ಹೊಳೆನರಸೀಪುರ:ಪುಸ್ತಕದಲ್ಲಿರುವ ಪಾಠಗಳಷ್ಟೇ ಶಿಕ್ಷಣ ಅಲ್ಲ.ವಿವೇಕ,ಶಿಸ್ತು,ಸಂಯಮ,ನಡತೆ ಎಲ್ಲವೂ ಶಿಕ್ಷಣವೇ. ಪಠ್ಯೇತರ ಶಿಕ್ಷಣ ದಿಂದ ಕಲಿಯುವ ಶಿಕ್ಷಣದಿಂದಲೂ ಉತ್ತಮ ಬದುಕು ರೂಪಿಸಿಕೊಳ್ಳಲು ಸಾಧ್ಯ.ಆದ್ದರಿಂದ ಪುಸ್ತಕದ ಪಠ್ಯದ ಜೊತೆಗೆ ಸಾಮಾನ್ಯ ಜ್ಞಾನವನ್ನು ಬೆಳೆಸಿಕೊಳ್ಳಿ. ದಿನನಿತ್ಯದ ಕಾನೂನುಗಳ ಬಗ್ಗೆ ತಿಳಿದುಕೊಳ್ಳಿ ಎಂದು ಗ್ರಾಮಾಂತರಠಾಣೆ ಎಸ್.ಐ. ಪಿ. ರಮೇಶ್ ಕುಮಾರ್ ಸಲಹೆ ನೀಡಿದರು.
ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಗುರುವಾರ ಆಯೋಜಿಸಿದ್ದ “ಮಧುರ ಬಾಂಧವ್ಯ, ಹಳೆ ಬೇರು, ಹೊಸ ಚಿಗುರು” ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕಾನೂನುಗಳಿರುವುದು ಎಲ್ಲರ ರಕ್ಷಣೆಗಾಗಿ.ಕಾನೂನು ಪಾಲಿಸಿದರೆ ನಮಗೆ ಯಾವುದೇ ತೊಂದರೆ ಆಗುವುದಿಲ್ಲ.ಹೆಲ್ಮೆಟ್ ಧರಿಸಿ ಎನ್ನುವುದು ನಿಮ್ಮ ತಲೆಗಳ ರಕ್ಷಣೆಗಾಗಿಯೇ ಹೊರತು ಪೊಲೀಸರ ತಲೆಗಳ ರಕ್ಷಣೆಗಾಗಿ ಅಲ್ಲ ಎಂದು ತಿಳಿದುಕೊಂಡು ಕಡ್ಡಾಯವಾಗಿ ಹೆಲ್ಮೆಟ್ ಧರಿಸಿ.ಸಂಚಾರಿ ನಿಯಮ ಪಾಲಿಸಿ ಅಪಘಾತ ತಪ್ಪಿಸಿ. ಅತಿವೇಗ, ತ್ರಿಬಲ್ ರೈಡಿಂಗ್ ಮಾಡಬೇಡಿ. ಸಂಚಾರಿ ನಿಯಮಗಳನ್ನು ಉಲ್ಲಂಘಿಸಬಾರದು.
ನಮ್ಮ ಇಲಾಖೆಯ ಮಾಹಿತಿಯ ಪ್ರಕಾರ ಅಪಘಾತಕ್ಕೆ ಅತಿವೇಗ ಹಾಗೂ ಸಂಚಾರಿನಿಯಮ ಉಲ್ಲಂಘನೆ, ಕುಡಿದು ವಾಹನ ಚಾಲನೆ ಕಾರಣವಾಗಿದೆ. ಆದ್ದರಿಂದ ಎಚ್ಚರಿಕೆಯಿಂದ ವಾಹನಗಳನ್ನು ಓಡಿಸಿ. ವೇಗವಾಗಿ ಬೈಕ್ ಓಡಿಸಬೇಕು ಎನ್ನುವ ಹುಚ್ಚಿರುವವರು ಆರ್ಗನೈಸ್ದ್ ರೇಸ್ ಟ್ರಾಕ್ನಲ್ಲಿ ಭಾಗವಹಿಸಿ. ಆದರೆ ರಸ್ತೆಯಲ್ಲಿ ವೇಗವಾಗಿ ಬೈಕ್ ಓಡಿಸಿದರೆ ನಿಮಗಾರೂ ಬಹುಮಾನ ನೀಡಲ್ಲ. ಪ್ರಾಣ ಹೋಗುವ ಅಪಾಯ ಇರುತ್ತದೆ ಎಂದು ಎಚ್ಚರಿಸಿದರು.
ಚಾಮರಾಜನಗರದ ಪದವಿ ಕಾಲೇಜಿಗೆ ವರ್ಗಾವಣೆಗೊಂಡಿರುವ ಇಂಗ್ಲಿಷ್ ಪ್ರಾಧ್ಯಾಪಕ ಜೆ.ಜಿ. ನಟರಾಜ್ ಮಾತನಾಡಿ, ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಇಂಗ್ಲೀಷ್ ಕಬ್ಬಿಣದ ಕಡಲೆ ಎನ್ನುತ್ತಾರೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳೇ ಹೆಚ್ಚಿರುವ ನಮ್ಮ ಕಾಲೇಜಿನ ವಿದ್ಯಾರ್ಥಿಗಳು ಇಂಗ್ಲೀಷ್ ಭಾಷೆಯಲ್ಲಿ ಶೇ. 98 ಫಲಿತಾಂಶ ತಂದುಕೊಟ್ಟು ನನ್ನ ಹಾಗೂ ನಮ್ಮ ಕಾಲೇಜಿನ ಗೌರವವನ್ನು ಹೆಚ್ಚಿಸಿದ್ದಾರೆ.
ವಿದ್ಯಾರ್ಥಿಗಳು ತಪ್ಪು ಮಾಡಿದಾಗ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಂತೆ ದಂಡಿಸಿದಂತೆ ದಂಡಿಸಿದ್ದರೂ ಮರುಮಾತನಾಡದೆ ಕಲಿತಿದ್ದರಿಂದ ಉತ್ತಮ ಫಲಿತಾಂಶ ಬಂದಿದೆ ಎಂದರು.
ಐಪಿಸ್ ಅಧಿಕಾರಿ ಡಿ.ವೈ.ಎಸ್,ಪಿ ಶಾಲು ಮಾತನಾಡಿ, ಸಾಧನೆ ಮಾಡಬೇಕೆಂದರೆ ನಮ್ಮ ಅಮೂಲ್ಯ ಸಮಯವನ್ನು ಮೀಸಲಿಟ್ಟು, ಬೇರೆ ಯೋಚನೆಗಳತ್ತ ಹೊರಳದೆ ನಮ್ಮ ಗುರಿ ತಲುಪಲು ಬೇಕಾದ ಸಿದ್ದತೆ ಮಾಡಿಕೊಂಡರೆ ಸಾಧನೆ ಸಾಧ್ಯ ಎಂದರು.
ಪ್ರಾಂಶುಪಾಲ ಎಸ್.ಆರ್.ಮೂರ್ತಿ ಅಧ್ಯಕ್ಷತೆ ವಹಿಸಿದ್ದರು.
ಇತಿಹಾಸ ಉಪನ್ಯಾಸಕ ರವಿಕುಮಾರ್ ಸ್ವಾಗತಿಸಿದರು. ಪ್ರೋ ಎಚ್.ವಿ.ಪೂರ್ಣಿಮಾ, ಪ್ರೋ ಮಂಜುನಾಥ್ ಎಂ.ಎಸ್., ಪೂರ್ಣಿಮಾ , ಡಾ. ಉಮೇಶ್, ಲೋಕೇಶ್, ದಿವ್ಯಾಮಣಿ, ಶಿವಕುಮಾರ, ಇತರರು ಭಾಗವಹಿಸಿದ್ದರು.
————–ವಸಂತ್ ಕುಮಾರ್