ಅಜ್ಜಂಪುರ-ಸಾಹಿತ್ಯ ಕ್ಷೇತ್ರ ಸೇರಿದಂತೆ ಶಿಕ್ಷಣ, ಕ್ರೀಡೆ ಹಾಗೂ ಚಿತ್ರರಂಗದಲ್ಲೂ ವಿಶಿಷ್ಟ ಸಾಧನೆ ಮಾಡುವ ಮೂಲಕ ನಾಡಿನ ಖ್ಯಾತ ಗಣ್ಯರು ಕನ್ನಡಕ್ಕೆ ಜಾಗತಿಕ ಮನ್ನಣೆಯನ್ನು ತಂದು ಕೊಟ್ಟಿದ್ದಾರೆ ಎಂದು ಕರವೇ ಜಿಲ್ಲಾಧ್ಯಕ್ಷ ಕೆಂಪನಹಳ್ಳಿ ಅಶೋಕ್ ಹೇಳಿದರು.
ಪಟ್ಟಣದ ಸಿದ್ದರಾಮೇಶ್ವರ ವೃತ್ತದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಏರ್ಪಡಿಸಿದ್ದ 69ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕನ್ನಡ ಭಾಷೆಗೆ ಎರಡು ಸಾವಿರ ವರ್ಷಗಳ ಇತಿಹಾಸವಿದೆ. ಕನ್ನಡ ಉಳಿಸಿ ಬೆಳೆಸಲು ಕನ್ನಡ ಮನಸ್ಸು ಗಳ ಅವಶ್ಯಕತೆಯಿದೆ. ರಾಜ್ಯೋತ್ಸವಕ್ಕೆ ಮಾತ್ರ ಸೀಮಿತವಾಗದ ಕನ್ನಡ ಭಾಷೆ, ಸದಾ ನಮ್ಮ ಜೀವನುದುದ್ದ ಕ್ಕೂ ಬಳಸಿ ಬೆಳೆಸುವ ಭಾಷೆಯಾಗಬೇಕು. ನಮ್ಮ ಭಾಷೆಯ ಬಗ್ಗೆ ನಮಗೆ ಹೆಮ್ಮೆಯಿರಲಿ. ನಾಡು, ನುಡಿ, ಪರಂಪರೆ ಸಂಸ್ಕೃತಿಯನ್ನು ಎಂದಿಗೂ ಮರೆಯದಿರೋಣ ಎಂದು ಹೇಳಿದರು.
ಕನ್ನಡ ಭಾಷೆಯನ್ನು ದಿನನಿತ್ಯದ ವ್ಯವಹಾರಗಳಲ್ಲಿ ಬಳಸುವುದರಿಂದ ಮಾತ್ರ ಉಳಿಸಲು ಸಾಧ್ಯ. ಇಂದಿನ ಮಕ್ಕಳಿಗೆ ಮೊಬೈಲ್ ಬಿಡಿ, ಪುಸ್ತಕ ಹಿಡಿ ಎಂಬ ಘೋಷವಾಕ್ಯ ಆಗಬೇಕಾಗಿದೆ. ಕನ್ನಡ ಸಾಹಿತ್ಯ ಪರಂಪರೆಯ ಅರಿವು ಪ್ರತಿಯೊಬ್ಬ ಕನ್ನಡಿಗ ಹೊಂದಬೇಕಾಗಿದೆ ಎಂದರು.
ಭಾಷಾವಾರು ರಾಜ್ಯ ರಚನೆಗೊಂಡು ಮೈಸೂರು ಸಂಸ್ಥಾನವು ಮತ್ತೆ ಕರ್ನಾಟಕವಾಗಿ 69 ವರ್ಷ ಸಂದರು ಕನ್ನಡ ಕಲಿಯಿರಿ, ಕನ್ನಡ ಜಾರಿಯಾಗಲಿ ಎಂಬ ಕೂಗು ಇನ್ನೂ ಜೀವಂತವಾಗಿರೋದು ಅತ್ಯಂತ ದುಃಖಕರ ಸಂಗತಿ ಎಂದ ಅವರು ಕನ್ನಡ ನಾಡಿನ ಜನತೆಯು ಕನ್ನಡ ಭಾಷೆಯನ್ನು ನಿತ್ಯ ಬಳಕೆ ಮಾಡಿ ಕನ್ನಡ ಪ್ರೀತಿಯನ್ನು ತೋರಿಸಬೇಕಾಗಿದೆ ಎಂದರು.
ಕರವೇ ತಾಲ್ಲೂಕು ಅಧ್ಯಕ್ಷ ಮಧುಸೂದನ್ ಮಾತನಾಡಿ, ಕನ್ನಡ ಭಾಷೆಯ ಇತಿಹಾಸ ಅಮೋಘ ವಾದದ್ದು. ಬಹಳ ಹಿಂದೆಯೇ, ನಮ್ಮ ಕವಿಗಳು ಹಾಗೂ ಸಾಹಿತಿಗಳು ಕನ್ನಡ ಕಂಪನ್ನು ಹಾಡಿ ಹೊಗಳಿ ದ್ದಾರೆ. ಕನ್ನಡ ನಾಡು, ನುಡಿ ವೈವಿಧ್ಯಮಯದಿಂದ ಕೂಡಿದೆ. ಈ ಸುಂದರ ನಾಡಿನಲ್ಲಿ ವಾಸವಿರುವ ನಾವೇ ಧನ್ಯರು. ಮಕ್ಕಳು ಕನ್ನಡಾಭಿಮಾನ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕರವೇ ಜಿಲ್ಲಾ ಉಪಾಧ್ಯಕ್ಷ ಕೋಟೆ ಮಲ್ಲೇಶ್, ಪ್ರಧಾನ ಕಾರ್ಯದರ್ಶಿ ಕುಮಾರ್ ಆರ್.ಶೆಟ್ಟಿ, ಸಂಘಟನಾ ಕಾರ್ಯದರ್ಶಿ ರುದ್ರೇಶ್, ಅಜ್ಜಂಪುರ ಉಪಾಧ್ಯಕ್ಷ ಟಿ.ನವೀನ್‌ಕುಮಾರ್, ಗೌರವಾ ಧ್ಯಕ್ಷ ವೆಂಕಟೇಶ್, ಪ್ರಧಾನ ಕಾರ್ಯದರ್ಶಿ ಅಯೂಬ್ ಅಹ್ಮದ್, ಖಜಾಂಚಿ ಎಂ.ಪ್ರಸನ್ನ, ಸಂಘಟನಾ ಕಾರ್ಯದರ್ಶಿ ಎಂ.ಎಸ್.ಭರತ್, ಸದಸ್ಯರಾದ ಪ್ರಸನ್ನ, ವಿಶ್ವನಾಥ್, ಮುಖಂಡ ಇರ್ಷಾದ್ ಅಹ್ಮದ್, ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷ ರಾಘವೇಂದ್ರ, ಯುವ ನಾಯಕಿ ಕು.ರಚನ ಶ್ರೀನಿವಾಸ್ ಸೇರಿದಂತೆ ಮತ್ತಿತರರು ಹಾಜರಿದ್ದರು.