ಕೊರಟಗೆರೆ-ರಾಜ್ಯ ಪತ್ರಗಾರ ಇಲಾಖೆಯು ಚಾರಿತ್ರಿಕ ಮಹತ್ವದ ದಾಖಲೆಗಳನ್ನು ಸಂಗ್ರಹಿಸಿ ಸಂರಕ್ಷಿಸುವುದರ ಜೊತೆಗೆ ಸರ್ಕಾರದ ಸಚಿವಾಲಯದ ವಿವಿಧ ಇಲಾಖೆಗಳ ಚಾಲ್ತಿ ದಾಖಲೆಗಳ ನಿರ್ವಹಣೆ ಮಾಡುತ್ತಿದ್ದು ಸಂಶೋಧನ ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ದಿಗೆ ಸಹಕಾರಿಯಾಗಿದೆ ಎಂದು ಕರ್ನಾಟಕ ರಾಜ್ಯ ಪತ್ರಗಾರ ಇಲಾಖೆಯ ನಿರ್ದೇಶಕ ಡಾ.ಗವಿ ಸಿದ್ದಯ್ಯ ತಿಳಿಸಿದರು.
ಅವರು ಕೊರಟಗೆರೆ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬೆಂಗಳೂರು ಕರ್ನಾಟಕ ರಾಜ್ಯ ಪತ್ರಗಾರ ಇಲಾಖೆ ಹಾಗೂ ಕೊರಟಗೆರೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಇತಿಹಾಸ ವಿಭಾಗ ಇವರ ಸಹಯೋಗದಲ್ಲಿ ಏರ್ಪಡಿಸಿದ್ದ ಎರಡು ದಿನಗಳ ಐತಿಹಾಸಿಕ ದಾಖಲೆಗಳ ಮತ್ತು ಛಾಯಾಚಿತ್ರಗಳ ಪ್ರದರ್ಶನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಚಾರಿತ್ರಿಕ ದಾಖಲೆಗಳಿಂದಲೇ ಮುಂದಿನ ಪೀಳಿಗೆಯ ಅಭಿವೃಧ್ದಿ ಸಾಧ್ಯ ಎಂದು ಅರಿತ ಸರ್ಕಾರದ ಆಡಳಿತ ಎಲ್ಲಾ ಇಲಾಖೆಗಳ ದಾಖಲೆಗಳನ್ನು ಸಂರಕ್ಷಿಸಿ ಅಧ್ಯಯನಶೀಲರಿಗೆ ಒದಗಿಸುವ ಕೆಲಸ ಮಾಡುತ್ತಿದೆ.ಇದರೊಂದಿಗೆ ಲಭ್ಯ ದಾಖಲೆಗಳನ್ನು ಡಿಜಿಟಿಲೀಕರಣ ಮಾಡಲಾಗುತ್ತಿದ್ದು ಸಾವಿರಾರು ಐತಿಹಾಸಿಕ ಮಹತ್ವವುಳ್ಳ ದಾಖಲೆಗಳನ್ನು ಸ್ಕ್ಯಾನ್ ಮಾಡಲಾಗಿದೆ.ಇವುಗಳಿಗೆ ಸರ್ಚ್ ಇಂಜಿನ್ ಎಂಬ ಹುಡುಕುವ ವಿಧಾನದಿಂದ ಸಂಶೋಧಕರು ಹಾಗೂ ಸಾರ್ವಜನಿಕರು ಕ್ಷಣ ಮಾತ್ರದಲ್ಲಿ ದಾಖಲೆಗಳನ್ನು ಪತ್ತೆ ಹಚ್ಚಲು ಸಾಧ್ಯವಾಗಿದೆ.ಪತ್ರಗಾರ ಇಲಾಖೆಯ ದಾಖಲೆಗಳ ಗಣಕೀಕೃತವಾದ ಹಾಗೂಸ್ಕ್ಯಾನ್ ಮಾಡಿದ ಮಾಹಿತಿಯೂ ಡಿಜಿಟಲ್ ಮಾಧ್ಯಮದಲ್ಲಿ ಸಾರ್ವಜನಿಕರ ಹಾಗೂ ಸಂಶೋಧಕರ ಉಪಯೋಗಕ್ಕೆ ಲಭ್ಯವಿದ್ದು ಇತಿಹಾಸ ಮಾಹಿತಿಯ ಪುಟಗಳು ಇಲಾಖೆಯ ಜಾಲತಾಣದಲ್ಲಿ ಲಭ್ಯವಾಗುತ್ತಿದೆ ಎಂದು ತಿಳಿಸಿದರು.
ರಾಜ್ಯ ಪತ್ರಗಾರ ಇಲಾಖೆಯಲ್ಲಿ ಸರ್ಕಾರದ ಸಚಿವಾಲಯದ ಕಡತಗಳು, ರಾಜ್ಯ ಪತ್ರಗಳು. ವಾರ್ಷಿಕ ವರದಿಗಳು, ಪರಿಷತ್ತಿನ ಸದಸ್ಯರ ಭಾಷಣಗಳು, ಕಾರ್ಯಕಲಾಪಗಳ ವರದಿಗಳು, ನಕ್ಷೆಗಳು ಮೊದಲಾದ ಸರ್ಕಾರಿ ದಾಖಲೆಗಳ ಜೊತೆಯಲ್ಲಿ ಖಾಸಗಿ ಸಂಘ-ಸಂಸ್ಥೆ ಮತ್ತು ವ್ಯಕ್ತಿಗಳ ಬಳಿಯಿರುವ ನಾಡು-ನಡಿಗಾಗಿ ಸೇವೆ ಸಲ್ಲಿಸಿದ ಗಣ್ಯವ್ಯಕ್ತಿಗಳ ಧ್ವನಿ ಇತಿಹಾಸ, ಛಾಯಾಚಿತ್ರಗಳು, ಕಾಗದ ಪತ್ರಗಳು, ದಿನಪತ್ರಿಕೆಗಳು, ಹಸ್ತಪ್ರತಿಗಳು, ಕಡತಗಳನ್ನು ಪಡೆದು ದಾಖಲೆಗಳನ್ನು ಕೊಟ್ಟವರ ಹೆಸರಿನಲ್ಲಿ ಸಂರಕ್ಷಣೆ ಮಾಡುತ್ತಿದೆ.
ರಾಜ್ಯ ಪತ್ರಗಾರ ಇಲಾಖೆ ಮೈಸೂರು ಒಡೆಯರ ಆಡಳಿತದ ಅವದಿಯ ದಾಖಲೆಗಳನ್ನು ಒಳಗೊಂಡಂತೆ ಪ್ರಸ್ತುತ ಸರ್ಕಾರದ ದಾಖಲೆಗಳನ್ನು ಸಂಗ್ರಹಿಸಿಟ್ಟುಕೊಂಡಿದೆ.ಇಲಾಖೆಯ ಸಂಗ್ರಹದಲ್ಲಿರುವ ಐತಿಹಾಸಿಕ ದಾಖಲೆಗಳು ಸೇರಿದಂತೆ ಎಲ್ಲಾ ಬಗೆಯ ದಾಖಲೆಗಳನ್ನು ಪರಾಮರ್ಶಿಸಲು ಅಥವಾ ನಕಲು ಪ್ರತಿಗಳನ್ನು ಪಡೆಯಬೇಕೆಂದರೆ ಸೇವಾ ಸಿಂಧು ಅನ್ ಲೈನ್ ಮೂಲಕ ನಿಗದಿತ ನಮೂನೆಯಲ್ಲಿ ಇಲಾಖೆಯ ನಿರ್ದೇಶಕರಿಗೆ ಅರ್ಜಿ ಸಲ್ಲಿಸಬೇಕು. ವಿಶ್ವವಿದ್ಯಾಲಯಗಳಲ್ಲಿ ಸಂಶೋಧನೆ ಮಾಡುವ ಸಂಶೋಧನಾ ವಿದ್ಯಾರ್ಥಿಗಳು ತಮ್ಮ ಮಾರ್ಗದರ್ಶಕರಿಂದ ಪರಿಚಯ ಪತ್ರವನ್ನು ಪಿಹೆಚ್‍ಡಿ ನೋಂದಾಯಿತ ಪ್ರತಿಯನ್ನು ಹಾಗೂ ಇತ್ತೀಚಿನ ಭಾವಚಿತ್ರಗಳೊಂದಿಗೆ ವಿಶ್ವವಿದ್ಯಾಲಯದ ಗುರುತಿನ ಚೀಟಿಯೊಂದಿಗೆ ಪತ್ರಗಾರಕ್ಕೆ ಅರ್ಜಿಸಲ್ಲಿಸಿ ನಿರ್ದೇಶಕರ ಒಪ್ಪಿಗೆಯ ಅನುಮತಿ ಪತ್ರ ಪಡೆದ ನಂತರ ಸಂಶೋದಕರಿಗೆ ಪತ್ರಗಾರದಲ್ಲಿ ದಾಖಲೆಗಳನ್ನು ಪರಾಮರ್ಶಿಸಲು ಅನುಮತಿ ನೀಡಲಾಗುವುದು ಎಂದು ಮಾಹಿತಿ ನೀಡಿದರು.
ಕೊರಟಗೆರೆ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಿ.ಎನ್. ಈರಪ್ಪ ನಾಯ್ಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಾಲೇಜಿನಲ್ಲಿ ಏರ್ಪಡಿಸಿರುವ ಐತಿಹಾಸಿಕ ದಾಖಲೆಗಳ ಮತ್ತು ಛಾಯಾಚಿತ್ರಗಳ ಪ್ರದರ್ಶನ ಕಾರ್ಯಕ್ರಮ ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃಧ್ದಿಗೆ ಪೂರಕವಾಗಿದ್ದು ಎರಡು ದಿನಗಳ ಕಾಲ ನಡೆಯುವ ಪ್ರದರ್ಶನ ಸಾರ್ವಜನಿಕರು ಸೇರಿದಂತೆ ತಾಲೂಕಿನ ವಿವಿಧ ಶಾಲಾ ಕಾಲೇಜು ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆಯಲು ವ್ಯವಸ್ಥೆಮಾಡಲಾಗಿದ್ದು ಸಂಶೋದನೆಯ ವಿದ್ಯಾರ್ಥಿಗಳು ಪತ್ರಗಾರ ಇಲಾಖೆ ಯಿಂದ ಐತಿಹಾಸಿಕ ದಾಖಲಾತಿಗಳು ಪಡೆಯುವ ಮೂಲಕ ತಮ್ಮ ಶೈಕ್ಷಣಿಕ ಅಭಿವೃದ್ದಿ ಪಡೆಯುವಂತೆ ತಿಳಿಸಿದ ಅವರು ಪ್ರತಿಯೊಬ್ಬರೂ ಇತಿಹಾಸವನ್ನು ಸಂಗ್ರಹಿಸಿ ಶೇಕರಣೆ ಮಾಡಬೇಕು ಎಂದರು.
ಕಾರ್ಯಕ್ರಮದಲ್ಲಿ ಉಪನಿರ್ದೇಶಕ ಎನ್. ಮಹೇಶ್, ಕಾಲೇಜಿನ ಇತಿಹಾಸ ವಿಭಾಗದ ಮುಖ್ಯಸ್ಥರಾದ ಡಾ.ಡಿ.ಆರ್.ರೇಣುಕಾ, ಅರ್ಥಶಾಸ್ತ್ರ ವಿಭಾಗದ ಡಾ.ಡಿ.ಎಸ್.ದೀಪಾ. ಡಾ.ಚೇತಾಲಿ, ಡಾ.ಶಿವರಾಮಯ್ಯ, ಡಾ.ಸಿದ್ದಗಂಗಯ್ಯ, ಡಾ.ರಮೇಶ್ ಕಾಲೇಜು ಅಭಿವೃದ್ದಿ ಸಮಿತಿಯ ಸದಸ್ಯರಾದ ಎನ್.ಪದ್ಮನಾಭ್. ಚಿದಾನಂದ್, ಬಾಲಾಜಿದರ್ಶನ್, ಪತ್ರಕರ್ತ ಸಂಘದ ಅಧ್ಯಕ್ಷ ಕೆ.ವಿ.ಪುರುಷೋತ್ತಮ್, ಯುವ ಮುಖಂಡ ವಿನಯ್‍ಕುಮಾರ್, ಪತ್ರಕರ್ತರಾದ ಎನ್.ಮೂರ್ತಿ, ನಾಗರಾಜು, ಹರೀಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
————–ಶ್ರೀನಿವಾಸ್ ಕೊರಟಗೆರೆ