್ದು ಇದನ್ನು ವಿರೋಧಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿತ್ತು.

ಪ್ರಕರಣದ ಗಂಭೀರತೆಯನ್ನು ಅರಿತ ಜಿಲ್ಲಾಧಿಕಾರಿಗಳು ಎರಡು ಸಮುದಾಯದ ಜನರಿಗೆ ದಾಖಲಾತಿಗಳ ಸಲ್ಲಿಸಲು ಸಮಯಾವಕಾಶ ನೀಡಿದ್ದರು.ಆಗ ಗೌರಿಕಟ್ಟೆಯ ಜಾಗ ಸರಕಾರಕ್ಕೆ ಸೇರಿದ್ದು ಎಂಬ ದಾಖಲಾತಿಗಳನ್ನು ನಾಗರೀಕರು ಸಲ್ಲಿಸಿದರಾದರು ವಕ್ಫ್ ಆಸ್ತಿ ಎಂಬ ದಾಖಲಾತಿಗಳನ್ನು ನೀಡಲು ಮುಸ್ಲಿಂ ಸಮುದಾಯದವರು ವಿಫಲರಾದರು.

ಆದರೂ ಇಂದಿನವರೆಗೂ ಸಹ ಆ ಜಾಗ ವಕ್ಫ್ ಗೆ ಸೇರಿದ್ದು ಎಂದು ವಾದ ಮಾಡಿಕೊಂಡು ಬಂದು ಸರಕಾರಿ ಜಾಗವನ್ನು ಅಕ್ರಮವಾಗಿ ಕಬಳಿಸಲು ಸಂಚು ರೂಪಿಸಿದ್ದಾರೆಂದು ಪ್ರತಿಭಟನಾಕಾರರು ದೂರಿದರು.

ಈ ಕೂಡಲೇ ಸಂಬಂಧಪಟ್ಟವರು ಗಮನಹರಿಸಿ ದಾಖಲಾತಿಗಳ ತಿದ್ದುಪಡಿ ಮಾಡಿ ಹಿಂದೂಗಳ ಧಾರ್ಮಿಕ ಆಚರಣೆಗೆ ಬಳಕೆಯಾಗುವ ಗೌರಿ ಕಟ್ಟೆಯ ಆಸ್ತಿಯನ್ನು ಸರಕಾರಿ ಸೌಮ್ಯದಲ್ಲೇ ಉಳಿಸಲು ಕ್ರಮ ಕೈಗೊಳ್ಳುವಂತೆ ಆಗ್ರಹಿಸಲಾಯಿತು.

ಇಲ್ಲವಾದಲ್ಲಿ ಸಮಸ್ತ ಸಮಾನಮನಸ್ಕ ಸಂಘಟನೆಗಳ ಸಭೆ ಕರೆದು ಉಗ್ರ ಹೋರಾಟ ನಡೆಸಬೇಕಾದ ಅನಿವಾರ್ಯತೆ ಏರ್ಪಡುತ್ತದೆ ಎಂದು ಎಚ್ಚರಿಸಲಾಯಿತು.

ಪ್ರತಿಭಟನೆಯಲ್ಲಿ ಪಟ್ಟಣ ಪಂಚಾಯತಿ ಸದಸ್ಯರ ರಮೇಶ್ ವಾಟಾಳ್, ಹಾಸನ ಜಿಲ್ಲಾ ಪಂಚಾಯತಿ ಕೆ.ಡಿ.ಪಿ ಮಾಜಿ ಸದಸ್ಯರಾದ ಕೆಲ್ಲೂರು ಶಶಿಕುಮಾರ, ಪಟ್ಟಣ ಪಂಚಾಯಿತಿ ಮಾಜಿ ಸದಸ್ಯ ರವಿಕುಮಾರ್, ದೊಡ್ಡಮ್ಮ ದೇವಸ್ಥಾನ ಸಮಿತಿಯ ರಾಮಸ್ವಾಮಿ, ಶಶಿಕುಮಾರ್, ವಕಾರೆ ರವಿಕುಮಾರ್, ರೈತ ಸಂಘದ ಲೋಕೇಶ್, ಪರಿಸರವಾದಿ ರಾಮಚಂದ್ರ, ಎ.ಪಿ ನಾಗೇಶ್ ಇತರರು ಇದ್ದರು.

———–—ಶಶಿಕುಮಾರ್ ಕೆಲ್ಲೂರು

Leave a Reply

Your email address will not be published. Required fields are marked *

× How can I help you?