ಕನ್ನಡದ ಐಕ್ಯತೆಯ ದ್ಯೋತಕವಾಗಿ ನಮ್ಮ ಸಾಹಿತ್ಯ -ಸಂಸ್ಕೃತಿ-ಪರಂಪರೆಯನ್ನು ಬಿಂಬಿಸುವ ನಿಟ್ಟಿನಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಆಚರಿಸುತ್ತಾ ಬರಲಾಗಿದೆ. ನಾಡು-ನುಡಿಯ ಬಗೆಗಿನ ಅಭಿಮಾನವನ್ನು ಜನಮನದಲ್ಲಿ ಸದಾ ಕಾಲ ಚೈತನ್ಯಶೀಲವಾಗಿಡಲು ಕನ್ನಡ ಸಾಹಿತ್ಯ ಸಮ್ಮೇಳನ ಸಹಕರಿಯಾಗಲಿದೆ,ಸಹಕಾರಿಯಾಗಿದೆ ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್ ಚಲುವರಾಯಸ್ವಾಮಿ ಅವರು ತಿಳಿಸಿದರು.
ಅತಿ ಹೆಚ್ಚು ಕನ್ನಡ ಮಾತನಾಡುವ ಜನರಿರುವ ಖ್ಯಾತಿ ಇರುವ ನಮ್ಮ ಮಂಡ್ಯ ಜಿಲ್ಲೆಯಲ್ಲಿ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಇದೇ ಡಿಸೆಂಬರ್ 20, 21 ಮತ್ತು 22ರಂದು ಆಚರಿಸುವ ಅವಕಾಶ ಲಭಿಸಿರುವುದು ನಾವೆಲ್ಲರೂ ಸಂಭ್ರಮಿಸಬೇಕಾದ ವಿಷಯವಾಗಿದೆ.
ಈ ನಿಟ್ಟಿನಲ್ಲಿ ಈಗಾಗಲೇ ಸಾಕಷ್ಟು ಕಾರ್ಯಚಟುವಟಿಕೆಗಳು ಪ್ರಾರಂಭವಾಗಿವೆ. ಸಮ್ಮೇಳನವನ್ನು ಯಶಸ್ವಿಯಾಗಿ ನಿರ್ವಹಿಸುವ ದೃಷ್ಟಿಯಲ್ಲಿ 28 ಸಮಿತಿಗಳನ್ನು ರಚಿಸಿದ್ದು, ಎಲ್ಲಾ ಸಮಿತಿಗಳ ಅಧ್ಯಕ್ಷತೆಯನ್ನು ಜಿಲ್ಲೆಯ ಎಲ್ಲಾ ಶಾಸಕರು ವಹಿಸಿಕೊಂಡು ಕ್ರಿಯಾಶೀಲವಾಗಿ ತೊಡಗಿಸಿಕೊಂಡಿರುವುದು ಮತ್ತಷ್ಟು ಮೆರಗು ತಂದಿದೆ ಎಂದು ತಿಳಿಸಿದರು.
ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಮತ್ತು ಕನ್ನಡ ಸಾಹಿತ್ಯ ಪರಿಷತ್ತಿನ ಸಮನ್ವಯದೊಂದಿಗೆ ಸಮ್ಮೇಳನಕ್ಕೆ ಸಂಬಂಧಿಸಿದ ಎಲ್ಲಾ ಕಾರ್ಯ ಚಟುವಟಿಕೆಗಳು ಪ್ರಾರಂಭವಾಗಿವೆ. ಸಮ್ಮೇಳನಕ್ಕೆ ಸ್ಥಳ ಆಯ್ಕೆಗೆ ಸಂಬಂಧಿಸಿದಂತೆ ಸಾಕಷ್ಟು ಅಭಿಪ್ರಾಯಗಳು ವ್ಯಕ್ತವಾದ ಹಿನ್ನೆಲೆಯಲ್ಲಿ ಸೂಕ್ತವಾದ ಜಾಗವನ್ನು ಆಯ್ಕೆ ಮಾಡುವ ಸಂಬಂಧ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಚರ್ಚಿಸಲಾಗಿರುತ್ತದೆ ಹಾಗೂ ವಿವಿಧ ಸಮಿತಿಗಳ ಸದಸ್ಯರು, ಶಾಸಕರು ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನೊಟ್ಟಿಗೆ ಸಾಕಷ್ಟು ಚರ್ಚೆ ನಡೆಸಲಾಗಿದೆ ಎಂದರು.
ಸಮ್ಮೇಳನಕ್ಕೆ ಸೂಕ್ತವಾದ ವಿಶಾಲವಾದ ಹಾಗೂ ಸುರಕ್ಷಿತವಾದ ಸ್ಥಳದ ಅಗತ್ಯವಿದ್ದು, ಅದಕ್ಕಾಗಿ ಹಲವಾರು ಸ್ಥಳಗಳನ್ನು ಪರಿಶೀಲಿಸಲಾಗಿದೆ. ಜೊತೆಗೆ ಸ್ಥಳ ಪರಿಶೀಲನೆಗೆ ತಾಂತ್ರಿಕ ಪರಿಣಿತರ ತಂಡದ ಮೂಲಕ ಜಾಗಗಳ ಸುರಕ್ಷತೆಯನ್ನು ಖಾತ್ರಿ ಪಡಿಸಿಕೊಂಡು, ಅಂತಿಮವಾಗಿ ಸಮ್ಮೇಳನ ನಡೆಸಲು ರಾಷ್ಟ್ರೀಯ ಹೆದ್ದಾರಿ-275 ಕ್ಕೆ ಹೊಂದಿಕೊಂಡಂತೆ ಇರುವ ಸಾಂಜೋ ಆಸ್ಪತ್ರೆ ಹಾಗೂ ಅಮರಾವತಿ ಹೋಟೆಲ್ ನ ಹಿಂಭಾಗದ ಜಾಗವನ್ನು ತಾಂತ್ರಿಕ ವರದಿಯನ್ವಯ ಡಿಸೆಂಬರ್ 20, 21 ಮತ್ತು 22 ರಂದು ನಡೆಯುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸೂಕ್ತವೆಂದು ಗುರುತಿಸಿ, ಅಂತಿಮಗೊಳಿಸಲಾಗಿದೆ.
ಇದೇ ಡಿಸೆಂಬರ್ 20, 21 ಮತ್ತು 22ರಂದು ಆಚರಿಸುವ ನುಡಿ ಜಾತ್ರೆಯು ಬರಿ ನಾಡಿನ ಹಬ್ಬವಲ್ಲ ನಮ್ಮ ಮನೆ ಮನೆಯ ಹಬ್ಬವಾಗಬೇಕು. ಎಲ್ಲರೂ ಸಮ್ಮೇಳನದಲ್ಲಿ ಸಕ್ರಿಯವಾಗಿ ಭಾಗವಹಿಸುವ ಮೂಲಕ ಮಂಡ್ಯ ಜಿಲ್ಲೆಯಲ್ಲಿ ಡಿಸೆಂಬರ್ 20, 21 ಮತ್ತು 22 ರಂದು ನಡೆಯುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಮತ್ತಷ್ಟು ಮೆರುಗನ್ನು ತರಬೇಕು ಎಂದು 87 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷರಾದ ಎನ್ ಚಲುವರಾಯಸ್ವಾಮಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ರವಿ ಬಿ.ಹೆಚ್ ನಾಗಮಂಗಲ