ಹಳೇಬೀಡು-ಸರಕಾರಗಳು ‘ಜಾತಿ-ಧರ್ಮ’ದ ಆಧಾರದಲ್ಲಿ ‘ಸವಲತ್ತು’ ಗಳ ನೀಡುವುದ ನಿಲ್ಲಿಸಿ ‘ಸಮ-ಸಮಾಜ’ನಿರ್ಮಾಣಕ್ಕೆ ಒತ್ತು ನೀಡ ಬೇಕು-ಪುಷ್ಪಗಿರಿ ಸ್ವಾಮೀಜಿ ಆಗ್ರಹ

ಹಳೇಬೀಡು-ಜಾತೀರಹಿತ ಸಮಸಮಾಜ ನಿರ್ಮಾಣ ಮಾಡುವುದು ನಮ್ಮ ಗುರಿ ಎಂದು ಹೇಳುವ ಜನಪ್ರತಿನಿಧಿಗಳು ಜಾತಿ ಹೆಸರಿನಲ್ಲಿ ರಾಜಕಾರಣ ಮಾಡುವ ಮೂಲಕ ಸದೃಢ ಸಮಾಜದ ತಳಪಾಯಕ್ಕೆ ಕೊಡಲಿ ಪೆಟ್ಟು ನೀಡುತ್ತಿದ್ದಾರೆಂದು ಪುಷ್ಪಗಿರಿ ಮಹಾಸಂಸ್ಥಾನದ ಪರಮ ಪೂಜ್ಯ ಶ್ರೀ ಶ್ರೀ ಸೋಮಶೇಖರ ಶಿವಾಚಾರ್ಯ ಮಹಾಸ್ವಾಮೀಜಿಗಳು ಬೇಸರ ಹೊರಹಾಕಿದರು.

ಎಸ್‌.ಜಿ.ಆರ್ ಶಿಕ್ಷಣ ಸಂಸ್ಥೆಯಲ್ಲಿ ಅಖಿಲ ಭಾರತ ವಚನ ಸಾಹಿತ್ಯ ಪರಿಷತ್ ಹಾಗು ಕದಳಿ ಮಹಿಳಾ ವೇದಿಕೆ ಇವರ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾಗಿದ್ದ ‘ಕನ್ನಡದಲ್ಲಿ ವಚನಗಳ ಶ್ರೇಷ್ಠತೆ ಮತ್ತು ಚನ್ನ ಬಸವಣ್ಣನವರ ಜಯಂತಿ ಕಾರ್ಯಕ್ರಮ’ವನ್ನು ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು.

ಸರ್ಕಾರದ ಯೋಜನೆಗಳನ್ನು ಜಾತಿ ಧರ್ಮದಲ್ಲಿ ಆಧಾರದಲ್ಲಿ ನೀಡುವ ಮೂಲಕ ಸರಕಾರಗಳು ಸಮಾಜವನ್ನು ಒಡೆಯುವ ಕೆಲಸವನ್ನು ಅಂದಿಗೂ,ಇಂದಿಗೂ ಮಾಡಿಕೊಂಡು ಬರುತ್ತಿವೆ.ಇದು ನಿಂತಾಗ ಮಾತ್ರ ಕಾಯಕ ಯೋಗಿ ಬಸವಣ್ಣನವರ ಸಮ-ಸಮಾಜದ ಕನಸ್ಸು ನನಸಾಗಲು ಸಾಧ್ಯ ಎಂದರು.

ಹನ್ನೆರಡನೇ ಶತಮಾನದಲ್ಲಿ ಜನ್ಮ ತಾಳಿದ ಬಸವಾದಿ ಶರಣರು ಸಮಾಜದಲ್ಲಿ ಅಡಗಿದ ಅಸಮಾನತೆ, ಕಂದಾಚಾರ, ಮೌಡ್ಯ, ಜಾತಿವ್ಯವಸ್ಥೆಯನ್ನು ತಮ್ಮ ವಚನಗಳ ಮೂಲಕ ಬಲವಾಗಿ ಖಂಡಿಸಿ,ಸಮ ಸಮಾಜದ ನಿರ್ಮಾಣ ಮಾಡುವ ಆಶಯವನ್ನು ಹಂಚಿ, ಮಹಿಳೆಯರಿಗೆ ಅಲ್ಲಿಯವರೆಗೂ ಮರೀಚಿಕೆಯಾಗಿದ್ದ ಸ್ವಾತಂತ್ರ್ಯವನ್ನು ಕೊಡಿಸುವಲ್ಲಿ ಮಹತ್ತರ ಪಾತ್ರ ವಹಿಸುತ್ತಾರೆ.

ಅವರ ಆದರ್ಶಗಳನ್ನು ಕನಿಷ್ಠವಾದರೂ ಅಳವಡಿಸಿಕೊಂಡರೆ ಮಾತ್ರ ಇಂತಹ ಜಯಂತಿಗಳು ಅರ್ಥಪೂರ್ಣವಾಗುತ್ತವೆ ಎಂದ ಅವರು, ಆಧುನಿಕತೆ ಹೆಚ್ಚಿದಂತೆ ಸಮಾಜದಲ್ಲಿ ತಂದೆ ತಾಯಿಗಳ ಬಗ್ಗೆ, ಗುರು ಹಿರಿಯರ ಬಗ್ಗೆ ಗೌರವ ತೀವ್ರ ಇಳಿಮುಖವಾಗುತ್ತಿದೆ.ಇದರಿಂದಲೇ ಅನಾಥಾಶ್ರಮಗಳ ಸಂಸ್ಕೃತಿ ಬೆಳೆಯುತ್ತಿದೆ.ಕಾಲೇಜು ಪಠ್ಯ ವಿಷಯಗಳಲ್ಲಿ ಕೇವಲ ಉದ್ಯೋಗಕ್ಕೆ ಮಾತ್ರ ಸೀಮಿತವಾದ ಪಠ್ಯಗಳನ್ನು ಇಡದೆ ವಿದ್ಯಾರ್ಥಿಗಳಿಗೆ ಅಗತ್ಯವಾದ ಸಂಸ್ಕಾರವನ್ನು ಕಲಿಸುವ ವಿಷಯಗಳನ್ನು ಸೇರಿಸಬೇಕಿದೆ ಎಂದು ಶ್ರೀಗಳು ಸರಕಾರಕ್ಕೆ ಸಲಹೆ ನೀಡಿದರು.

ಈ ನಿಟ್ಟಿನಲ್ಲಿ ಬೇಲೂರು ತಾಲೂಕು ಶರಣ ಸಾಹಿತ್ಯ ಪರಿಷತ್ ನ ಅಧ್ಯಕ್ಷರಾದ ಹೆಬ್ಬಾಳು ಹಾಲಪ್ಪನವರು ಶರಣರ ವಿಚಾರಧಾರೆಗಳನ್ನು ಹಂಚುವ ಕಾರ್ಯಕ್ರಮಗಳನ್ನು ಶಾಲಾ ಕಾಲೇಜುಗಳಲ್ಲಿ ನಡೆಸುತ್ತಿರುವ ಸಂಗತಿ ನಿಜಕ್ಕೂ ಸಂತೋಷ ತಂದಿದೆ.ಮುಂದಿನ ದಿನಗಳಲ್ಲಿ ಅವರು ಇನ್ನೂ ಹೆಚ್ಚಿನ ಕೆಲಸವನ್ನು ಮಾಡಲಿ ಎಂದು ಹಾರೈಸಿದರು.

ಹಳೇಬೀಡು ಎಸ್. ಜಿ. ಆರ್ ಕಾಲೇಜು ಕಾರ್ಯದರ್ಶಿ ಸುರೇಶ್ ಮಾತನಾಡಿ, ಶಿಕ್ಷಣದಲ್ಲಿ ನಾವುಗಳು ಮಕ್ಕಳಿಗೆ ಸಂಸ್ಕಾರವನ್ನು ಬಿತ್ತಬೇಕೆಂಬ ಹಂಬಲದಿಂದ ಕಳೆದ ವರ್ಷದ ವಾರ್ಷಿಕೋತ್ಸವದಲ್ಲಿ ಜಾನಪದ ವೈಭವ ಎಂಬ ಕಾರ್ಯಕ್ರಮವನ್ನು ನಡೆಸಿದ್ದೆವು.ಈ ಬಾರಿ ವಚನ ವೈಭವದ ಮೂಲಕವಾಗಿ ಮಕ್ಕಳಿಗೆ ತಿಳುವಳಿಕೆ ಮೂಡಿಸಲಾಗುತ್ತಿದೆ.ವಿಶೇಷವಾಗಿ ಬೇಲೂರು ತಾಲೂಕು ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಹೆಬ್ಬಾಳು ಹಾಲಪ್ಪ ನಮ್ಮ ಶಾಲೆಯಲ್ಲಿ ಇಂತಹದ್ದೊಂದು ಕಾರ್ಯಕ್ರಮ ನಡೆಸಿ ಕೊಟ್ಟಿದ್ದು ಶ್ಲಾಘನೀಯವಾದದ್ದು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ತಾಲೂಕು ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ,ಪತ್ರಕರ್ತ ಹೆಬ್ಬಾಳು ಹಾಲಪ್ಪ ಮಾತನಾಡಿ, 12ನೇ ಶತಮಾನದ ಸಾವಿರಾರು ವಚನಗಳು ನಮಗೆ ಲಭ್ಯವಾಗಿಲ್ಲ.ಇರುವಂತಹ ವಚನಗಳನ್ನ ಸಂರಕ್ಷಣೆ ಮಾಡುವ ನಿಟ್ಟಿನಲ್ಲಿ ಜೊತೆಗೆ ಅವನ್ನು ಇಂದಿನ ಜನಾಂಗಕ್ಕೆ ತಿಳಿಸಬೇಕೆಂಬ ಹಿನ್ನೆಲೆಯಲ್ಲಿ ಬಸವಣ್ಣನವರ ಜಯಂತಿ ಮತ್ತು ಕನ್ನಡ ರಾಜ್ಯೋತ್ಸವದ ಅಂಗವಾಗಿ ಕನ್ನಡದಲ್ಲಿ ವಚನಗಳ ಪ್ರಾಮುಖ್ಯತೆಯ ಬಗ್ಗೆ ಇಂದು ಸುಧೀರ್ಘವಾದಂತಹ ಚರ್ಚೆ ನಡೆಸಲಾಗಿದೆ ಎಂದರು.

ಪರಮಪೂಜ್ಯ ಪುಷ್ಪಗಿರಿ ಜಗದ್ಗುರುಗಳು ಸೇರಿದಂತೆ ಎಲ್ಲರೂ ಕೂಡ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ಪರಿಷತ್ತಿನ ಘನತೆಯನ್ನು ಹೆಚ್ಚಿಸಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಹಾಸನ ಜಿಲ್ಲಾ ಕದಳಿ‌ ಮಹಿಳಾ ವೇದಿಕೆ ಅಧ್ಯಕ್ಷೆ ತೀರ್ಥಕುಮಾರಿ, ಗೌರವಾಧ್ಯಕ್ಷ ಸಿ.ಎಂ.ನಿಂಗರಾಜ್, ಮಾಜಿ ತಾಲೂಕು ಪಂಚಾಯಿತಿ ಅಧ್ಯಕ್ಷ ಪರ್ವತಯ್ಯ, ಜಿಲ್ಲಾ ಕೋಶ ಅಧ್ಯಕ್ಷ ರುದ್ರಸ್ವಾಮಿ, ಮುಖ್ಯ ಶಿಕ್ಷಕ ಸಿದ್ದೇಶ್, ಯುವ ಘಟಕದ ಅಧ್ಯಕ್ಷ ಆರ್ ಎಸ್ ಮಹೇಶ್, ಹಳೇಬೀಡು ಹೋಬಳಿ ಘಟಕದ ಅಧ್ಯಕ್ಷ ವಿನುತಾ ಧನಂಜಯ್, ಉಪಾಧ್ಯಕ್ಷ ಗೀತಾ ಶಿವರಾಜ್ ಕದಳಿ ಮಹಿಳಾ ವೇದಿಕೆ ಅಧ್ಯಕ್ಷೆ ಶಶಿರೇಖಾ, ತಾಲ್ಲೂಕು ಜನಪದ ಪರಿಷತ್ತು ಅಧ್ಯಕ್ಷ ವೈ.ಎಸ್.ಸಿದ್ದೇಗೌಡ, ಪ್ರಧಾನ ಕಾರ್ಯದರ್ಶಿ ಧನಂಜಯ, ಸುರೇಶ್, ಮಮತ, ಅರವಿಂದ್ ಮತ್ತು ಅನಿತಾ ಸೇರಿದಂತೆ ಇನ್ನೂ ಮುಂತಾದವರು ಹಾಜರಿದ್ದರು.

Leave a Reply

Your email address will not be published. Required fields are marked *

× How can I help you?