ಅರಸೀಕೆರೆ:ಕೆಂಕೆರೆ ಗ್ರಾಮದ ವಿವಿಧ ಸಂಘಟನೆಗಳಿಂದ ಹಲವು ಬೇಡಿಕೆಗಳ ಈಡೇರಿಕೆಗೆ ಆಹೋರಾತ್ರಿ ಧರಣಿ-ತಹಶೀಲ್ದಾರ್ ಸಂತೋಷ್ ಕುಮಾರ್ ಭೇಟಿ

ಅರಸೀಕೆರೆ:ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ತಾಲೂಕಿನ ಕೆಂಕೆರೆ ಗ್ರಾಮದ ವಿವಿಧ ಸಂಘಟನೆಗಳು ಕೈಗೊಂಡಿದ್ದ ಅಹೋರಾತ್ರಿ ಧರಣಿ ಸ್ಥಳಕ್ಕೆ ತಹಸೀಲ್ದಾರ್ ಸಂತೋಷ್ ಕುಮಾರ್ ಮೊದಲಾದವರು ಆಗಮಿಸಿ ಶೀಘ್ರವೇ ಬಗೆಹರಿಸುವ ಭರವಸೆ ನೀಡಿದ ಹಿನ್ನೆಲೆ, ಪ್ರತಿಭಟನೆ ವಾಪಸ್ ಪಡೆಯಲಾಯಿತು.

ಕೆಂಕೆರೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಳೆಯ ವಿದ್ಯಾರ್ಥಿಗಳ ಸಂಘ,ಸ್ತ್ರೀ ಶಕ್ತಿ ಸಂಘ, ಸ್ವಯಂ ಸೇವಾ ಸಂಘ ಹಾಗೂ ರೈತಸಂಘದವರು ಸೋಮವಾರದಿಂದ ಅನಿರ್ದಿಷ್ಟಾವಧಿ ಧರಣಿ ಹಮ್ಮಿಕೊಂಡಿದ್ದರು.

ಬೇಡಿಕೆಗಳೇನು:

ಕೆಂಕೆರೆ ಹಾಗೂ ಸುತ್ತಮುತ್ತಲ ಗ್ರಾಮಗಳ ಕೆರೆಗಳಿಗೆ ಹೇಮಾವತಿ ನೀರಾವರಿ ಯೋಜನೆ ಅನುಷ್ಠಾನಗೊಳಿಸುವುದು. ಕೆಂಕೆರೆ ಹಾಗೂ ಸುತ್ತಮುತ್ತಲ ಗ್ರಾಮದ ಸರ್ಕಾರಿ ಶಾಲೆಗಳನ್ನು ಹೈಟೆಕ್ ಶಾಲೆಗಳಾಗಿ ಪರಿವರ್ತನೆ ಮಾಡುವುದು.

ಕೆಂಕೆರೆ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಹೆರಿಗೆ ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿವುದು. ಗ್ರಾಮದ ಎರಡು ಸಮುದಾಯ ಭವನಗಳನ್ನು ಕಲ್ಯಾಣ ಮಂಟಪಗಳನ್ನಾಗಿ ನವೀಕರಿಸುವುದು.ಜಿಂದೇನಹಳ್ಳಿ ಗಡಿಯಿಂದ ಬುಧವಾರ ಸಂತೆ ಗಡಿಯವರೆಗೂ ರಸ್ತೆ ಅಗಲೀಕರಣ ಮಾಡಿ ಕೆರೆ ಏರಿ ಮೇಲೆ ತಡೆಗೋಡೆ ನಿರ್ಮಿಸುವುದು. ಮನೆ ಮನೆ ಗಂಗೆ ಕುಡಿಯುವ ನೀರಿನ ಯೋಜನೆಗೆ ಶೀಘ್ರ ಚಾಲನೆ ಕೊಡುವುದು.ಕೆಂಕೆರೆ ಗ್ರಾಮಕ್ಕೆ ಅರಸೀಕೆರೆ, ಹಾಸನದಿಂದ ಸಾರಿಗೆ ಬಸ್ ವ್ಯವಸ್ಥೆ ಕಲ್ಪಿಸುವುದು. ಸ್ಥಳೀಯ ಗ್ರಾಪಂ ನಲ್ಲಿ ಕಳೆದ 4 ವರ್ಷಗಳಿಂದ ಗ್ರಾಮಸಭೆ ನಡೆದಿಲ್ಲ. ಈ ವಿಷಯವಾಗಿ ಅಧಿಕಾರಿಗಳು ಕ್ರಮ ವಹಿಸಬೇಕು ಹಾಗೂ ಕೆಂಕೆರೆ ಹೆಚ್‌ಡಿಸಿಸಿ ಮತ್ತು ಡಿಸಿಸಿ ಬ್ಯಾಂಕ್‌ನ ಹೊಸ ಕಟ್ಟಡ ನಿರ್ಮಾಣ ಮಾಡಬೇಕು ಎಂಬುದು ಧರಣಿ ನಿರತರ ವಿವಿಧ ಬೇಡಿಕೆಗಳಾಗಿದ್ದವು.

ಇವುಗಳನ್ನು ಈಡೇರಿಸಿ ಎಂದು ಹಿಂದಿನಿoದಲೂ ನೀಡಿರುವ ಹಲವು ಮನವಿ ಪತ್ರಗಳನ್ನೂ ಧರಣಿ ವೇಳೆ ಪ್ರದರ್ಶನ ಮಾಡಿದರು.

ಬರಗಾಲ ಬಂದರೆ ನಮ್ಮ ಊರಿನ ಪರಿಸ್ಥಿತಿಯೂ ಸಂಕಷ್ಟಕ್ಕೆ ಸಿಲುಕಲಿದೆ. ಒಂದು ಬಿಂದಿಗೆ ನೀರಿಗೂ ಪರದಾಡುವ ಸ್ಥಿತಿ ನಿರ್ಮಾಣ ಆಗಲಿದೆ. ಅಂತಹ ಪರಿಸ್ಥಿತಿ ಎದುರಾಗುವುದು ಬೇಡ. ಹಾಗಾಗಿ ನಮ್ಮ ಗ್ರಾಮಕ್ಕೆ ಮುಖ್ಯವಾಗಿ ಕುಡಿಯುವ ಸಮಸ್ಯೆಯನ್ನು ಬಗೆಹರಿಸಿ ಎಂದು ಒತ್ತಾಯಿಸಿದರು.

ಈ ವೇಳೆ ತಹಸೀಲ್ದಾರ್ ಸಂತೋಷ್ ಕುಮಾರ್ ಅವರನ್ನು ತರಾಟೆಗೆ ತೆಗೆದುಕೊಂಡ ಧರಣಿ ನಿರತರು, ಹಲವು ದಿನಗಳಿಂದ ಸಾಕಷ್ಟು ಮನವಿ ಮಾಡಿದ್ದರೂ, ಯಾವುದೇ ಪ್ರಯೋಜನ ಆಗಿಲ್ಲ. 4 ವರ್ಷಗಳಿಂದ ಗ್ರಾಮಸಭೆ ನಡೆದಿಲ್ಲ. ಗ್ರಾಮೀಣ ಜನರನ್ನು ಕಂಡರೆ ಇಷ್ಟೊಂದು ನಿರ್ಲಕ್ಷ್ಯವೇ ಎಂದು ಆಕ್ರೋಶ ಹೊರ ಹಾಕಿದರು.

ಸಮಸ್ಯೆ ಬಗೆಹರಿಸಲು ನಿರ್ಲಕ್ಷ್ಯ ತೋರಿರುವ ತಾಪಂ ಇಒ, ನೀರಾವರಿ ಇಲಾಖೆ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಸುವಂತೆ ಶಶಿಧರ್ ಹಾಗೂ ಸುತ್ತಮುತ್ತಲ ಗ್ರಾಮಸ್ಥರು ಶೀಘ್ರವೇ ಎಲ್ಲ ಸಮಸ್ಯೆ ಬಗೆಹರಿಸುವಂತೆ ಒತ್ತಾಯಿಸಿದರು.

ಕಡೆಗೆ ಶೀಘ್ರವೇ ಎಲ್ಲ ಸಮಸ್ಯೆಗಳಿಗೆ ಪರಿಹಾರ ಕಂಡು ಹಿಡಿಯುವ ಭರವಸೆ ನಂತರ ಅನಿರ್ದಿಷ್ಟಾವಧಿ ಧರಣಿ ಹಿಂಪಡೆಯಲಾಯಿತು.

Leave a Reply

Your email address will not be published. Required fields are marked *

× How can I help you?