ಚಿಕ್ಕಮಗಳೂರು-ಯುವಚೇತನ ರೋಟರಿ ಯುವ ಸಪ್ತಾಹ ಮುಕ್ತಾಯ-ಬಹುಮಾನಕ್ಕಿಂತ ಪಾಲ್ಗೊಳ್ಳುವಿಕೆ ಮುಖ್ಯ:ಶಾಸಕ ತಮ್ಮಯ್ಯ

ಚಿಕ್ಕಮಗಳೂರು-ಬಹುಮಾನ ಗಳಿಸುವುದಕ್ಕಿಂತ ಪಾಲ್ಗೊಳ್ಳುವಿಕೆ ಮುಖ್ಯ.ಸ್ಪರ್ಧಾ ಮನೋಭಾವ ಬದುಕಿನಲ್ಲಿ ಉಪಯುಕ್ತ ಎಂದು ಶಾಸಕ ಎಚ್.ಡಿ.ತಮ್ಮಯ್ಯ ನುಡಿದರು.

ಚಿಕ್ಕಮಗಳೂರು ರೋಟರಿಕ್ಲಬ್ ನಗರದ ಎಂ.ಎಲ್.ವಿ.ರೋಟರಿ ಸಭಾಂಗಣದಲ್ಲಿ ಐದು ದಿನಗಳ ಕಾಲ ಆಯೋಜಿಸಿದ್ದ ‘ಯುವಚೇತನ 2024-25’ ಮುಕ್ತಾಯ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು.

ವಿದ್ಯಾರ್ಥಿ ಯುವಜನರಲ್ಲಿ ಅಪಾರ ಪ್ರತಿಭೆ, ಶಕ್ತಿ, ಸಾಮರ್ಥ್ಯ ಇರುತ್ತದೆ.ವಿಶೇಷತೆಗಳನ್ನು ಗುರುತಿಸಿ,ಗೌರವಿಸಿ ಪ್ರೋತ್ಸಾಹಿಸಿದಾಗ ಅವರಿಂದ ಮಹತ್ವದ ಸಾಧನೆ-ಕೊಡುಗೆ ನಿರೀಕ್ಷಿಸಬಹುದು.ಸಾಮರ್ಥ್ಯವನ್ನು ಗುರುತಿಸಲು ಇಂತಹ ಸ್ಪರ್ಧೆಗಳು ಉಪಯುಕ್ತ ಎಂದ ಶಾಸಕ ತಮ್ಮಯ್ಯ,ಬಹುಮಾನಕ್ಕಿಂತ ಪಾಲ್ಗೊಳ್ಳುವಿಕೆ ಮುಖ್ಯ.ಈ ಬಾರಿ ಬಹುಮಾನ ಬಾರದವರು ಕೊರತೆಗಳನ್ನು ಗಮನಿಸಿ ಸರಿಪಡಿಸಿಕೊಂಡು ಮುನ್ನಡೆದರೆ ಮುಂದಿನ ದಿನಗಳಲ್ಲಿ ಜಯ ಖಚಿತ.ತಾಳ್ಮೆ, ಸಹನೆ, ನಿರಂತರ ಪ್ರಯತ್ನ,ಪರಿಶ್ರಮ ಯಶಸ್ಸನ್ನು ತಂದು ಕೊಡುತ್ತದೆ ಎಂದರು.

ಶತಮಾನಗಳ ಇತಿಹಾಸವಿರುವ ರೋಟರಿಸಂಸ್ಥೆ ಸಮಾಜಮುಖಿ ಕಾರ್ಯದ ಮೂಲಕ ಮನುಕುಲದ ಸೇವೆಯಲ್ಲಿ ತೊಡಗಿಸಿಕೊಂಡಿದೆ.ಚಿಕ್ಕಮಗಳೂರಿನಲ್ಲೂ ರೋಟರಿ ಸದಸ್ಯರು ಶ್ಲಾಘನೀಯ ಸೇವೆ ಸಲ್ಲಿಸುತ್ತಿದ್ದಾರೆಂದು ಶಾಸಕರು ಅಭಿನಂದಿಸಿದರು.

ಸಮಾರೋಪ ಭಾಷಣ ಮಾಡಿದ ಸಾಹಿತಿ ಡಾ.ಬೆಳವಾಡಿಮಂಜುನಾಥ್, ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ಸಾಂಸ್ಕೃತಿಕ ಹಾಗೂ ಕ್ರೀಡಾ ಸ್ಪರ್ಧೆಗಳನ್ನೊಳಗೊಂಡ ಯುವಚೇತನ ಸಪ್ತಾಹ ಸಹಕಾರಿ.ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಉತ್ತಮ ವೇದಿಕೆಯಾಗಿದೆ ಎಂದರು.

ಯುವಕರಲ್ಲಿ ವಿಶೇಷ ಸಾಮರ್ಥ್ಯವಿರುತ್ತದೆ.ಕಲಿಕೆ ಮತ್ತು ಸಾಧನೆಗೆ ತಾರುಣ್ಯದಲ್ಲಿ ಅವಕಾಶವಿದೆ.ಅತಿ ಹೆಚ್ಚು ಭಾಷೆಗಳನ್ನು ಕಲಿಯುವ ಸಾಮರ್ಥ್ಯವು ಯುವಕರಲ್ಲಿದೆ.ರೋಟರಿ ಸಂಸ್ಥೆ ಉತ್ತಮ ವೇದಿಕೆಯನ್ನು ನೀಡಿದ್ದು ಸದ್ಭಳಕೆ ಮಾಡಿಕೊಂಡರೆ ಭವಿಷ್ಯ ಉಜ್ವಲವಾಗುತ್ತದೆ ಎಂದ ಡಾ.ಬೆಳವಾಡಿಮಂಜುನಾಥ್ ಆರೋಗ್ಯಪೂರ್ಣ ಸಮಾಜ ನಿರ್ಮಾಣದಲ್ಲಿ ರೋಟರಿ ಪಾತ್ರ ಗಣನೀಯ. ಪೋಲಿಯೋ ಮಹಾಮಾರಿ ನಿರ್ಮೂಲನೆಯಲ್ಲಿ ರೋಟರಿ ಶ್ರಮಿಸಿದೆ. ಜೀವನಸಂಧ್ಯಾ ವೃದ್ಧಾಶ್ರಮ ಸೇವಾ ಕಾರ್ಯಕ್ಕೊಂದು ನಿದರ್ಶನ ಎಂದರು.

ಸ್ಪರ್ಧಾ ವಿಜೇತರಿಗೆ ರೋಟರಿ ನಾಯಕ ಜಿ.ಎಲ್.ವೆಂಕಟೇಶಮೂರ್ತಿ ಸೇರಿದಂತೆ ರೋಟರಿ ಪದಾಧಿಕಾರಿಗಳು ಬಹುಮಾನ ವಿತರಿಸಿದರು.

ಮುಕ್ತಾಯ ಸಮಾರಂಭದ ಅಧ್ಯಕ್ಷತೆವಹಿಸಿದ್ದ ಚಿಕ್ಕಮಗಳೂರು ರೋಟರಿಕ್ಲಬ್ ಅಧ್ಯಕ್ಷ ಎಂ.ಎಲ್.ಸುಜಿತ್ ಸ್ವಾಗತಿಸಿ,ಕಾರ್ಯದರ್ಶಿ ಎನ್.ಪಿ.ಲಿಖತ್ ವಂದಿಸಿದರು.

ಯುವಚೇತನದ ಸಪ್ತಾಹದ ಚೇರ್ಮೆನ್ ಫಣಿಂದ್ರ ನಾಡಿಗ್ ವೇದಿಕೆಯಲ್ಲಿದ್ದರು. ಯುವಯೋಜನಾ ನಿರ್ದೇಶಕ ಚಿದಾನಂದ ಸಪ್ತಾಹದ ವರದಿಯನ್ನು ನೀಡಿದರು. ಮುಖ್ಯಅತಿಥಿಗಳನ್ನು ಸಹಸಂಯೋಜಕ ಹರ್ಷಿತ್‌ವಸಿಷ್ಠ ಪರಿಚಯಿಸಿದರು.

ಸಾಯಿಏಂಜೆಲ್ಸ್ ಮತ್ತು ಟಿಎಂಎಸ್ ಶಾಲಾತಂಡ ನೃತ್ಯ ಪ್ರದರ್ಶನ ಗಮನಸೆಳೆಯಿತು. ಪ್ರಣವ್ ಮತ್ತು ಮಾನ್ಯತಾ ಪ್ರಾರ್ಥಿಸಿದರು.

Leave a Reply

Your email address will not be published. Required fields are marked *

× How can I help you?