ಬೇಲೂರು;-ಕಳೆದ ಹಲವಾರು ವರ್ಷಗಳಿಂದ ಇದೊಂದು ರಸ್ತೆಯನ್ನು ದುರಸ್ತಿ ಮಾಡಿಕೊಡಿ ಎಂದು ಅಂದಿನ ಶಾಸಕರಾದಿಯಾಗಿ ಸ್ಥಳೀಯ ಗ್ರಾಮಪಂಚಾಯತಿಯು ಸೇರಿದಂತೆ ಸಿಕ್ಕ ಸಿಕ್ಕವರಿಗೆ ಅರ್ಜಿಗಳ ಕೊಟ್ಟು ಮನವಿ ಮಾಡಿದರು ಪ್ರಯೋಜನವಾಗಿಲ್ಲ ಎಂದು ತಾಲ್ಲೂಕಿನ ಹೆಬ್ಬಾಳು ಗ್ರಾಮದ ಹೀರೆಕೆರೆ ಸಮೀಪ ಮನೆಗಳ ಕಟ್ಟಿಕೊಂಡು ವಾಸವಾಗಿರುವ ಹತ್ತಕ್ಕೂ ಹೆಚ್ಚು ಮನೆಗಳ ವಾಸಿಗಳು ಆಕ್ರೋಶ ಹೊರಹಾಕಿದರು.
ಇಂದು ಗುಂಡಿ ಬಿದ್ದು ಮಳೆ ನೀರು ನಿಂತು ಕೆಸರು ಗದ್ದೆಯಂತಾಗಿರುವ ರಸ್ತೆಯಲ್ಲಿ ನಿಂತು ಪ್ರತಿಭಟಿಸಿ ಅವರು ಮಾತನಾಡಿದರು.ನಾವು ಪ್ರತಿನಿತ್ಯ ಸಂಚರಿಸುವ ದಾರಿ ಕೆಸರುಮಯವಾಗಿದ್ದು ಸಂಬಂಧ ಪಟ್ಟವರು ರಸ್ತೆಗೆ ಕಾಯಕಲ್ಪನೀಡಲು ಮೀನಾ-ಮೇಷ ಎಣಿಸುತ್ತಿದ್ದಾರೆ.ಶೀಘ್ರವೇ ರಸ್ತೆ ದುರಸ್ತಿಗೆ ಮುಂದಾಗಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಪತ್ರಿಕೆಯೊಂದಿಗೆ ಮಾತನಾಡಿದ ಹೆಬ್ಬಾಳು ಗ್ರಾಮದ ಮುಖಂಡ ವೇದಮೂರ್ತಿ,ಕಳೆದ ಹತ್ತಾರು ವರ್ಷದಿಂದ ಹೀರೆಕೆರೆ ದಂಡೆಯ ಬದಿಯಲ್ಲಿ ಸುಮಾರು ೧೦ ಕ್ಕೂ ಹೆಚ್ಚಿನ ಮನೆಗಳನ್ನು ನಿರ್ಮಾಣ ಮಾಡಿಕೊಂಡು ಜೀವನನಡೆಸುತ್ತಿದ್ದೇವೆ.ಇಲ್ಲಿನ ಪ್ರಮುಖ ಉದ್ಯೋಗ ಹೈನುಗಾರಿಕೆಯಾಗಿದೆ.ಬೆಳಿಗ್ಗೆ ಸಂಜೆ ಇಲ್ಲಿಂದ ಹಾಲು ತೆಗೆದುಕೊಂಡು ಡೈರಿಗೆ ಹಾಕುವುದು ನಿಜಕ್ಕೂ ಕಷ್ಟವಾಗಿದೆ.ಅಲ್ಲದೆ ವಿದ್ಯಾರ್ಥಿಗಳು ಈ ರಸ್ತೆಯಲ್ಲಿ ಶಾಲೆಗೆ ತೆರಳಲು ಸಾಧ್ಯವಾಗುತ್ತಿಲ್ಲ.ಇನ್ನು ವಯೋವೃದ್ಧರನ್ನು,ರೋಗಪೀಡಿತರನ್ನು ಈ ರಸ್ತೆಯಲ್ಲಿ ಆಸ್ಪತ್ರೆಗೆ ಕರೆದುಕೊಂಡು ಹೋಗುವುದು ಹರಸಾಹಸವಾಗಿದೆ.
ಕಳೆದ ಹತ್ತು ವರ್ಷದಿಂದ ನಮಗೆ ದಾರಿ ಬೇಕು ಅಂತ ಎಷ್ಟೋ ಭಾರಿ ಗ್ರಾಮ ಪಂಚಾಯಿತಿ,ತಾಲ್ಲೂಕು ಪಂಚಾಯಿತಿ,ಜಿಲ್ಲಾ ಪಂಚಾಯಿತಿ ಮತ್ತು ಶಾಸಕರು ಸೇರಿದಂತೆ ಲೋಕಸಭಾ ಸದಸ್ಯರಿಗೆ ದೂರು ನೀಡಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ,ನಿತ್ಯ ನರಕಯಾತನೆಯಾಗಿರುವ ಈ ರಸ್ತೆಯನ್ನು ದುರಸ್ತಿ ಮಾಡುವ ಮೂಲಕ ಕಾಯಕಲ್ಪ ನೀಡಬೇಕು ಎಂದು ಒತ್ತಾಯಿಸಿದರು.
ಕರ್ನಾಟಕ ರಾಜ್ಯ ರೈತ ಸಂಘ ತಾಲ್ಲೂಕು ಘಟಕದ ಪ್ರಧಾನ ಕಾರ್ಯದರ್ಶಿ ಹುಲ್ಲೇನಹಳ್ಳಿ ಬಸವರಾಜ್ ಮಾತನಾಡಿ,ಗ್ರಾಮ ಪಂಚಾಯಿತಿಗಳು ಜನರಿಗೆ ಕನಿಷ್ಠ ಮೂಲಭೂತ ಸೌಲಭ್ಯವನ್ನು ನೀಡದೆ ನಿರ್ಲಕ್ಸ್ಯ ಧೋರಣೆ ಅನುಸರಣೆ ಮಾಡುತ್ತಿದ್ದಾರೆ.ಇನ್ನು ಜನಪ್ರತಿನಿಧಿಗಳು ಭರವಸೆಗಳ ಮೇಲೆ ಭರವಸೆಗಳನ್ನು ನೀಡುತ್ತಾ ಓಟು ಪಡೆದು ಅಧಿಕಾರಕ್ಕೆ ಅಂಟಿಕೊಂಡಿದ್ದಾರೆ, ಶಾಸಕರಾದ ಹುಲ್ಲಳ್ಳಿ ಸುರೇಶ ರವರು ಗಮನ ಹರಿಸಿ ಶೀಘ್ರವೇ ರಸ್ತೆ ದುರಸ್ತಿ ಮಾಡಬೇಕು ಇಲ್ಲವಾದರೆ ಮುಂದಿನ ದಿನದಲ್ಲಿ ರಸ್ತೆಗಾಗಿನ ಹೋರಾಟ ನಡೆಸುವುದು ಅನಿವಾರ್ಯವಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ದೊಡ್ಡಬ್ಯಾಡಿಗೆರೆ ಗ್ರಾಮದ ಮುಖಂಡ ಉಮೇಶ್,ಎಪಿಎಂಸಿ ಮಾಜಿ ಸದಸ್ಯ ಆನಂದಕುಮಾರ್,ಶಿವಕುಮಾರ್,ಕುಮಾರ್, ಮೋಹನ್ಕುಮಾರ್, ಶಂಕರೇಗೌಡ ಇನ್ನು ಮುಂತಾದವರು ಇದ್ದರು.
—————ದಿನೇಶ್ ಬೆಳ್ಳಾವರ