ಚಿಕ್ಕಮಗಳೂರು-ಹಲ್ಲುಗಳ ಸ್ವಚ್ಛತೆ ಕಾಪಾಡಿಕೊಳ್ಳುವ ಜೊತೆಗೆ ಸೊಪ್ಪು,ತರಕಾರಿ,ಹಣ್ಣು,ರಾಗಿ ಮುದ್ದೆಯಂತಹ ಖನಿಜಯುಕ್ತ ಆಹಾರ ಸೇವಿಸುವುದರಿಂದ ಹಲ್ಲುಗಳ ರಕ್ಷಣೆ ಸಾಧ್ಯವಾಗಲಿದೆೆ ಎಂದು ದಂತ ವೈದ್ಯ ಡಾ|| ಕೆ.ಸುಂದರಗೌಡ ಹೇಳಿದರು.
ನಗರದ ಅಂಡೆಛತ್ರ ಸಮೀಪ ಸಾಯಿ ಡೆಂಟಲ್ ಇಪ್ಲಾಂಟ್ ಸೆಂಟರ್ನಲ್ಲಿ ಏರ್ಪಡಿಸಿದ್ಧ ಉಚಿತ ದಂತ ಚಿಕಿತ್ಸಾ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪ್ರತಿಯೊಬ್ಬರು ಪ್ರತ್ಯೇಕ ಬ್ರಷ್ನಲ್ಲಿ ಹಲ್ಲು ಉಜ್ಜುವು ಅಭ್ಯಾಸ ಇಟ್ಟುಕೊಳ್ಳಬೇಕು. ಯಾವುದೇ ಆಹಾರ ಪದಾರ್ಥ ಸೇವಿಸಿದ ಮೇಲೆ ನೀರಿನಲ್ಲಿ ಬಾಯಿ ಮುಕ್ಕಳಿಸಬೇಕು. ಹಲ್ಲು ಉಜ್ಜುವಾಗ ವಸಡಿನಲ್ಲಿ ರಕ್ತಸ್ರಾವವಾಗುತ್ತಿದ್ದರೆ ವೈದ್ಯರ ಸಲಹೆ ಪಡೆದುಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಜೀವನ ಶೈಲಿ ಬದಲಾವಣೆಯಿಂದ ಮಕ್ಕಳು ಸಿಹಿತಿನಿಸುಗಳು, ಬೇಕರಿ ತಿನಿಸು ಮುಂತಾದ ಜಂಕ್ ಫುಡ್ಗಳನ್ನು ಹೆಚ್ಚಾಗಿ ಸೇವಿಸುತ್ತಿರುವುದರಿಂದ ಬೇಗ ಹಲ್ಲುಗಳು ಹಾಳಾಗುತ್ತಿವೆ. ಆದ್ದರಿಂದ ಈ ಶಿಬಿರದ ಮೂಲಕ ಹಲ್ಲಿನ ಸ್ವಚ್ಛತೆ ಬಗ್ಗೆ ಜಾಗೃತಿ ಮೂಡಿಸುತ್ತಿದ್ದೇವೆ ಎಂದರು.
ಕನ್ನಡಸೇನೆ ಜಿಲ್ಲಾಧ್ಯಕ್ಷ ಪಿ.ಸಿ.ರಾಜೇಗೌಡ ಮಾತನಾಡಿ ಹಲ್ಲಿಗೆ ಸಂಬoಧಿಸಿದ ನೋವುಗಳು ಉಲ್ಬಣ ಗೊಂಡಾಗ ಮಾತ್ರ ದಂತ ವೈದ್ಯರ ಬಳಿ ಹೋಗುತ್ತೇವೆ. ದೇಹದ ಆರೋಗ್ಯ ಶುಚಿತ್ವಕ್ಕೆ ಮಹತ್ವ ಕೊಡುವ ನಾವು ದಂತ ಶುಚಿತ್ವಕ್ಕೂ ಮಹತ್ವ ಕೊಡಬೇಕು. ಆಗಾಗ ದಂತ ತಪಾ ಸಣೆಯನ್ನು ಮಾಡಿಸುವ ಮೂಲಕ ದಂತದ ಆರೋಗ್ಯವನ್ನು ಕಾಪಾಡಬೇಕು ಎಂದು ಹೇಳಿದರು.
ದಿನಕ್ಕೆರಡು ಬಾರಿ ಹಲ್ಲುಗಳನ್ನು ಶುಚಿಯಾಗಿಡುವ ಅಭ್ಯಾಸವನ್ನು ಮಕ್ಕಳಿಗೆ ಬಾಲ್ಯದಲ್ಲೇ ಕಲಿಸಿ ಕೊಡುವ ಮೂಲಕ ದಂತ ಶುಚಿತ್ವ, ದಂತ ಆರೋಗ್ಯದ ಬಗ್ಗೆ ಅರಿವು ಮೂಡಿಸುವ ಪ್ರಯತ್ನವನ್ನು ಪಾಲಕರು ಮಾಡಬೇಕು ಎಂದು ಸಲಹೆ ಕೊಟ್ಟರು.
ಈ ಸಂದರ್ಭದಲ್ಲಿ ಭೂಮಿಕಾ ಟಿವಿ ಸಂಪಾದಕ ಅನಿಲ್ಆನಂದ್, ದಂತ ವೈದ್ಯೆ ಡಾ|| ನಕುಲ್ ಮತ್ತಿತರರು ಹಾಜರಿದ್ದರು.
———-ಸುರೇಶ್