ಚಿಕ್ಕಮಗಳೂರು-ವಿದ್ಯಾರ್ಥಿಗಳ ಮಸ್ತಕದಲ್ಲಿ ಜ್ಞಾನಭಂಡಾರ ವೃದ್ದಿಸಲು ಗ್ರಂಥಾಲಯಗಳು ಸಹಕಾರಿ-ಸುಜಾತ ಶಿವಕುಮಾರ್

ಚಿಕ್ಕಮಗಳೂರು-ವಿದ್ಯಾರ್ಥಿಗಳ ಮಸ್ತಕದಲ್ಲಿ ಜ್ಞಾನಭಂಡಾರ ವೃದ್ದಿಸಲು ಗ್ರಂಥಾಲಯಗಳು ಸಹಕಾರಿಯಾಗಿದ್ದು ಭವಿಷ್ಯದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಸಮಗ್ರವಾಗಿ ಎದುರಿಸಲು ಬಹಳಷ್ಟು ಅನುಕೂಲ ಎಂದು ನಗರಸಭಾ ಅಧ್ಯಕ್ಷೆ ಸುಜಾತ ಶಿವಕುಮಾರ್ ಹೇಳಿದರು.

ನಗರ ಕೇಂದ್ರ ಗ್ರಂಥಾಲಯದಲ್ಲಿ ಹಮ್ಮಿಕೊಂಡಿದ್ಧ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ ಕಾರ್ಯಕ್ರಮದಲ್ಲಿ ಗುರುವಾರ ಪಾಲ್ಗೊಂಡು ಅವರು ಮಾತನಾಡಿದರು.

ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು. ದೇಶ, ಧರ್ಮ ಹಾಗೂ ಭಾಷೆಯನ್ನು ಬೆಳೆಸಲು ಪ್ರಮುಖ ಜವಾಬ್ದಾರಿ ವಹಿಸಬೇಕು. ಅಲ್ಲದೇ ನಾಗರೀಕ ಸಮಾಜದಲ್ಲಿ ಉನ್ನತ ಸ್ಥಾನಮಾನ ಗಳಿಸಲು ಜ್ಞಾನವನ್ನು ಹೊಂದುವುದು ಅತಿಮುಖ್ಯ. ಹೀಗಾಗಿ ಗ್ರಂಥಗಳನ್ನು ಅಭ್ಯಾಸಿಸುವುದನ್ನು ರೂಢಿಸಿಕೊಳ್ಳಬೇಕು ಎಂದು ಹೇಳಿದರು.

ಇತ್ತೀಚಿನ ಸ್ಪರ್ಧಾತ್ಮಕ ಯುಗದಲ್ಲಿ ಜ್ಞಾನ ಸಂಪಾದಿಸುವುದು ಸುಲಭದ ಮಾತಲ್ಲ. ಆಳವಾಗಿ ಅಧ್ಯಯನ ನಡೆಸುವುದು ಮುಖ್ಯ. ಆ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ಹಾಗೂ ಹಿರಿಯರ ಸಾತ್ವಿಕ ಜೀವನಕ್ಕೆ ಸಾಧಕರು ರಚಿಸಿದ ಗ್ರಂಥಗಳು ಜೀವತುಂಬುವ ಜೊತೆಗೆ ಮಕ್ಕಳಿಗೆ ಸಮಾಜದಲ್ಲಿ ತಲೆಎತ್ತುವಂತೆ ಮಾಡುತ್ತದೆ ಎಂದರು.

ಬಡ ಹಾಗೂ ಮಧ್ಯಮ ವರ್ಗದ ಮಕ್ಕಳು ಜ್ಞಾನಾರ್ಜನೆಯಿಂದ ವಂಚಿತರಾಗದಿರಲು ಸರ್ಕಾರ ಗ್ರಂಥಾಲಯಗಳನ್ನು ಸ್ಥಾಪಿಸಿ ಕವಿದಾರ್ಶನಿಕರು, ಸಾಧಕರ ಜೀವನ ಚರಿತ್ರೆ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ನಿಭಾಯಿಸುವ ವಿಶಿಷ್ಟ ಪುಸ್ತಕಗಳನ್ನು ಒದಗಿಸಿ ಮಕ್ಕಳ ಶೈಕ್ಷಣಿಕ ಬೆಳವಣಿಗೆಗೆ ಸಹಕರಿಸುತ್ತಿದೆ ಎಂದರು.

ಜ್ಞಾನಾರ್ಜನೆ ಹೊಂದುವ ವಿದ್ಯಾರ್ಥಿಗಳು ಭವಿಷ್ಯದಲ್ಲಿ ಉನ್ನತ ಅಧಿಕಾರಿಗಳಾಗಿ ಬಡವರು, ಶೋಷಿತರು ಹಾಗೂ ಅಸಹಾಯಕರಿಗೆ ಸ್ಪಂದಿಸುವ ರೀತಿಯಲ್ಲಿ ಕರ್ತವ್ಯ ನಿರ್ವಹಿಸಬೇಕು. ಅಲ್ಲದೇ ಅಂಬೇಡ್ಕರ್ ಆಶಯದಂತೆ ಆರೋಗ್ಯ, ಶಿಕ್ಷಣ ಉಚಿತವಾಗಿ ನೀಡಬೇಕೆಂಬ ಘೋಷವಾಕ್ಯದಂತೆ ನಡೆದುಕೊಳ್ಳಬೇಕು ಎಂದು ಹೇಳಿದರು.

ನಗರ ಕೇಂದ್ರ ಗ್ರಂಥಾಲಯಾಧಿಕಾರಿ ಉಮೇಶ್ ಮಾತನಾಡಿ, ಗ್ರಂಥಾಲಯ ಸಪ್ತಾಹವನ್ನು ಇಂದಿನಿoದ ಆರು ದಿನಗಳ ಕಾಲ ಆಚರಿಸಲಾಗುತ್ತಿದೆ. ಈ ನಡುವೆ ವಿದ್ಯಾರ್ಥಿಗಳಿಗೆ ಅನೇಕ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ ಎಂದ ಅವರು ವಿದ್ಯಾರ್ಥಿಗಳ ಜ್ಞಾನ ವೃದ್ದಿಸುವ ಸಲುವಾಗಿ ಪ್ರತಿ ವರ್ಷವು ಸಪ್ತಾಹ ಆಚ ರಿಸಿ ಪ್ರೋತ್ಸಾಹಿಸುತ್ತಿದೆ ಎಂದರು.

ಈ ಸಂದರ್ಭದಲ್ಲಿ ಪ್ರಥಮ ದರ್ಜೆ ಸಹಾಯಕರು ಜಿ.ಸೌಮ್ಯ, ಗ್ರಂಥಾಲಯದ ಸಿಬ್ಬಂದಿಗಳಾದ ಬಿ.ಕೆ. ಲತಾ, ಕೆ.ಬಿ.ವೀಣಾ, ಸಿ.ಟಿ.ರಾಘವೇಂದ್ರ, ಬಿ.ಎಂ.ಸಿದ್ದಪ್ಪ ಶಂಕರೇಗೌಡ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

——————-ಸುರೇಶ್

Leave a Reply

Your email address will not be published. Required fields are marked *

× How can I help you?