ಕೊರಟಗೆರೆ-ದೈವವನ್ನು ಪ್ರಸನ್ನಗೊಳಿಸಿಕೊಳ್ಳಲು ಭಕ್ತಿಯೊಂದೇ ಸಮರ್ಥವಾದುದು, ಆ ಭಗವಂತನು ಗಾಢವಾದ ಭಕ್ತಿಗೆ ಒಲಿದಂತೆ ದಾನಗಳಿಗೆ,ಜಪತಪಗಳಿಗೆ,ಯಜ್ಞ ಯಾಗಗಳಿಗೆ, ನಿಯಮ ನಿಷ್ಟೆಗಳಿಗೆ ಒಲಿಯನು.ಭಕ್ತಿಯೊಂದೇ ಸ್ವಾಮಿಯನ್ನು ಪಡೆಯುವ ಸಾಧನ ಎಂದು ಕೈವಾರ ಧರ್ಮಾಧಿಕಾರಿ ಡಾ.ಎಂ.ಆರ್.ಜಯರಾಮ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಅವರು ಕೊರಟಗೆರೆ ತಾಲೂಕಿನ ಗೌರಗಾನಹಳ್ಳಿ ಬಳಿಯ ರಂಗನಾಥಸ್ವಾಮಿ ಬೆಟ್ಟದ ಪೊಡಗಿರಿ ರಂಗನಾಥಸ್ವಾಮಿ ದೇವಾಲಯದಲ್ಲಿ ತಿರುಮಲೇಶ್ ಮತ್ತು ಅವರ ಕುಟುಂಬ ಏರ್ಪಡಿಸಿದ್ದ ಸದ್ಗುರು ಕೈವಾರ ಶ್ರೀ ಯೋಗಿನಾರೇಯಣ ತಾತಯ್ಯನವರ ಗುರುಪೊಜೆ ಹಾಗೂ ಆತ್ಮಭೋಧಾಮೃತ ಕಾರ್ಯಕ್ರದಲ್ಲಿ ಪ್ರವಚನ ನೀಡಿ ಮಾತನಾಡಿದರು.
ಭಕ್ತ ಹಾಗೂ ಭಗವಂತನ ನಡುವೆ ಇರುವ ಸೇತುವೆಯೇ ಭಕ್ತಿ. ಕೈವಾರ ಶ್ರೀ ಯೋಗಿನಾರೇಯಣ ತಾತಯ್ಯನವರು ಭಕ್ತಿಯ ದಾಸಪಂಥವನ್ನು ಪ್ರತಿಪಾದಿಸಿದರು.ಪ್ರತಿಯೊಬ್ಬ ಮಾನವರ ಆಚಾರ, ವಿಚಾರಗಳು ಬೇರೆ ಬೇರೆ ಯಾಗಿರುತ್ತದೆ.ಆದರೆ ಭಗವಂತನಿಗೆ ಜಾತಿ ಯಾವುದಾದರೇನು, ಆಚಾರವಿವಾರಗಳು ಹೇಗಿದ್ದರೇನು, ಅವೆಲ್ಲ ಈ ಲೋಕಕ್ಕೆ ಮಾತ್ರವೇ ಹೊರತು ಭಗವಂತನಿಗೆ ಅವೆಲ್ಲಾ ಬೇಕಿಲ್ಲ.ವ್ಯಾಧ, ವಿದುರ, ಗುಹ, ಶಬರಿ, ಬೇಡರ ಕಣ್ಣಪ್ಪ ಸೇರಿದಂತೆ ಇನ್ನಿತರ ಭಕ್ತರಿಗೆ ಭಗವಂತನು ಒಲಿದಿದ್ದು ಭಕ್ತಿಯಿಂದಲೇ ಹೊರತು ಜಾತಿಯಿಂದಲ್ಲ ಎಂದು ತಿಳಿಸಿದರು.
ಶ್ರೀ ಯೋಗಿನಾರೇಯಣ ತಾತಯ್ಯನವರ ಅಭಿಪ್ರಾಯದಲ್ಲಿ ಹರಿನಾಮ ಕೀರ್ತನೆಗಳನ್ನು ಭಜಿಸುವವನು ಕೂಡ ಸಾಧಕಯೋಗಿಯೇ ಆಗಿದ್ದಾನೆ.ಏಕೆಂದರೆ ಯೋಗ ಮತ್ತು ಭಕ್ತಿಯ ಗುರಿ ಭಗವಂತನನ್ನು ಸೇರುವುದೇ ಆಗಿದೆ.ಶ್ರೀ ಯೋಗಿನಾರೇಯಣ ತಾತಯ್ಯನವರು ಯೋಗ ಮತ್ತು ಹರಿಭಕ್ತಿಗಳನ್ನು ಸಮನ್ವಯ ಮಾಡಿದ್ದಾರೆ.ಭಕ್ತಿಗೆ ಯಾವುದೇ ನಿರ್ಬಂಧವಿಲ್ಲ, ಎಂಬುದನ್ನು ತಾತಯ್ಯನವರು ಭೋದಿಸಿದ್ದಾರೆ.ಯಾವ ಜಾತಿಯವರೇ ಆಗಿದ್ದರೂ ಯಾವ ನೀತಿಯನ್ನೇ ಅನುಸರಿಸಿದವನಾಗಿದ್ದರೂ ಹರಿಭಕ್ತಿ ಇದ್ದವನಾದರೆ ಅವನೇ ಅಗ್ರಜನು ಎಂದಿದ್ದಾರೆ.
ಅಗ್ರಜ ಎಂದರೆ ಮಾನವರ ಚಾತುವಣ್ರ್ಯ ಸೃಷ್ಠಿಯಲ್ಲಿ ಮೊದಲು ಹುಟ್ಟಿದವನೆಂದು ಅರ್ಥ.ಅಗ್ರಜನೆಂದರೆ ವಿಪ್ರ, ಬ್ರಾಹ್ಮಣ ಎಂಬುದು ರೂಢಾರ್ಥ.ಇಲ್ಲಿ ತಾತಯ್ಯನವರು ಹೇಳುತ್ತಿರುವ ಸತ್ಯವೆನೆಂದರೆ ಹರಿಭಕ್ತಿಯು ಯಾವುದೇ ಜಾತಿಗಳಿಗೆ ಅಂಟಿಕೊಂಡಿರುವುದಿಲ್ಲ. ಯಾವುದೇ ಜಾತಿಯಲ್ಲಿ ಹುಟ್ಟಿದರೂ ಹರಿಭಕ್ತಿಯನ್ನು ಮಾಡುತ್ತಿರುವವನಾಗಿದ್ದರೇ ಅವನೇ ಅಗ್ರಜನು.ಭಕ್ತಿ ಮುಖ್ಯವೇ ಹೊರತು ಜಾತಿಯಲ್ಲ ಎಂದ ತಾತಯ್ಯನವರು ಭಕ್ತರಿಗೆ ಯಮದೂತರ ನರಕಭಯ ಹಾಗೂ ಹುಟ್ಟುಸಾವುಗಳನ್ನು ಭವರೋಗದ ಭಯವಿರುವುದಿಲ್ಲ. ಏಕೆಂದರೆ ಎಲ್ಲ ಭಯಗಳನ್ನು ನಿವಾರಿಸಿ ಕಾಪಾಡುವ ಭಗವಂತನಾದ ಶ್ರೀಹರಿಗೆ ಅವರು ತಮ್ಮನ್ನು ಒಪ್ಪಿಸಿಕೊಂಡಿರುತ್ತಾರೆ.ಇವರು ಬದುಕಿರುವಾಗಲೇ ಭಗವಂತನಲ್ಲಿ ಮಗ್ನವಾಗಿರುವ ಕಾರಣದಿಂದ ದೇಹತ್ಯಾಗದ ಅನಂತರ ನೇರವಾಗಿ ಕೈವಲ್ಯಮುಕ್ತಿಯನ್ನು ಪಡೆದು ಶ್ರೀಹರಿಯ ವೈಕುಂಠಪುರಕ್ಕೆ ಸೇರುತ್ತಾರೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಂಗವಾಗಿ ಶ್ರೀ ಯೋಗಿನಾರೇಯಣ ತಾತಯ್ಯನವರಿಗೆ ವಿಶೇಷ ಅಭಿಷೇಕ, ಕೈವಾರ ಕ್ಷೇತ್ರದ ಧರ್ಮಾಧಿಕಾರಿ ಡಾ.ಎಂ.ಆರ್.ಜಯರಾಮ್ ರವರಿಂದ ಆತ್ಮಭೋದಾಮೃತ ಪ್ರವಚನ, ಸದ್ಗುರು ತಾತಯ್ಯನವರಿಗೆ ಅಷ್ಠಾವಧಾನ ಸೇವೆ ಹಾಗೂ ಮಹಾಮಂಗಳಾರತಿ ನಂತರ ಪ್ರಸಾದ ವಿನಿಯೋಗ ಮಾಡಲಾಯಿತು.
ಈ ಸಂದರ್ಭದಲ್ಲಿ ಕಾರ್ಯಕ್ರಮದ ಆಯೋಜಕರಾದ ಎನ್.ಶಾ.ರೂಪಾ, ತಿರುಮಲೇಶ್, ಮಾಜಿ ಜಿ.ಪಂ.ಅಧ್ಯಕ್ಷ ಜಾಲಿಗಿರಿ ಕೃಷ್ಣಮೂರ್ತಿ, ಜಿಲ್ಲಾ ಬಲಿಜ ಸಂಘದ ಅಧ್ಯಕ್ಷ ಹಾಗೂ ಆಡಿಟರ್ ಅಂಜಿನಪ್ಪ, ಪದಾದಿಕಾರಿಗಳಾದ ಜಯರಾಮ್, ಮಹಿಳಾ ಸಂಘದ ಅಧ್ಯಕ್ಷೆ ಗೀತಮ್ಮ, ತಾಲೂಕು ಬಲಿಜ ಸಂಘದ ಅಧ್ಯಕ್ಷ ಎನ್,ಪದ್ಮನಾಭ್, ಖಜಾಂಚಿ ಕೊಡ್ಲಹಳ್ಳಿ ವೆಂಕಟೇಶ್, ಪದಾ ಧಿಕಾರಿಗಳಾದ ದೇವರಾಜು, ಸಂಜಯ್, ಶ್ರೀನಿವಾಸ್, ರೋಹಿತ್ ,ವೆಂಕಟರಾಜು, ಪ.ಪಂ.ಸದಸ್ಯೆ ಮಂಜುಳಾಗೋವಿಂದರಾಜು, ವೆಂಕಟೇಶಪ್ಪ, ಎಲ್,ರಾಜಣ್ಣ ಸೇರಿದಂತೆ ಗೌರಗಾನಹಳ್ಳಿ ಗ್ರಾಮಸ್ಥರು ಬೆಂಗಳೂರು, ತುಮಕೂರು, ಚಿಂತಾಮಣಿ, ಬಾಗೇಪಲ್ಲಿ ಗೌರಿಬಿದನೂರಿನ ಭಕ್ತರು ಹಾಜರಿದ್ದರು.
—-—ಶ್ರೀನಿವಾಸ್ ಕೊರಟಗೆರೆ