ಕೆ.ಆರ್.ಪೇಟೆ-ಮಕ್ಕಳ ವ್ಯಕ್ತಿತ್ವವನ್ನು ವಿಕಸಿತಗೊಳಿಸಿ ಲೋಕಜ್ಞಾನ ಹಾಗೂ ವ್ಯವಹಾರ ಜಾಣ್ಮೆಯನ್ನು ತುಂಬಲು ಮಕ್ಕಳ ಸಂತೆ ಕಾರ್ಯಕ್ರಮ ವರದಾನವಾಗಿದೆ ಎಂದು ಕೆ.ಆರ್.ಪೇಟೆ ಮಾಜಿ ಶಾಸಕ ಡಾ.ಕೆ.ಬಿ.ಚಂದ್ರಶೇಖರ್ ಹೇಳಿದರು.
ಅವರು ಪಟ್ಟಣದಲ್ಲಿ ಬಿಜಿಎಸ್ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಮಕ್ಕಳ ಸಂತೆಗೆ ಚಾಲನೆ ನೀಡಿ ಮಾತನಾಡಿದರು.
ಮಕ್ಕಳಿಗೆ ಬಾಲ್ಯದಿಂದಲೇ ಶಿಕ್ಷಣದ ಜೊತೆಗೆ ವ್ಯವಹಾರ ಜಾಣ್ಮೆಯನ್ನು ಕಲಿಸಿಕೊಡಲು ಮಕ್ಕಳ ಸಂತೆ ಕಾರ್ಯಕ್ರಮ ಅಗತ್ಯವಾಗಿ ಬೇಕಾಗಿರುವ ಕಾರ್ಯಕ್ರಮವಾಗಿದೆ.ಸಂತೆಗೆ ತಾವು ಮಾರಾಟ ಮಾಡಲು ತಂದಿರುವ ವಸ್ತುಗಳ ಲಾಭ ನಷ್ಟವನ್ನು ಲೆಕ್ಕಾಚಾರ ಮಾಡಿ ಪೈಪೋಟಿಯೊಂದಿಗೆ ವ್ಯಾಪಾರ ಮಾಡುವ ಮಕ್ಕಳು ತಾವು ವ್ಯಾಪಾರ ಮಾಡಿದ ವಸ್ತುಗಳಿಂದ ಬಂದಿರುವ ಲಾಭ ವನ್ನು ಲೆಕ್ಕಾಚಾರ ಮಾಡಿ ಲಾಭವಾಗಿದ್ದರೆ, ಇಷ್ಟು ಲಾಭವಾಯಿತು ಎಂದು ಸಂಭ್ರಮಿಸಿದರೆ, ಮಾರಾಟದಲ್ಲಿ ನಷ್ಟವಾದರೆ ಮತ್ತೆ ವ್ಯಾಪಾರ ದಲ್ಲಿ ಹಣ ಕಳೆದುಕೊಳ್ಳದಂತೆ ಎಚ್ಚರ ವಹಿಸುತ್ತಾರೆ.
ಇಂದಿನ ಸಂತೆಯಲ್ಲಿ ಪಾಲ್ಗೊಂಡಿರುವ ಎಲ್ಲಾ ಮಕ್ಕಳು ವ್ಯಾಪಾರದಲ್ಲಿ ಲಾಭ ಗಳಿಸಿರುವುದು ಸಂತೋಷ ತಂದಿದೆ.ಪೋಷಕರು ಮಕ್ಕಳ ಸಂತೆಗೆ ಬೆಂಬಲವಾಗಿ ನಿಂತು ಮಕ್ಕಳ ಸಂತೆಯು ಯಶಸ್ವಿಯಾಗಲು ಸಹಕರಿಸಿದ್ದಾರೆ. ಮಕ್ಕಳು ಗ್ರಾಹಕರನ್ನು ಆಕರ್ಷಿಸುವ ರೀತಿ, ಚೌಕಾಶಿ ಮಾಡಿ ವ್ಯಾಪಾರ ಮಾಡುವ ಶೈಲಿಯು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ ಎಂದು ಚಂದ್ರಶೇಖರ್ ಅಭಿಮಾನದಿಂದ ಹೇಳಿದರು.
ಬೆಡದಹಳ್ಳಿ ಪಂಚಭೂತೇಶ್ವರ ಮಠದ ಶ್ರೀ ರುದ್ರಮುನಿ ಸ್ವಾಮೀಜಿ ಮಾತನಾಡಿ,ಗುಣಮಟ್ಟದ ಶಿಕ್ಷಣಕ್ಕೆ ತಾಲೂಕಿನಲ್ಲಿ ಹೆಸರುಗಳಿಸಿರುವ ಬಿಜಿಎಸ್ ಶಿಕ್ಷಣ ಸಂಸ್ಥೆಯು ಮಕ್ಕಳ ವ್ಯಕ್ತಿತ್ವದ ವಿಕಸನಕ್ಕೆ ಪೂರಕವಾದ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಿ ಭವಿಷ್ಯದ ನಾಗರೀಕರನ್ನು ಸಜ್ಜುಗೊಳಿಸುತ್ತಿದೆ. ಮಕ್ಕಳ ಸಂತೆಯಲ್ಲಿ ಮಕ್ಕಳು ಉತ್ಸಾಹದಿಂದ ಭಾಗವಹಿಸಿ ವ್ಯಾಪಾರ, ವ್ಯವಹಾರ ನಡೆಸಿ ತಮ್ಮಲ್ಲಿನ ಲೋಕಜ್ಞಾನವನ್ನು ವಿಸ್ತರಿಸಿಕೊಂಡಿದ್ದಾರೆ. ಮಕ್ಕಳನ್ನು ಸಾಂಸ್ಕೃತಿಕವಾಗಿ ಸಜ್ಜುಗೊಳಿಸಲು ಇಂತಹ ಕಾರ್ಯಕ್ರಮಗಳು ಅಗತ್ಯವಾಗಿ ಬೇಕಾಗಿವೆ ಎಂದು ಹೇಳಿದರು.
ಆದಿಚುಂಚನಗಿರಿಯ ಹೇಮಗಿರಿ ಶಾಖಾ ಮಠದ ಕಾರ್ಯದರ್ಶಿಗಳಾದ ಡಾ.ಜೆ.ಎನ್.ರಾಮಕೃಷ್ಣೇಗೌಡ, ಸಮಾಜ ಸೇವಕ ಹಾಗೂ ರಾಜ್ಯ ಆರ್.ಟಿ.ಓ ಅಧಿಕಾರಿಗಳ ಸಂಘದ ರಾಜ್ಯ ಅಧ್ಯಕ್ಷ ಮಲ್ಲಿಕಾರ್ಜುನ್. ಬೆಡದಹಳ್ಳಿ ಶ್ರೀ ಪಂಚಭೂತೇಶ್ವರ ಮಠದ ಶ್ರೀಗಳಾದ ಶ್ರೀ ರುದ್ರಮುನಿ ಸ್ವಾಮೀಜಿ, ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷ ಬೇಲದಕೆರೆ ಪಾಪೇಗೌಡ, ಪಿಎಲ್ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಬಿ.ನಂಜಪ್ಪ, ಪುರಸಭೆ ಸದಸ್ಯ ಕೆ.ಆರ್.ರವೀಂದ್ರಬಾಬು, ಬಲ್ಲೇನಹಳ್ಳಿ ನಂದೀಶ್, ಕೆಬಿಸಿ ಮಂಜುನಾಥ್, ರೈತ ಮುಖಂಡ ಮರುವನಹಳ್ಳಿ ಶಂಕರ್, ಚಟ್ಟಂಗೆರೆ ಬಿ.ನಾಗೇಶ್, ಎಂ.ಕೆ.ಹರಿಚರಣತಿಲಕ್, ಗ್ರಾ.ಪಂ.ಸದಸ್ಯ ಅಗ್ರಹಾರಬಾಚಹಳ್ಳಿ ಶ್ರೀನಿವಾಸ್, ಗಂಜಿಗೆರೆ ಮಹೇಶ್, ಶ್ರೀ ಕೋಟೆ ಭೈರವೇಶ್ವರ ಪತ್ತಿನ ಸಹಕಾರ ಸಂಘದ ಅಧ್ಯಕ್ಷೆ ಹೊಸಹೊಳಲು ಮಂಜುಳಾಚನ್ನಕೇಶವ, ಪ್ರಾಂಶುಪಾಲ ಪ್ರಸಾದೇಗೌಡ, ರಾಮಚಂದ್ರು, ಸೇರಿದಂತೆ ಮಕ್ಕಳ ನೂರಾರು ಪೋಷಕರು ಮಕ್ಕಳ ಸಂತೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
———-——-ಶ್ರೀನಿವಾಸ್ ಕೆ ಆರ್ ಪೇಟೆ