
ಚಿಕ್ಕಮಗಳೂರು-ದುರ್ಬಲರು, ಅಸಹಾಯಕರು ಹಾಗೂ ನಿರ್ಗತಿಕರನ್ನು ಧರ್ಮಸ್ಥಳ ಗ್ರಾಮಾಭಿವೃಧ್ದಿ ಯೋಜನೆಗಳ ವಿವಿಧ ಸೌಲಭ್ಯಗಳು ಆರ್ಥಿಕವಾಗಿ ಸಬಲರಾಗಿಸಿ ಬದುಕನ್ನು ರೂಪಿಸಿ ನಿಸ್ವಾರ್ಥದಿಂದ ಸೇವೆ ಸಲ್ಲಿಸುತ್ತಿದೆ ಎಂದು ಶಾಸಕ ಹೆಚ್.ಡಿ.ತಮ್ಮಯ್ಯ ಹೇಳಿದರು.
ತಾಲ್ಲೂಕಿನ ದೇವಗೊಂಡನಹಳ್ಳಿ ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ವಾತ್ಸಲ್ಯ ಕಾರ್ಯಕ್ರಮದಡಿ ನಿರ್ಮಾಣಗೊಂಡ ವಾತ್ಸಲ್ಯ ಮನೆಯನ್ನು ಫಲಾನುಭವಿ ರತ್ನಮ್ಮ ಅವರಿಗೆ ಮಂಗಳವಾರ ಹಸ್ತಾಂತರಿಸಿ ಅವರು ಮಾತನಾಡಿದರು.
ಧರ್ಮಸ್ಥಳ ಗ್ರಾಮಾಭಿವೃದ್ದಿ ಟ್ರಸ್ಟ್ ವಸತಿ ರಹಿತ ನಿರ್ಗತಿಕರಿಗೆ ನಿಗಧಿತ ವೆಚ್ಚದಲ್ಲಿ ಹಾಲ್, ಅಡುಗೆ ಮನೆ, ಶೌಚಾಲಯ ಹೊಂದಿರುವ ಪುಟ್ಟಮನೆ ನಿರ್ಮಿಸಿಕೊಟ್ಟಿದೆ. ಅಲ್ಲದೇ ಬಡವರ ಪರವಾಗಿ ಅಭಿವೃದ್ದಿ ಕೈಗೊಂಡು ಅಸಹಾಯಕರಿಗೆ ಸಹಾಯ ಹಸ್ತ ಕಲ್ಪಿಸುತ್ತಿರುವುದು ಹೆಮ್ಮೆಯ ಸಂಗತಿ ಎಂದರು.

ವಾತ್ಸಲ್ಯ ಕಾರ್ಯಕ್ರಮದಲ್ಲಿ ಫಲಾನುಭವಿಗಳಿಗೆ ವಾತ್ಸಲ್ಯ ಕಿಟ್ ನೀಡುವುದರ ಜೊತೆಗೆ ಮೂಲಭೂತ ಸೌಕರ್ಯಗಳನ್ನು ಕೂಡಾ ಧರ್ಮಸ್ಥಳ ಟ್ರಸ್ಟ್ ಒದಗಿಸಿ ಸಾಮಾಜಿಕ ಸೇವೆಯಲ್ಲಿ ತನ್ನನ್ನು ತೊಡಗಿಸಿಕೊಂಡಿದೆ. ಸಮಾಜದ ನಾಗರೀಕರು ದುಡಿಮೆಯಲ್ಲಿ ಇಂತಿಷ್ಟನ್ನು ದಾನದಲ್ಲಿ ರೂಪದಲ್ಲಿ ಆಶಕ್ತರಿಗೆ ವ್ಯಯಿಸಿದರೆ ಜೀವನ ಸಾರ್ಥಕವಾದಂತೆ ಎಂದು ಶಾಸಕರು ಹೇಳಿದರು.
ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಜಿಲ್ಲಾ ನಿರ್ದೇಶಕ ಸದಾನಂದ ಬಗೇರ ಮಾತನಾಡಿ, ಜಿಲ್ಲೆಯಲ್ಲಿ ನಿರ್ಗತಿಕರು ಹಾಗೂ ಅಸಹಾಯಕರನ್ನು ಗುರುತಿಸಿ ಸುಮಾರು 18 ವಾತ್ಸಲ್ಯ ಮನೆಗಳನ್ನು 1.25 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿ ಹಸ್ತಾಂತರಿಸಿದೆ.ಆರೋಗ್ಯ ದೃಷ್ಟಿಯಿಂದ ಪ್ರತಿ ತಿಂಗಳು ಸಿರಿಧಾನ್ಯಗಳ ಪೌಡರ್‌ಗಳನ್ನು ವಿತರಿಸುವ ಜೊತೆಗೆ ತೀರಾ ಕಡುಬಡವರಿಗೆ ಮಾಶಾಸನದ ವ್ಯವಸ್ಥೆ ಕಲ್ಪಿಸುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಕಳಸಾಪುರ ಗ್ರಾ.ಪಂ. ಅಧ್ಯಕ್ಷೆ ಕೆ.ಎಚ್.ರಾಧಾ, ಸದಸ್ಯರುಗಳಾದ ನಾಗೇಗೌಡ, ಯೋಗೀಶ್, ಹರ್ಷದ್, ಮಂಜುಳಾ, ಈಶ್ವರಹಳ್ಳಿ ಗ್ರಾ.ಪಂ. ಸದಸ್ಯ ಮಧು, ಧರ್ಮಸ್ಥಳ ಟ್ರಸ್ಟ್ ತಾಲ್ಲೂಕು ಯೋಜನಾಧಿಕಾರಿ ರಮೇಶ್ ನಾಯ್ಕ್, ಕೃಷಿ ಮೇಲ್ವಿಚಾರಕ ದೀಪಕ್, ಜ್ಞಾನ ವಿಕಾಸ ಸಮನ್ವಯಾಧಿಕಾರಿ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
———ಸುರೇಶ್