ತುಮಕೂರು:ವಿದ್ಯೋದಯ ಕಾನೂನು ಕಾಲೇಜಿನಲ್ಲಿ 2024-25 ನೇ ಸಾಲಿನ ಸಾಂಸ್ಕೃತಿಕ ಕ್ರೀಡೆ, ಎನ್.ಎಸ್.ಎಸ್. ಘಟಕ, ಕಾನೂನು ಸೇವಾ ಕೇಂದ್ರ, ಯೂತ್ರೆಡ್ಕ್ರಾಸ್ ಹಾಗೂ ರೆಡ್ರಿಬ್ಬನ್ ಕ್ಲಬ್ ಮತ್ತು ಇತರೆ ಚಟುವಟಿಕೆಗಳು ಮತ್ತು ಶ್ರೀ ಸ್ವಾಮಿ ವಿವೇಕಾನಂದ
ಅಧ್ಯಯನ ಕೇಂದ್ರವನ್ನು ಶ್ರೀ ವಿರೇಶಾನಂದ ಮಹಾಸ್ವಾಮಿಗಳು ಉದ್ಘಾಟಿಸಿ ಆಶೀರ್ವಚನ ನೀಡಿದರು.
ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಸ್ವಾಮೀಜಿಗಳು, ಪ್ರಸ್ತುತ ವಿದ್ಯಾರ್ಥಿಗಳಿಗೆ ಸಂಸ್ಕಾರಯುತ ಶಿಕ್ಷಣ ದೊರಕದೆ ಇರುವುದು ದೇಶದ ಅಭಿವೃದ್ಧಿಗೆ ತೊಡಕಾಗುತ್ತದೆ.ಈ ಎಲ್ಲಾ ಸಮಸ್ಯೆಗಳಿಗೆ ಸ್ವಾಮಿ ವಿವೇಕಾನಂದರ ತತ್ವ ಹಾಗೂ ಸಂದೇಶಗಳನ್ನು ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ತಿಳಿಸುವ ಮೂಲಕ ಉತ್ತಮ ಸಂಸ್ಕಾರ ಹಾಗೂ ಮೌಲ್ಯಯುತ ಶಿಕ್ಷಣ ನೀಡಲು ಶಿಕ್ಷಣ ಸಂಸ್ಥೆಗಳು ಗಮನಹ ರಿಸಬೇಕಾಗಿದೆ.ಆದ್ದರಿಂದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ದೆಸೆಯಲ್ಲಿ ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಿ ಉತ್ತಮ ನಾಯಕತ್ವ ಗುಣ ಸಾಮಾಜಿಕ ಜವಾಬ್ದಾರಿ, ಬಡವರು ಹಾಗೂ ದೀನದಲಿತರ ಕಷ್ಟಗಳನ್ನು ಅರಿಯುವ ಮನಸ್ಥಿತಿ ವಿದ್ಯಾರ್ಥಿಗಳಲ್ಲಿ ಮೂಡಿಸುವುದು ಇಂದಿನ ಶಿಕ್ಷಕರ ಕರ್ತವ್ಯವಾಗಿದೆ ಎಂದು ತಿಳಿಸಿದರು.
ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ತಮ್ಮ ಹಿಂಜರಿಕೆ ಮತ್ತು ತಮ್ಮ ಕಷ್ಟಗಳನ್ನು ಯಾವಾಗಲೂ ಚಿಂತಿಸುವುದನ್ನು ಬಿಟ್ಟು ಕಷ್ಟದಲ್ಲೇ ಬೆಳೆದು ಸಾಧನೆಗೈದ ಸರ್.ಎಂ. ವಿಶ್ವೇಶ್ವರಯ್ಯನವರ ರೀತಿಯ ವ್ಯಕ್ತಿಗಳ ಜೀವನ ಚರಿತ್ರೆಯನ್ನು ತಿಳಿಯುವ ಮೂಲಕ ಸಾಧನೆ ಮಾಡಬೇಕೆಂದು ವಿದ್ಯಾರ್ಥಿಗಳಿಗೆ ತಿಳಿಸಿದರು.
ಕಾಲೇಜಿನ ಮ್ಯಾನೇಜಿಂಗ್ ಟ್ರಸ್ಟಿಗಳಾದ ಹೆಚ್.ಎಸ್.ರಾಜುರವರು,ರಾಮಕೃಷ್ಣ ಆಶ್ರಮದ ಬಗ್ಗೆ ಒಡನಾಟವನ್ನು ವಿದ್ಯಾರ್ಥಿಗಳ ಜೊತೆಗೆ ಹಂಚಿಕೊoಡರು.
ಕಳೆದ ಸಾಲಿನಲ್ಲಿ ಅತಿಹೆಚ್ಚು ಅಂಕಗಳಿಸಿದ ಮತ್ತು ಕ್ರೀಡೆ ಹಾಗೂ ಎನ್.ಎಸ್.ಎಸ್.ನಲ್ಲಿ ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ಸಿ.ಇ.ಓ.ಪ್ರೊ.ಕೆ.ಚಂದ್ರಣ್ಣ ಅಧ್ಯಕ್ಷತೆ ವಹಿಸಿದ್ದರು,ವೇದಿಕೆಯಲ್ಲಿ ಪ್ರಾಂಶುಪಾಲರಾದ ಶ್ರೀಮತಿ ಶಮಾಸೈಯಿದಿ,ಐಕ್ಯೂಎಸಿ ಸಂಚಾಲಕರಾದ ಕುಮಾರ್.ಎನ್.ಹೆಚ್. ಹಾಗೂ ಬೋಧಕ ಮತ್ತು ಬೋಧಕೇತರ ವರ್ಗದವರು, ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
————–ಚಂದ್ರಚೂಡ