ಧರ್ಮಸ್ಥಳ:ಧರ್ಮಸ್ಥಳದ ಗ್ರಾಮಾಭಿವೃದ್ಧಿ ಯೋಜನೆಯಿಂದ ಗ್ರಾಮೀಣ ಭಾಗದ ಮಹಿಳೆಯರಲ್ಲಿ ಆರ್ಥಿಕ ಶಕ್ತಿ ತುಂಬುವ ಕೆಲಸ ನಡೆಯುತ್ತಿದೆ,ಇಂದು ದೇಶದಲ್ಲಿ ಕೃಷಿ ಕ್ಷೇತ್ರದಲ್ಲಿ ಭಾರೀ ಬದಲಾವಣೆ ಆಗಿದೆ,ಕೃಷಿ ಕ್ಷೇತ್ರದಿಂದ ದೇಶದ ಜನರಿಗಾಗಿ ಯತೇಚ್ಛ ಆಹಾರ ಉತ್ಪಾದನೆ ಆಗುತ್ತಿದೆ ಈ ನಿಟ್ಟಿನಲ್ಲಿ ಡಾ||ಡಿ.ವೀರೇಂದ್ರಹೆಗ್ಗಡೆ ರವರು ಉತ್ತಮ ಕೆಲಸ ಮಾಡುತ್ತಿದ್ದಾರೆ ಎಂದು ಕೇಂದ್ರ ಹಣಕಾಸು ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಎಂದು ಹೇಳಿದರು.
ಅವರು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್(ರಿ) ವತಿಯಿಂದ ಗುರುವಾರ ಸ್ವಸಹಾಯ ಸಂಘಗಳ ಸದಸ್ಯರುಗಳಿಗೆ ಲಾಭಾಂಶ ವಿತರಣಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದರು.
ವೇದಿಕೆಯಲ್ಲಿ ಸಚಿವರು ಸಾಂಕೇತಿಕವಾಗಿ ಚೆಕ್ ವಿತರಿಸುತ್ತಿದ್ದರೆ ಸಂಘದ 55 ಲಕ್ಷ ಸದಸ್ಯ ರುಗಳ ಖಾತೆಗೆ ನೇರವಾಗಿ ಸಾವಿರಾರು ರೂಪಾಯಿ ಲಾಭಾಂಶ ಜಮೆಯಾದ ಮೆಸೇಜ್ ಗಳು ಬರುತ್ತಿದ್ದವು.ಮಹಿಳೆಯರು ನಾಯಕತ್ವ ವಹಿಸಿದರೆ ಏನು ಬೇಕಾದರೂ ಸಾಧಿಸಬಹುದು ಎಂಬುದಕ್ಕೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಾಕ್ಷಿ ಎಂದು ಸಚಿವರು ಶ್ಲಾಘಿಸಿದರು.
ಭಾರತ ದೇಶದ ಇತಿಹಾಸದಲ್ಲಿಯೇ ಸ್ವಸಹಾಯ ಗುಂಪುಗಳ ಇತಿಹಾಸದಲ್ಲಿ ಅತಿ ದೊಡ್ಡ ಲಾಭಾಂಶ ಎಂಬ ಕೀರ್ತಿ ತನ್ನದಾಗಿಸುವುದರ ಜತೆಗೆ ಬರೋಬ್ಬರಿ 650 ಕೋಟಿ ರೂ.ಗಳನ್ನು 55 ಲಕ್ಷ ಸದಸ್ಯರ ಖಾತೆಗಳಿಗೆ ಏಕಕಾಲದಲ್ಲಿ ಜಮೆ ಮಾಡುವ ಮೂಲಕ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿಯೋಜನೆ ಬಿ.ಸಿ.ಟ್ರಸ್ಟ್ ಹೊಸ ದಾಖಲೆ ನಿರ್ಮಿಸಿದೆ.
ಅಧ್ಯಕ್ಷತೆ ವಹಿಸಿ ಮಾತನಾಡಿದ ಧರ್ಮಸ್ಥಳದ ಧರ್ಮಾಧಿಕಾರಿ ಮತ್ತು ರಾಜ್ಯಸಭಾ ಸದಸ್ಯರಾದ ಡಾ||ಡಿ. ವೀರೇಂದ್ರಹೆಗ್ಗಡೆರವರು ,ಮೊಸರು ಕಡೆದಾಗ ಬೆಣ್ಣೆ ಬರುವ ರೀತಿಯಲ್ಲಿ ಪುಟ್ಟ ಪುಟ್ಟ ಉಳಿತಾಯ ಮಾಡಿದ ಸದಸ್ಯರಿಗೆ ಲಾಭಾಂಶ ಬಂದಿದೆ.ಆರ್ಥಿಕ ಸಬಲೀಕರಣ, ಆರ್ಥಿಕ ಶಿಸ್ತು ಮೂಲಕ ನೀವೆಲ್ಲ ಗೃಹಲಕ್ಷ್ಮೀಯರೇ ಆಗಿದ್ದೀರಿ.ಪ್ರತೀ ಹೆಣ್ಣುಮಗಳು ಇಂದು ಮನೆಯ ಅರ್ಥ ಸಚಿವೆಯಾಗಿ ಕಂಗೊಳಿಸುತ್ತಿದ್ದಾಳೆ. ಹೆಣ್ಮಕ್ಕಳ ನಾಯಕತ್ವ ಹೇಗಿದೆ ಎಂಬುದನ್ನು ತಿಳಿಯಬೇಕಾದರೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ನೋಡಬೇಕು ಎಂಬ ಮಾತು ರೂಢಿಗೆ ಬಂದಿದೆ ಎಂದು ಹೇಳಿದರು.
1982ರಲ್ಲಿ ಆರಂಭ ಗೊಂಡು 42 ವರ್ಷಗಳಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳ ಹಳ್ಳಿಗಳನ್ನೂ ಮುಟ್ಟಿರುವ ಯೋಜನೆಯು 6 ಲಕ್ಷ ಬಲಿಷ್ಠ ಸ್ವಸಹಾಯ ಗುಂಪುಗಳನ್ನು ಕಟ್ಟಿ ಬೆಳೆಸಿದ್ದಲ್ಲದೆ, 24,500 ಕೋಟಿ ರೂ. ಸಾಲವನ್ನು ವಿವಿಧ ರಾಷ್ಟ್ರೀಕೃತ ಬ್ಯಾಂಕ್ ಗಳಿಂದ ಪಡೆದು ಸದಸ್ಯರಿಗೆ ನೀಡುವಲ್ಲಿ ಪ್ರತಿ ಖಾತ್ರಿದಾರನಾಗಿ ನಿಂತಿದೆ ಎಂದು ಡಾ||ಡಿ.ವೀರೇಂದ್ರಹೆಗ್ಗಡೆರವರು ತಿಳಿಸಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಅನಿಲ್ ಕುಮಾರ್.ಎಸ್.ಎಸ್. ಮಾತನಾಡುತ್ತಾ, ಗ್ರಾಮೀಣ ಆರ್ಥಿಕತೆಯ ಸಬಲೀಕರಣ ಹಾದಿಯಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹೆಮ್ಮರವಾಗಿ ಬೆಳೆದಿದೆ.ಡಾ.ಡಿ.ವೀರೇಂದ್ರ ಹೆಗ್ಗಡೆ ಅವರು ಯೋಜನೆಗೆ ಪ್ರತಿ ವರ್ಷ ದಾನ ನೀಡುತ್ತಾರೆ.6 ಬ್ಯಾಂಕ್ ಗಳು ಯೋಜನೆ ಯೊಂದಿಗೆ ಸಹಭಾಗಿತ್ವ ಹೊಂದಿದ್ದು, ಅವೆಲ್ಲಕ್ಕೂ ಯೋಜನೆಯು ಬ್ಯಾಂಕಿoಗ್ ಪ್ರತಿನಿಧಿ (ಬ್ಯಾಂಕಿoಗ್ ಕರೆಸ್ಪಾಂಡೆoಟ್- ಬಿ.ಸಿ.) ಯಾಗಿ ಕೆಲಸ ಮಾಡುತ್ತಿದೆ. ಸದಸ್ಯರಿಗೆ ಬ್ಯಾಂಕ್‌ಗಳು ಸುಲಭವಾಗಿ ಸಾಲ ನೀಡುತ್ತಿದ್ದರೆ, ಅದಕ್ಕೆ ಯೋಜನೆ ಗ್ಯಾರಂಟಿಯಾಗಿ ನಿಂತಿರುವುದು ಕಾರಣ.ಮೊಬೈಲ್‌ನ ಸಂದೇಶವನ್ನು ಸ್ವತಃ ಯೋಜನೆಯ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಅನಿಲ್ ಕುಮಾರ್ ಎಸ್.ಎಸ್. ವೇದಿಕೆಯಿಂದಲೇ ಘೋಷಿಸಿದರಲ್ಲದೆ, ಡಿಜಿಟಲ್ ಇಂಡಿಯಾದ ಕ್ರಾಂತಿಕಾರಿ ಬೆಳವಣಿಗೆಗೆ ಇದು ಸಾಕ್ಷಿ ಎಂದರು.
ವೇದಿಕೆಯಲ್ಲಿ ಜ್ಞಾನ ವಿಕಾಸ ಕಾರ್ಯಕ್ರಮದ ಅಧ್ಯಕ್ಷೆ ಶ್ರೀಮತಿ ಹೇಮಾವತಿಹೆಗ್ಗಡೆ,ಸಂಸದ ಬ್ರಿಜೇಶ್ ಚೌಟ,ಶಾಸಕ ಹರೀಶ್ ಪೂಂಜಾ,ವಿಧಾನಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್ ಮುಂತಾದವರು ಉಪಸ್ಥಿತರಿದ್ದರು.
————--ವರದಿ:ಕೆ.ಬಿ.ಚಂದ್ರಚೂಡ