ಎಚ್.ಡಿ.ಕೋಟೆ:ರೈತರು ಖರೀದಿಸಿದ್ದ ರಸಗೊಬ್ಬರಕ್ಕೆ ಹೆಚ್ಚವರಿ ಹಣ ವಸೂಲಿ ಮಾಡಿದ್ದಾರೆ ಎನ್ನುವ ಆರೋಪವಿರುವ ತಾಲೂಕಿನ ಹಂಪಾಪುರ ಗ್ರಾಮದ ಶ್ರೀರಾಜೇಶ್ವರಿ ಆಗ್ರೋ ಟ್ರೇಡರ್ಸ್ ನ ಅಂಗಡಿ ಮುಂದೆ ಕರ್ನಾಟಕ ರಾಜ್ಯ ರೈತ ಕಲ್ಯಾಣ ಸಂಘಟನೆಯ ಪದಾಧಿಕಾರಿಗಳು ಹಾಗು ರೈತರು ಪ್ರತಿಭಟನೆ ನಡೆಸಿ ನ್ಯಾಯಕ್ಕಾಗಿ ಒತ್ತಾಯಿಸಿದರು.
ಬಾಚೇಗೌಡನಹಳ್ಳಿಯ ರೈತ ಚಿಕ್ಕಣ್ಣನಾಯಕ ತನ್ನ ಜಮೀನಿನಲ್ಲಿ ಬೆಳೆದಿದ್ದ ಬಾಳೆ ಬೆಳೆಗೆ ದಿ.21ರಂದು ರಸಗೊಬ್ಬರ ಖರೀದಿಸಿದ್ದಾರೆ.ಅಂಗಡಿಯಲ್ಲಿ ನಿಗಧಿತ ಬೆಲೆಗಿಂತ ಹೆಚ್ಚುವರಿ ಹಣ ಪಡೆದಿದ್ದಾರೆ ಹಾಗೂ ನಕಲಿ ಬಿಲ್ ನೀಡಿ ವಂಚಿಸಿದ್ದಾರೆ ಎನ್ನಲಾಗಿದ್ದು ಇದನ್ನು ಅವರು ರಾಜ್ಯ ರೈತ ಕಲ್ಯಾಣ ಸಂಘಟನೆಯವರ ಗಮನಕ್ಕೆ ತಂದಿದ್ದಾರೆ.
ಈ ಮಾಹಿತಿಯನ್ನು ಪಡೆದ ಸಂಘಟನೆಯ ರಾಜ್ಯ ಗೌರವಾಧ್ಯಕ್ಷ ಹೇಮಂತ್ ಕುಮಾರ್,ರಾಜ್ಯ ಪ್ರಧಾನ ಕಾರ್ಯದರ್ಶಿ ಮೂರ್ತಿ ಕೋಟೆ,ಯುವ ಘಟಕದ ಅಧ್ಯಕ್ಷ ರುದ್ರ ಮುಂತಾದವರು ಅಂಗಡಿಗೆ ತೆರಳಿ ಪರಿಶೀಲನೆ ನಡೆಸಿದಾಗ ವಂಚಿಸಿರುವುದು ಬೆಳಕಿಗೆ ಬಂದಿದೆ ಎನ್ನಲಾಗಿದೆ.
ಇದರಿಂದ ಉದ್ರಿಕ್ತಗೊಂಡ ಸಂಘಟನೆಯ ಸದಸ್ಯರುಗಳು ಹಾಗು ರೈತರುಗಳು ಅಂಗಡಿಯ ಮುಂದೆ ಪ್ರತಿಭಟನೆಗೆ ಕುಳಿತು ಕೃಷಿ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಬಂದು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ತಾಲೂಕು ಕೃಷಿ ಅಧಿಕಾರಿ ಜಯರಾಮ್ಅಂಗಡಿಯ ಬಿಲ್ ಪರಿಶೀಲಿಸಿ,ಇವರು ನಕಲಿ ಬಿಲ್ ನೀಡಿರುವುದು ಮೇಲ್ನೊಟಕ್ಕೆ ಸಾಬೀತಾಗಿದೆ.ಕಾರಣ ಕೇಳಿ ಶೋಕಾಸ್ ನೋಟಿಸ್ ನೀಡಿ ವಾರದೊಳಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು.ಒಂದು ವಾರದೊಳಗೆ ತಾಲೂಕಿನ 40 ಅಂಗಡಿಗಳ ಮಾರಾಟಗಾರರ ಸಭೆ ಕರೆದು ರೈತರಿಗೆ ಅನ್ಯಾಯವಾಗದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಅಷ್ಟಕ್ಕೇ ಸುಮ್ಮನಾಗದ ಪ್ರತಿಭಟನಾಕಾರರು ಕೃಷಿ ಇಲಾಖೆಯಲ್ಲಿ ಸಬ್ಸಿಡಿಯಲ್ಲಿ ದೊರೆಯುವ ಪೈಪ್ ಸೇರಿದಂತೆ ಇತರೆ ಯಂತ್ರೋಪಕರಣಗಳ ವಿತರಣೆಯಲ್ಲಿ ರೈತರಿಗೆ ಅನ್ಯಾಯವಾ ಗುತ್ತಿದೆ.ಕೃಷಿ ಇಲಾಖೆಯಲ್ಲಿ ಮಧ್ಯವರ್ತಿಗಳ ಹಾವಳಿ ಮಿತಿಮೀರಿದೆ.ಬಿತ್ತನೆ ಬೀಜ,ಕ್ರಿಮಿನಾಶಕ ಅಂಗಡಿಗಳ ಮಾಲೀಕರು ಕೃತಕ ಅಭಾವ ಸೃಷ್ಟಿಸಿ ರೈತರಿಗೆ ವಂಚಿಸುತ್ತಿದ್ದಾರೆ.ಈ ಕೂಡಲೆ ಇವುಗಳ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವುದರೊಂದಿಗೆ,ಕೃಷಿ ಇಲಾಖೆಯ ಸಭೆಗಳಿಗೆ ತಮ್ಮನ್ನು ಆಹ್ವಾನಿಸುವಂತೆ ಆಗ್ರಹಿಸಿದರು.
ಕೃಷಿ ಅಧಿಕಾರಿ ಜಯರಾಮ್ ಉದ್ರಿಕ್ತರನ್ನು ಸಮಾಧಾನಪಡಿಸಿ ಆ ತರಹದ ತೊಂದರೆಗಳು ಆಗಿದ್ದಲ್ಲಿ ನನ್ನ ಗಮನಕ್ಕೆ ತನ್ನಿ ಒಂದು ವೇಳೆ ಹಾಗೇನಾದರೂ ಇದ್ದದ್ದೇ ಆದರೆ ಕ್ರಮ ಕೈಗೊಳ್ಳಲಾಗುವುದು.ಸಂಘಟನೆಯವರು ಹಾಗು ರೈತರಿಗೆ ಕೃಷಿ ಇಲಾಖೆಯ ಸಾರ್ವಜನಿಕ ಕಾರ್ಯಕ್ರಮಗಳಿಗೆ ಮುಕ್ತ ಆಹ್ವಾನವಿದೆ.ಮುಂದಿನ ಸಭೆಗಳ ಮಾಹಿತಿಯನ್ನು ತಪ್ಪದೆ ತಿಳಿಸುವುದಾಗಿ ಹೇಳಿದರು.
ಈ ಸಮಯದಲ್ಲಿ ಮಾಧ್ಯಮ ಪ್ರತಿನಿಧಿಗಳಾದ ಹರೀಶ್,ಜಿಲ್ಲಾ ಗೌರವಾಧ್ಯಕ್ಷ ಮಾದೇಗೌಡ,ಜಿಲ್ಲಾ ಅಧ್ಯಕ್ಷ ಅನಿಲ್,ಎಚ್.ಡಿ ಕೋಟೆ ಗೌರವಾಧ್ಯಕ್ಷ ಮಂಚಯ್ಯ,ತಾಲೂಕು ಉಪಾಧ್ಯಕ್ಷ ಜಗದೀಶ್, ರವಿಕುಮಾರ್, ತಾಲೂಕು ಪ್ರಧಾನ ಕಾರ್ಯದರ್ಶಿ ದಾಸೇಗೌಡ, ತಾಲೂಕು ಕಾರ್ಯಾಧ್ಯಕ್ಷ ಶಿವಣ್ಣೇಗೌಡ, ಹುಣಸೂರು ತಾಲೂಕು ಅಧ್ಯಕ್ಷ ಪ್ರತಾಪ್, ಹಾಗೂ ರೈತ ಕಲ್ಯಾಣ ಸಂಘಟನೆಯ ಪದಾಧಿಕಾರಿಗಳು ಇದ್ದರು.
ವರದಿ-ಶಿವು ಕೋಟೆ -ಸಂಪರ್ಕ ಸಂಖ್ಯೆ:7411991888