ಕೆ.ಆರ್.ಪೇಟೆ-ತಾಲ್ಲೂಕಿನ ಬೂಕನಕೆರೆ ಹೋಬಳಿಯ ಗಂಜಿಗೆರೆ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ 36ನೇ ವರ್ಷದ ಶಾಲೆಗೊಂದು ಕಾರ್ಯಕ್ರಮ ನಡೆಯಿತು.
ಸಾಹಿತಿಗಳು ಹಾಗೂ ತೆಂಡೇಕೆರೆ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಬಲ್ಲೇನಹಳ್ಳಿ ಮಂಜುನಾಥ್ ಅವರು ಕಾರ್ಯಕ್ರಮದಲ್ಲಿ ಪ್ರಧಾನ ಭಾಷಣಕಾರರಾಗಿ ಭಾಗವಹಿಸಿ ಮಾತನಾಡಿ ಕಾವೇರಿಯಿಂದ ಗೋದಾವರಿವರೆಗೆ ಕನ್ನಡ ಭಾಷೆಯನ್ನು ಮಾತನಾಡುವ ಪ್ರದೇಶವು ಹರಡಿತ್ತು. ಆದರೆ ಕನ್ನಡಿಗರ ಉದಾರ ಗುಣದಿಂದ ಈಗ ಕೇವಲ ಬೀದರ್ನಿಂದ ಚಾಮರಾಜನಗರವರೆಗೆ ಮಾತ್ರ ಕರ್ನಾಟಕ ಸೀಮಿತವಾಗಿದೆ. ಇದೇ ರೀತಿ ಪರಭಾಷಿಕರ ಬಗ್ಗೆ ಮೆದು ಧೋರಣೆ ಮುಂದುವರೆದರೆ ಕನ್ನಡ ನಾಡು ನಶಿಸಿ ಹೋಗುವ ಅಪಾಯ ಎದುರಾಗಲಿದೆ ಹಾಗಾಗಿ ಕನ್ನಡವನ್ನು ಉಳಿಸುವುದು ಮತ್ತು ಅಭಿವೃದ್ದಿ ಪಡಿಸುವುದು ನಮ್ಮೆಲ್ಲರ ಹೊಣೆಗಾರಿಕೆಯಾಗಿದೆ. ಇತರೆ ಭಾಷಿಕರು ಕರ್ನಾಟಕ ರಾಜ್ಯಕ್ಕೆ ಬಂದರೆ ಅವರಿಗೆ ಕನ್ನಡ ಭಾಷೆಯನ್ನು ಕಲಿಸುವ ಕೆಲಸ ಮಾಡಬೇಕು. ಅವರ ಭಾಷೆಯನ್ನು ಕನ್ನಡಿಗರೇ ಕಲಿತು ಅವರೊಂದಿಗೆ ವ್ಯವಹರಿಸುವ ಮೆದು ಬುದ್ದಿಯನ್ನು ಬಿಡಬೇಕು. ಕನ್ನಡೇತರರಿಗೆ ಕನ್ನಡ ಭಾಷೆಯನ್ನು ಕಲಿತುಕೊಳ್ಳವಂತೆ ತಾಕೀತು ಮಾಡಬೇಕು. ಇಲ್ಲದಿದ್ದರೆ ಕನ್ನಡಿಗರಿಗೆ ಯಾವುದೇ ರಾಜ್ಯವು ಉಳಿಯುವುದಿಲ್ಲ ಎಂದು ಎಚ್ಚರಿಸಿದರು.
ಕನ್ನಡಭಾಷೆಯನ್ನು ಮಾತನಾಡುವ ಪ್ರದೇಶಗಳನ್ನು ಒಂದುಗೂಡಿಸಿ ವಿಶಾಲ ಮೈಸೂರು ರಾಜ್ಯವನ್ನು 1956ರಲ್ಲಿ ರಚಿಸಲಾಯಿತು. ಆದರೆ 1973ರ ನವೆಂಬರ್ 1ರಂದು ಕರ್ನಾಟಕ ರಾಜ್ಯ ಎಂದು ಮುಖ್ಯಮಂತ್ರಿಗಳಾಗಿದ್ದ ಡಿ.ದೇವರಾಜ ಅರಸು ಅವರ ನೇತೃತ್ವದಲ್ಲಿ ಮರುನಾಮಕರಣ ಮಾಡಲಾಯಿತು. ನಾವು ಪ್ರತಿ ವರ್ಷ ನವೆಂಬರ್ ಒಂದರoದು ಕನ್ನಡ ರಾಜ್ಯೋತ್ಸವವನ್ನು ಆಚರಿಸುತ್ತೇವೆ. ಮದ್ರಾಸ್ ಪ್ರಾಂತ್ಯ, ಹೈದ್ರಾಬಾದ್ ಪ್ರಾಂತ್ಯ, ಮುಂಬೈ ಪ್ರಾಂತ್ಯದಲ್ಲಿ ಹರಿದು ಹಂಚಿ ಹೋಗಿದ್ದ ಕನ್ನಡ ಮಾತನಾಡುವ ಪ್ರದೇಶಗಳನ್ನು ಏಕೀಕರಣಗೊಳಿಸಲು ಆಲೂರು ವೆಂಕಟರಾಯರು, ಕೇಸರಿ ಗಂಗಾಧರರಾವ್ ದೇಶಪಾಂಡೆ, ಪಾಟೀಲ್ ಪುಟ್ಟಪ್ಪ, ಅಂದಾನಪ್ಪ ದೊಡ್ಡಮೇಟಿ, ಕೆ.ಸಿ.ರೆಡ್ಡಿ, ಹರ್ಡೀಕರ್ ಮಂಜಪ್ಪ, ಕೆಂಗಲ್ ಹನುಮಂತಯ್ಯ, ಸಾಹಿತಿಗಳಾದ ಕುವೆಂಪು, ಹುಯಿಲಗೋಳ ನಾರಾಯಣರಾವ್, ಅನಕೃ, ಡಿ.ಎಸ್.ಕರ್ಕಿ, ಬಿ.ಎಂ.ಶ್ರೀ, ಕನ್ನಡಪರ ಸಂಘಟನೆಗಳಾದ ಕರ್ನಾಟಕ ವಿದ್ಯಾವರ್ಧಕ ಸಂಘ, ಕನ್ನಡ ಸಾಹಿತ್ಯ ಪರಿಷತ್ತು ಸೇರಿದಂತೆ ಅನೇಕ ಸಂಘಟನೆಗಳು, ಗಣ್ಯರು, ಮಹನೀಯರು ತನು, ಮನ, ಧನ ಅರ್ಪಿಸಿ ತ್ಯಾಗ ಬಲಿದಾನ ಮಾಡಿ ಕರ್ನಾಟಕ ಏಕೀಕರಣಕ್ಕೆ ಕಾರಣಕರ್ತರಾಗಿದ್ದಾರೆ. ಇಂತಹ ಮಹನೀಯರನ್ನು ಸ್ಮರಿಸಲು ಕೆ.ಆರ್.ಪೇಟೆ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಕಳೆದ 36ವರ್ಷಗಳ ಹಿಂದೆಯೇ ತಾಲ್ಲೂಕಿನ ಪ್ರತಿ ಪ್ರೌಢಶಾಲೆಯಲ್ಲಿ ನವೆಂಬರ್ ತಿಂಗಳಿಡೀ ಶಾಲೆಗೊಂದು ಕಾರ್ಯಕ್ರಮ ಆರಂಭಿಸಿ ಕನ್ನಡ ಭಾಷೆಯ ಬಗ್ಗೆ ಪ್ರೌಢಶಾಲೆಯ ವಿದ್ಯಾರ್ಥಿಗಳಲ್ಲಿ ಕನ್ನಡ ಜಾಗೃತಿ ಮೂಡಿಸಿ ಭಾಷೆಯ ಬೆಳವಣಿಗೆಗೆ ಸಹಕಾರಿಯಾಗಿದೆ.
ಜೊತೆಗೆೆ ಮೈಸೂರು ಸಂಸ್ಥಾನದ ದೊರೆ, ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು 1915ರಲ್ಲಿ ಬೆಂಗಳೂರಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಆರಂಭಿಸುವ ಮೂಲಕ ಕನ್ನಡ ನಾಡು-ನುಡಿ ಏಳಿಗೆಗೆ ಸಹಕಾರಿಯಾಗಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತು ಇಲ್ಲದೇ ಇದ್ದರೆ ಕನ್ನಡ ಭಾಷೆಯೂ ಇನ್ನಷ್ಟು ಅವನತಿಗೆ ಹೋಗುತ್ತಿತ್ತು ಎಂದು ಬಲ್ಲೇನಹಳ್ಳಿ ಮಂಜುನಾಥ್ ತಿಳಿಸಿದರು.
ಗಂಜಿಗೆರೆ ಸಿ.ಆರ್.ಪಿ ಧರ್ಮೇಂದ್ರ ಅವರು ಗಿಡಕ್ಕೆ ನೀರುಣಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದರು. ಮುಖ್ಯ ಶಿಕ್ಷಕ ಪ್ರವೀಣ್ಕುಮಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಉಪಾಧ್ಯಕ್ಷ ಅಗ್ರಹಾರಬಾಚಹಳ್ಳಿ ಶ್ರೀನಿವಾಸ್ ಅವರು ಮಕ್ಕಳಿಗೆ ರಸಪ್ರಶ್ನೆ ಕಾರ್ಯಕ್ರಮ ನಡೆಸಿ, ಸಾಹಿತಿ ಬಲ್ಲೇನಹಳ್ಳಿ ಮಂಜುನಾಥ್ ಸೇರಿದಂತೆ ಹಲವು ಸಾಹಿತಿಗಳು ಬರೆದಿರುವ ಪುಸ್ತಕಗಳನ್ನು ಬಹುಮಾನವಾಗಿ ವಿತರಣೆ ಮಾಡಿದರು.
ಶಿಕ್ಷಕರಾದ ಮಹೇಶ್, ರಾಘವೇಂದ್ರ, ಬಸವರಾಜು, ನಂಜುoಡ, ಬಲರಾಂ, ಗಿರೀಗೌಡ, ಲಿಯಾಖತ್, ಅಂಕೇಗೌಡ ಸೇರಿದಂತೆ ಶಾಲೆಯ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಭಾಗವಹಿಸಿದ್ದರು.
——–——ಶ್ರೀನಿವಾಸ್ ಕೆ ಆರ್ ಪೇಟೆ