ಕೆ.ಆರ್.ಪೇಟೆ-ಕರ್ನಾಟಕ ರಾಜ್ಯ ಛಲವಾದಿ ಮಹಾಸಭಾ ತಾಲ್ಲೂಕು ಘಟಕದ ವತಿಯಿಂದ ಚಿತ್ರದುರ್ಗದ ವೀರವನಿತೆ ಒನಕೆ ಓಬವ್ವ ಅವರ ಜನ್ಮ ಜಯಂತಿಯನ್ನು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಆಚರಿಸಲಾಯಿತು.
ಛಲವಾದಿ ಮಹಾಸಭಾ ತಾಲ್ಲೂಕು ಅಧ್ಯಕ್ಷ ಊಚನಹಳ್ಳಿ ನಟರಾಜು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಈ ವೇಳೆ ಮಾತನಾಡಿದ ಅವರು,ಒನಕೆ ಓಬವ್ವ,ಅಬ್ಬಕ್ಕ ರಾಣಿ,ಕೆಳದಿ ಚನ್ನಮ್ಮ,ಕಿತ್ತೂರು ಚೆನ್ನಮ್ಮ ಅವರಂತೆಯೇ ದೇಶಭಕ್ತೆಯಾಗಿದ್ದಳು. ಚಿತ್ರದುರ್ಗದ ಮದಕರಿನಾಯಕನ ಕೋಟೆಯನ್ನು ರಕ್ಷಿಸುವಲ್ಲಿ ಅವಳ ಪಾತ್ರ ಮಹತ್ತರವಾದದ್ದು.
ಶತ್ರು ಹೈದರಾಲಿಯ ಕ್ರೂರ ಸೈನಿಕರು ಕಳ್ಳಕಿಂಡಿಯ ಮೂಲಕ ಚಿತ್ರದುರ್ಗ ಕೋಟೆಯನ್ನು ಪ್ರವೇಶ ಮಾಡುತ್ತಿದ್ದಾಗ ದಿಟ್ಟತನದಿಂದ ಹೋರಾಟ ಮಾಡಿ, ಹೈದರಾಲಿಯ ಹಿಡಿತದಿಂದ ಚಿತ್ರದುರ್ಗದ ರಕ್ಷಣೆ ಮಾಡಿದಳು. ಕೊನೆಗೆ ಹೈದರಾಲಿಯ ಸೈನಿಕರೊಂದಿಗೆ ಶೌರ್ಯದಿಂದ ಹೋರಾಟ ಮಾಡುತ್ತಿರುವಾಗ ತನ್ನ ಪ್ರಾಣವನ್ನು ತ್ಯಜಿಸಿದಳು.
ವೀರವನಿತೆ ಒನಕೆ ಓಬವ್ವ ನವರ ಜಯಂತಿಯನ್ನು ರಾಜ್ಯ ಸರ್ಕಾರವು 2021 ನವೆಂಬರ್ 11ರಿಂದ ಆಚರಣೆ ಮಾಡುತ್ತಿರುವುದು ಶ್ಲಾಘನೀಯವಾದುದು.ಒನಕೆ ಓಬವ್ವನ ಆದರ್ಶ ಗುಣಗಳನ್ನು ಇಂದಿನ ಯುವ ಜನತೆ ಬೆಳೆಸಿಕೊಳ್ಳಬೇಕು ಎಂದು ಊಚನಹಳ್ಳಿ ನಟರಾಜು ಮನವಿ ಮಾಡಿದರು.
ಓಬವ್ವ ಅವರ ಜಯಂತಿಯ ಅಂಗವಾಗಿ ಸಾರ್ವಜನಿಕರಿಗೆ ಸಿಹಿ ವಿತರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಛಲವಾದಿ ಮಹಾಸಭಾ ಹಿರಿಯ ಮುಖಂಡರು ಮತ್ತು ಗೌರವಾಧ್ಯಕ್ಷ ಸಿಂಧುಘಟ್ಟ ಸೋಮಸುಂದರ್, ನರಸಿಂಹ ಹರಿಹರಪುರ, ಕಿಕ್ಕೇರಿ ಹೋಬಳಿ ಅಧ್ಯಕ್ಷ ಕಳ್ಳನಕೆರೆ ಕೆ.ಆರ್.ಶಂಕರ್, ,ಚಟ್ಟೇನಹಳ್ಳಿ ರಾಮು, ರವಿ ಕಾಗೆಪುರ, ನಗರೂರು ಮಂಜಯ್ಯ, ಬಂಡಿಹೊಳೆ ಕೃಷ್ಣಮೂರ್ತಿ, ಸಿಂಧುಘಟ್ಟ ಹೇಮಂತ್ಕುಮಾರ್, ಬೋಳಮಾರನಹಳ್ಳಿ ಕುಮಾರ್, ಜಕ್ಕನಹಳ್ಳಿ ರಾಜೇಶ್ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.
——-ಶ್ರೀನಿವಾಸ್ ಕೆ ಆರ್ ಪೇಟೆ