ದೇವಲಾಪುರ:ಆಧುನಿಕ ಯುಗದಲ್ಲಿ ಗೋವಿನಿಂದ ದೂರವಾಗಿರುವ ನಾವು ಆಸ್ಪತ್ರೆಗೆ ಹತ್ತಿರವಾಗಬೇಕಾದ ಅನಿವಾರ್ಯ ಎದುರಾಗಿದೆ. ಮನೆಯಲ್ಲಿ ಒಂದು ದೇಶಿ ಹಸುವಿದ್ದರೆ ಒಬ್ಬ ವೈದ್ಯನಿದ್ದಂತೆ. ಗೋವಿನ ಉತ್ಪನ್ನಗಳಾದ ಹಾಲು, ಮೊಸರು, ಬೆಣ್ಣೆ,ತುಪ್ಪ,ಸೆಗಣಿ,ಗೋ ಮೂತ್ರ ಸೇರಿದಂತೆ ಪ್ರತಿಯೊಂದು ಉತ್ಪನ್ನಗಳು ಔಷಧೀಯ ಆಗರ ಎಂದು ಲಕ್ಷ್ಮಣ್ ಜೀ ತಿಳಿಸಿದರು.
ಕಾರ್ತಿಕ ಮಾಸದ ಅಂಗವಾಗಿ ಮೂರನೇ ಸೋಮವಾರದಂದು ದೇವಲಾಪುರ ಹೋಬಳಿಯ ಕುಂಟಾನಕೊಪ್ಪಲು ಗ್ರಾಮದ ಶ್ರೀ ಬಸವಣ್ಣ ದೇವರ ಸನ್ನಿದಾನದಲ್ಲಿ ಶ್ರೀ ಬಸವಣ್ಣ ಸ್ವಾಮಿ ಸೇವಾ ಸಮಿತಿ ಮತ್ತು ಸ್ವಾಸ್ಥ್ಯ ಜೀವನಮಾರ್ಗ ಯೋಗ ಪ್ರತಿಷ್ಠಾನ ಟ್ರಸ್ಟ್ ನ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಸಹಸ್ರ ದೀಪೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಗೋ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ಪ್ರತಿಯೊಂದು ಮನೆಯಲ್ಲೂ ದೇಶಿ ಹಸುಗಳನ್ನು ಸಾಕಿ ಗೋವಿನ ಜೊತೆಗೆ ಒಡನಾಟ ಇರಿಸಿಕೊಂಡರೆ ಕ್ಯಾನ್ಸರ್ ನಂತಹ ಮಾರಣಾಂತಿಕ ರೋಗಗಳು ಬಾದಿಸಲಾರವು.ಹಾಗಾಗಿ ಪ್ರತಿಯೊಂದು ಮನೆಯಲ್ಲೂ ಗೋವುಗಳನ್ನು ಸಾಕುವ ಮೂಲಕ ಗೋ ಸಂತತಿಯನ್ನು ಉಳಿಸೋಣ ಬೆಳೆಸೋಣ ಎಂದು ಕರೆ ನೀಡಿದರು.
ಸ್ವಾಸ್ಥ್ಯ ಭಜನಾ ಮಂಡಳಿಯ ಮುಖ್ಯಸ್ಥರಾದ ನಿವೃತ್ತ ಪ್ರಾಂಶುಪಾಲರು ಯಲಾದಹಳ್ಳಿಯ ಬಿ.ನಾಗರಾಜು ರವರು ಜ್ಯೋತಿ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ,ಜ್ಯೋತಿ ಜ್ಞಾನದ ಸಂಕೇತ.ಪ್ರತಿ ಮನೆ ಮನದಲ್ಲೂ ಜ್ಞಾನ ಜ್ಯೋತಿ ಬೆಳಗಿ ಅಜ್ಞಾನದ ಕತ್ತಲು ಕಳೆಯ ಬೇಕೆಂಬುದೇ ದೀಪೋತ್ಸವ ಆಚರಣೆಯ ಉದ್ದೇಶ. ದೀಪ ಬೆಳಗುವುದರಿಂದ ನಮ್ಮಲ್ಲಿ ಆಧ್ಯಾತ್ಮಿಕ ಚಿಂತನೆ ಮೊಳಕೆ ಹೊಡೆದು ಅಂದಕಾರ ದೂರವಾಗುವುದರ ಜೊತೆಗೆ ವಾತಾವರಣ ಶುದ್ಧಿಯಾಗಿ ರೋಗ ಕಾರಕಗಳು ನಿವಾರಣೆಯಾಗುತ್ತವೆ ಎಂದು ತಿಳಿಸಿ ಮತ್ತೋರ್ವ ಭಜನಾ ಮಂಡಳಿ ಸದಸ್ಯರಾದ ತಿರುಮಲೇಗೌಡರ ಜೊತೆಗೂಡಿ ಕೆಲವು ಭಜನಾವಳಿಗಳನ್ನು ಹಾಡಿದರು.
ಶ್ರೀ ಬಸವಣ್ಣ ದೇವಸ್ಥಾನದ ಅರ್ಚಕರಾದ ರಾಜು, ಶನೇಶ್ಚರ ದೇವಸ್ಥಾನದ ಅರ್ಚಕರಾದ ಸಣ್ಣಮರಿಯಪ್ಪ, ದೇವಸ್ಥಾನ ಸೇವಾ ಸಮಿತಿಯ ಅಧ್ಯಕ್ಷರಾದ ಗುರು ಪ್ರಸಾದ್, ಕಾರ್ಯದರ್ಶಿ ರಾಮಚಂದ್ರು ಸೇರಿದಂತೆ ಬೆಟ್ಟೇಗೌಡ, ನಿಂಗೇಗೌಡ, ನಂಜೇಗೌಡ, ಶಿವಕುಮಾರ್ ಹಾಗೂ ಇನ್ನೂ ಹಲವರು ಉಪಸ್ಥಿತರಿದ್ದರು.
—–——ರವಿ ಬಿ ಹೆಚ್ ನಾಗಮಂಗಲ